ಕಾಲೇಜ್‌ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಹತ್ಯೆ : ಬಿಜೆಪಿ, ಎಬಿವಿಪಿ ಪ್ರತಿಭಟನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಎಂಬಾಕೆಯನ್ನು ಮುಸ್ಲಿಂ ಯುವಕನೊಬ್ಬ ಕಾಲೇಜು ಕ್ಯಾಂಪಸ್‌ಗೆ ನುಗ್ಗಿ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಲವ್‌ ಜಿಹಾದ್‌ ಕೃತ್ಯ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ.
ಪ್ರೀತಿಸಲು‌ ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಫಯಾಜ್ ಎಂಬಾತ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾಳನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಾದ ಒಂದೇ ಗಂಟೆಯಲ್ಲಿ ವಿದ್ಯಾನಗರ ಠಾಣೆ‌ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕೃತ್ಯವನ್ನು ಬಿಜೆಪಿ, ಎಬಿವಿಪಿ ಮತ್ತು ಹಿಂದು ಸಂಘಟನೆಗಳು ಖಂಡಿಸಿವೆ. ಪ್ರಕರಣ ಸಂಬಂಧ ಬಿಜೆಪಿ, ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಎಬಿವಿಪಿ, ಹಿಂದೂ ಸಂಘಟನೆ ಪ್ರತಿಭಟನೆಗಿಳಿದಿದ್ದು, ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿವೆ.
ನೇಹಾ ಕೊಲೆ ಖಂಡಿಸಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಮುಂಭಾಗ ಎಬಿವಿಪಿ ಕಾರ್ಯಕರ್ತರು ನಿನ್ನೆ ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಆರೋಪಿ ಫಯಾಜ್​ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ. ಇನ್ನೊಂದೆಡೆ ಎನ್‌ಎಸ್‌ಯುಐ ಕಾರ್ಯಕರ್ತರು ಕೂಡ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮುಂಭಾಗ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಆರೋಪಿ ಫಯಾಜ್​ನನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದ್ದಾರೆ.
ಹಿಂದೂ ಸಂಘಟನೆ ಕಾರ್ಯಕರ್ತರು ವಿದ್ಯಾನಗರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಆರೋಪಿ ಮನೆಗೆ ಬೆಂಕಿ ಹಚ್ಚಬೇಕೆಂದು ಆಕ್ರೋಶ ಹೊರಹಾಕಿದರು. ಆರೋಪಿ ಪರ ಯಾವ ವಕೀಲರು ವಕಾಲತ್ತು ಮಾಡಬಾರದು, ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕೆಂದು ಆಗ್ರಹಿಸಿದರು.
ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಬಿಜೆಪಿ, ಅರಾಜಕತೆಯೇ ಆಡಳಿತದ ಧ್ಯೇಯ – ಕಾನೂನು ಸುವ್ಯವಸ್ಥೆ ಮಂಗಮಾಯ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರ. ಸಿಎಂ ಸಿದ್ದರಾಮಯ್ಯನವರೇ ಇದು ಅರಾಜಕತೆಯ ಹಾಗೂ ಓಲೈಕೆ ಆಡಳಿತದ ಪ್ರತಿಫಲವಾಗಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಎಂಬಾಕೆಯನ್ನು ಫಯಾಜ್ ಇರಿದು ಸಾಯಿಸಿದ್ದಾನೆ. ನಿಮ್ಮ ತುಷ್ಟೀಕರಣದ ಆಡಳಿತಕ್ಕೆ ಇನ್ನೆಷ್ಟು ಅಮಾಯಕ ಹಿಂದೂಗಳನ್ನು ಬಲಿ ಹಾಕುತ್ತೀರಿ ಎಂಬುದಕ್ಕೆ ಉತ್ತರ ನೀಡಿ ಪ್ರಶ್ನಿಸಿದೆ.







































































error: Content is protected !!
Scroll to Top