ಸಾಲ ವಸೂಲಿಗಾಗಿ ಬೆದರಿಕೆ – ಕಾನೂನಿನ ರಕ್ಷಣೆ

ಸಾಲ ಪಡೆದ ವ್ಯಕ್ತಿ ತನ್ನ ಸಾಲವನ್ನು ಮರುಪಾವತಿ ಮಾಡಬೇಕಾದ ಕಾನೂನುಬದ್ಧ ಹೊಣೆಗಾರಿಕೆಯನ್ನು ಹೊಂದಿರುತ್ತಾನೆ. ಆದರೆ ಸಾಲ ನೀಡಿದ ವ್ಯಕ್ತಿ ಅಥವಾ ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ವಸೂಲಿಗಾಗಿ ಸಾಲಗಾರನ ಮನೆಗೆ ಬಂದು ಕಿರುಕುಳ ನೀಡುವುದು, ಬೆದರಿಸುವುದು, ಬಲಾತ್ಕಾರವಾಗಿ ಚೆಕ್ ಅಥವಾ ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿವುದು ಮುಂತಾದ ಕ್ರಮಗಳು ಕಾನೂನುಬಾಹಿರ ಕೃತ್ಯವಾಗಿರುತ್ತದೆ. ಬದಲಾಗಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಖಾಸಗಿ ಹಣಕಾಸಿನ ಸಂಸ್ಥೆಯವರು ಸಾಲವನ್ನು ನೀಡುವ ಸಂಧರ್ಭದಲ್ಲಿಯೇ ಸಾಲ ನೀಡಿದ ಬಗ್ಗೆ ಸರಿಯಾದ ದಾಖಲೆಗಳನ್ನು ಸಾಲ ಪಡೆಯುವ ವ್ಯಕ್ತಿಯಿಂದ ಕಾನೂನಿನ ನಿಯಮಾನುಸಾರವಾಗಿ ಪಡೆದುಕೊಂಡು ನಂತರ ಅಗತ್ಯವಿದ್ದಲ್ಲಿ ಕಾನೂನಿನ ಪ್ರಕಾರ ನ್ಯಾಯಾಲಯದ ಮುಖಾಂತರ ಸಾಲವನ್ನು ವಸೂಲು ಮಾಡಬೇಕಾಗಿರುತ್ತದೆ.

ಕಾನೂನಿನ ನಿಯಮಾನುಸಾರದ ಪ್ರಕಾರದ ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಲೇವಾದೇವಿ ವ್ಯವಹಾರವನ್ನು ವೃತ್ತಿಯಾಗಿ ಅಥವಾ ಹಣಕಾಸು ವ್ಯವಹಾರವಾಗಿ ನಡೆಸಲು ಸರ್ಕಾರದಿಂದ ಸೂಕ್ತ ಲೈಸನ್ಸ್ ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಲೇವಾದೇವಿ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣಗೊಳಿಸುವ ಮತ್ತು ಮುಗ್ದ ಸಾಲಗಾರರಿಗೆ ಸಾಕಷ್ಟು ರಕ್ಷಣೆಯನ್ನು ನೀಡುವ ಉದ್ದೇಶದಿಂದ ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961 ಎಂಬ ಕಾನೂನು ಸಹಾ ಜಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಸರಕಾರದಿಂದ ಸೂಕ್ತ ಲೈಸೆನ್ಸ್ ಪಡೆಯದೆ ಲೇವಾದೇವಿ ವ್ಯವಹಾರವನ್ನು ನಡೆಸಿದ ಪಕ್ಷದಲ್ಲಿ ಅಂಥಹ ವ್ಯವಹಾರವನ್ನು ಕಾನೂನು ಬಾಹಿರ ಮತ್ತು ಅಕ್ರಮ ವ್ಯವಹಾರವೆಂದು ಪರಿಗಣಿಸಲಾಗುತ್ತದೆ. ಮಾತ್ರವಲ್ಲದೆ ಸರಕಾರವು ಕಾನೂನುಬದ್ಧವಾಗಿ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಬಡ್ಡಿ ವಿಧಿಸಿ ಸಾಲವನ್ನು ವಸೂಲು ಮಾಡುವ ಕ್ರಮವು ಸಹಾ ಕಾನೂನುಬಾಹಿರವಾದ ಕೃತ್ಯವಾಗಿರುತ್ತದೆ.

ಆದುದರಿಂದ ಬೆದರಿಕೆ ಮತ್ತು ಬಲಾತ್ಕಾರವಾಗಿ ಯಾವುದೇ ವ್ಯಕ್ತಿ ಅಥವಾ ಖಾಸಗಿ ಹಣಕಾಸು ಸಂಸ್ಥೆಯವರು ಅಧಿಕ ಬಡ್ಡಿಯೊಂದಿಗೆ ಸಾಲವನ್ನು ವಸೂಲು ಮಾಡಲು ಪ್ರಯತ್ನಿಸಿದಲ್ಲಿ ಅಂತಹ ಪ್ರಕರಣದ ವಿರುದ್ಧ ಸರಕಾರ ಮತ್ತು ಸರಕಾರದ ಪೋಲಿಸ್, ಸಹಕಾರಿ ಇಲಾಖೆ ಮತ್ತಿತರ ಇಲಾಖಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡುವ ಮೂಲಕ ರಕ್ಷಣೆಯನ್ನು ಪಡೆಯಬಹುದಾಗಿದೆ. ಒಂದು ವೇಳೆ ಸ್ಥಳೀಯ ಪೋಲಿಸ್ ಮತ್ತಿತರ ಇಲಾಖಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಮತ್ತು ದೂರುದಾರರಿಗೆ ಸೂಕ್ತ ರಕ್ಷಣೆಯನ್ನು ನೀಡುವಲ್ಲಿ ವಿಫಲರಾದಲ್ಲಿ ಅಥವಾ ನಿರ್ಲಕ್ಷತನ ತೋರಿಸಿದಲ್ಲಿ ಆ ಕೂಡಲೇ ವಿಷಯವನ್ನು ಅಂತಹ ಇಲಾಖಾಧಿಕಾರಿಗಳ ಮೇಲಾಧಿಕಾರಿಗಳಿಗೆ ತಿಳಿಸುವ ಮೂಲಕ ಅಥವಾ ಸಂಬಂಧಪಟ್ಟ ಸರಹದ್ದಿನ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸುವ ಮೂಲಕ ಸೂಕ್ತ ರಕ್ಷಣೆಯನ್ನು ಪಡೆಯಬಹುದಾಗಿದೆ.

ಈ ಕಾರಣದಿಂದ ಯಾವುದೇ ವ್ಯಕ್ತಿಯು ಲೇವಾದೇವಿದಾರರಿಂದ ಅಥವಾ ಲೇವಾದೇವಿ ಸಂಸ್ಥೆಯಿAದ ಸಾಲವನ್ನು ಪಡೆಯುವ ಸಂಧರ್ಭದಲ್ಲಿ ತಾವು ಸಹಿ ಮಾಡಿ ನೀಡಬೇಕಾಗಿರುವ ದಾಖಲೆಗಳ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿರುತ್ತದೆ. ಮಾತ್ರವಲ್ಲದೆ ಸಾಲದ ಭಧ್ರತೆಗಾಗಿ ಭರ್ತಿ ಮಾಡದ ದಾಖಲೆ ಮತ್ತು ಚೆಕ್‌ಗೆ ಸಹಿ ಮಾಡಿ ನೀಡುವ ಹವ್ಯಾಸವು ಸಹಾ ತುಂಬಾ ಅಪಾಯಕಾರಿ ಹವ್ಯಾಸವಾಗಿರುತ್ತದೆ.

















































error: Content is protected !!
Scroll to Top