ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ದಾಖಲು
ಮರಣೋತ್ತರ ಪರೀಕ್ಷೆಗಾಗಿ ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರ ತೆಗೆದ ಪೊಲೀಸರು
ಮಂಗಳೂರು: ಕೋಟ್ಯಂತರ ರೂ. ಆಸ್ತಿ ಕಬಳಿಸಲು ಪುತ್ರಿ ತನ್ನ ಗೆಳೆಯನ ಜೊತೆ ಸೇರಿ ತಂದೆಯನ್ನೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ತಂದೆಯ ಸಾವಿನ ಎರಡು ತಿಂಗಳ ಬಳಿಕ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ತಿಂಗಳ ಹಿಂದೆ ಕೊಟ್ಟಾರ ಕ್ರಾಸ್‌ನಲ್ಲಿ ವಾಸವಿದ್ದ ಅಲ್ಬರ್ಟ್ ರೇಗೊ ಎಂಬವರು ಮೃತಪಟ್ಟಿದ್ದರು. ಅಲ್ಬರ್ಟ್ ಅವರ ನಾಲ್ವರು ಮಕ್ಕಳ ಪೈಕಿ ಮಾಯಾ ರೆಗೊ ಎಂಬಾಕೆ ಅವರ ಜೊತೆಗೆ ವಾಸಿಸುತ್ತಿದ್ದಳು. ಅಲ್ಬರ್ಟ್ ಅವರು ತಮ್ಮ ಮಕ್ಕಳಿಗಾಗಿ ಸುಮಾರು ಎಂಬತ್ತು ಕೋಟಿ ಮೌಲ್ಯದ ಆಸ್ತಿ ಮಾಡಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಆ ಆಸ್ತಿಯನ್ನು ಲಪಟಾಯಿಸಲು ಮಾಯಾ ತನ್ನ ಸ್ನೇಹಿತನ ಜೊತೆ ಸೇರಿ ಸ್ವಂತ ತಂದೆಯನ್ನೇ ಕೊಲೆ ಮಾಡಿರುವ ಸಂದೇಹ ಇದೆ ಎಂದು ಅಲ್ಬರ್ಟ್ ಆಪ್ತರು ಪೊಲೀಸರಿಗೆ ದೂರು ನೀಡಿರುವುದಾಗಿದೆ.
ಜುಲೈ 19ರಂದು ಅಲ್ಬರ್ಟ್ ಮೃತಪಟ್ಟಿದ್ದರು. ಈ ವಿಷಯವನ್ನು ಮಾಯಾ ಹತ್ತಿರದ ಮನೆಯವರು, ದೂರದ ಸಂಬಂಧಿಗಳು, ಅಲ್ಬರ್ಟ್ ಆಪ್ತರಿಗೆ ತಿಳಿಸಿದೆ ಶವವನ್ನು ದೆರೇಬೈಲ್ ಚರ್ಚ್‌ನ ಜನನ ಭೂಮಿಯಲ್ಲಿ ಮಣ್ಣು ಮಾಡಿದ್ದಳು. ಜೊತೆಗೆ ಶವವನ್ನು ಹತ್ತಿರದಲ್ಲೇ ಇದ್ದ ಎಜೆ ಆಸ್ಪತ್ರೆಗೆ ಒಯ್ಯದೆ ದೂರದ ಬೊಂದೇಲ್‌ನಲ್ಲಿರುವ ಆಸ್ಪತ್ರೆಗೆ ಕೊಂಡೊಯ್ದು ಡೆತ್ ಸರ್ಟಿಫಿಕೇಟ್ ಪಡೆದಿದ್ದಾಳೆ. ಹಾಗೆಯೇ ರೆಗೋ ಮರಣದ ನಂತರ ಮಾಯಾ ನಡವಳಿಕೆಯಲ್ಲೂ ಸಾಕಷ್ಟು ಸಂಶಯಾಸ್ಪದ ಮತ್ತು ರಹಸ್ಯವಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ರೆಗೋ ಅವರ ಮರಣ ಪ್ರಮಾಣಪತ್ರಕ್ಕಾಗಿ ಆಕೆ ಪೊಲೀಸ್ ಅಧಿಕಾರಿ, ಪೊಲೀಸರ ನೆರವು ಪಡೆದಿದ್ದಾಗಿಯೂ ಮಾತುಗಳು ಕೇಳಿ ಬರುತ್ತಿವೆ. ತಂದೆಯ ಆಸ್ತಿಯಲ್ಲಿ ಹೆಚ್ಚಿನ ಪಾಲು ಪಡೆಯುವ ದುರುದ್ದೇಶದಿಂದ ಆಕೆ ಬಲವಂತವಾಗಿ ವಿಲ್ ಬರೆಸಿದ್ದಳು ಎನ್ನಲಾಗುತ್ತಿದೆ. ರೆಗೊ ಅವರ ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆ.
ದೂರಿನ ಆಧಾರದ ಮೇಲೆ ಮಾಯಾ ರೇಗೋ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರುತನಿಖೆ ಆರಂಭಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಹೊರತರಲು, ತಹಸೀಲ್ದಾರ್ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ಸಮ್ಮುಖದಲ್ಲಿ ದೇರೆಬೈಲ್ ಚರ್ಚ್‌ನ ದಫನ ಭೂಮಿಯಿಂದ ಆಲ್ಬರ್ಟ್ ರೇಗೋ ಅವರ ಶವವನ್ನು ಎರಜು ತಿಂಗಳ ಬಳಿಕ ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿ ಬಂದ ನಂತರವೇ ಸಾವಿನ ಅಸಲಿ ಕಾರಣ ಬಯಲಾಗಲಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
























