ನಗರಸಭೆ ಉಪಾಧ್ಯಕ್ಷೆಯ ಕುಟುಂಬದ ನಾಲ್ವರ ಹತ್ಯೆ

ಗದಗ : ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ತಡರಾತ್ರಿ ನಡೆದಿದೆ. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ (27), ಸಂಬಂಧಿಕರಾದ ಪರಶುರಾಮ (55), ಅವರ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು. ಸುನಂದಾ ಬಾಕಳೆ ಪುತ್ರ ಕಾರ್ತಿಕ್​ ಅವರ ಮದುವೆ ತಯಾರಿ ಸಂಬಂಧ ಏಪ್ರಿಲ್​ 17ರಂದು ಸಂಬಂಧಿಕರಾದ ಪರಶುರಾಮ, ಲಕ್ಷ್ಮೀ, ಆಕಾಂಕ್ಷಾ ಕೊಪ್ಪಳದಿಂದ ಗದಗ ನಗರಕ್ಕೆ ಆಗಮಿಸಿದ್ದಾರೆ. ಗುರುವಾರ ರಾತ್ರಿ ಲಕ್ಷ್ಮೀಯವರ ಹುಟ್ಟುಹಬ್ಬವನ್ನು ಕುಟುಂಬಸ್ಥರು ಆಚರಿಸಿದ್ದಾರೆ. ಬಳಿಕ ಪರಶುರಾಮ ಕುಟುಂಬ ಮನೆಯ ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿತ್ತು.
ತಡರಾತ್ರಿ ಪರಶುರಾಮ ಕುಟುಂಬ ಮಲಗಿದ್ದ ಕೋಣೆ ಗಾಜಿನ ಕಿಟಕಿ ಬಾಗಿಲನ್ನು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೂವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಿಟಿಕಿ ಒಡೆದ ಮತ್ತು ಕಿರುಚಾಟದ ಸದ್ದು ಕೇಳಿ ಕೆಳಗಿನ ಕೋಣೆಯಲ್ಲಿ ಮಲಗಿದ್ದ ಕಾರ್ತಿಕ್​ ಬಾಕಳೆ ನೋಡಲು ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಕಾರ್ತಿಕ್​ನನ್ನೂ ಕೊಲೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಮನೆಯ ಮಾಲಿಕ ಪ್ರಕಾಶ್ ಬಾಕಳೆ ಮತ್ತು ಸುನಂದಾ ಬಾಕಳೆ ಅವರು ಮಲಗಿದ್ದ ಕೋಣೆಯ ಬಾಗಿಲು ತಟ್ಟಿದ್ದಾರೆ.
ಆದರೆ ದಂಪತಿ ಬಾಗಿಲು ತೆಗೆಯದೆ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಆಗ ದುಷ್ಕರ್ಮಿಗಳು ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ದುಷ್ಕರ್ಮಿಗಳು ಚರಂಡಿಯಲ್ಲಿ ಬಿಸಾಕಿದ್ದಾರೆ. ಸ್ಥಳಕ್ಕೆ ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯ ತಂಡ, ಎಸ್ಪಿ ಬಿಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂಬಿ ಸಂಕದ, ಡಿವೈಎಸ್ಪಿ, ಸಿಪಿಐ ಭೇಟಿ ನೀಡಿದ್ದಾರೆ.







































































error: Content is protected !!
Scroll to Top