ವಾಯುವಿಹಾರಕ್ಕೆಂದು ಬಂದವರಿಂದ ಅರಣ್ಯ ಇಲಾಖೆಗೆ ಮಾಹಿತಿ
ಕಾರ್ಕಳ: ಇಲ್ಲಿನ ತಾಲೂಕು ಕಚೇರಿ ಸಮೀಪ ಇರುವ ಮಕ್ಕಳ ಪಾರ್ಕ್ನಲ್ಲಿ ಕಡವೆಯೊಂದರ ಮೃತ ದೇಹ ಪತ್ತೆಯಾಗಿದೆ.
ಮುಂಜಾನೆ ವೇಳೆ ಪಾರ್ಕ್ಗೆ ವಾಯು ವಿಹಾರಕ್ಕೆ ಬಂದವರು ಸತ್ತು ಬಿದ್ದ ಕಡವೆಯನ್ನು ಗಮನಿಸಿದ್ದು, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕಡವೆಯು ಕುಕ್ಕುಂದೂರು ಅರಣ್ಯ ಪ್ರದೇಶ ಭಾಗದಿಂದ ಇಲ್ಲಿಗೆ ಬಂದಿರಬಹುದು ಎಂದು ಊಹಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದು, ಆ ವೇಳೆ ಮೃತ ಕಡವೆಯ ತಲೆ ಮತ್ತು ಕೊಂಬಿನ ಭಾಗದಲ್ಲಿ ಸಣ್ಣ ಗಾಯಗಳು ಕಂಡು ಬಂದಿದೆ. ಹೃದಯಾಘಾತಕ್ಕೆ ತುತ್ತಾಗಿ ಕಡವೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪಶು ವೈದ್ಯರು ಹೇಳಿದ್ದಾಗಿ ತಿಳಿದು ಬಂದಿದೆ.
ಕಡವೆಯ ಮೃತ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಅದು ಯಾವ ಕಾರಣದಿಂದ ಸತ್ತಿದೆ ಎನ್ನುವ ನಿಖರ ಕಾರಣ ತಿಳಿದು ಬರಬಹುದು ಎಂದು ಕಾರ್ಕಳ ಅರಣ್ಯ ಇಲಾಖೆಯ RFO ಅರುಣ್ ಅವರು ತಿಳಿಸಿದ್ದಾರೆ.








































