ಐಫೋನ್ ಖರೀದಿ ಮಾಡಬೇಕು ಎನ್ನುವ ಆಸೆ ಯಾರಿಗೆ ತಾನೇ ಇಲ್ಲ ಹೇಳಿ. ಆ ಫೋನಿನ ಮುಂದೆ ಸಾಧಾರಣ ಫೋನು ನಮ್ಮ ಕಣ್ಣಿಗೆ ಸಂತೋಷ ನೀಡುವುದು ಅಷ್ಟರಲ್ಲೇ ಇದೆ. ಸಾಲ ಮಾಡಿಯಾದರೂ ಐಫೋನ್ ತೆಗೆದುಕೊಳ್ಳಬೇಕು ಎನ್ನುವ ಮನಸ್ಥಿತಿಯ ಹಲವರು ನಮ್ಮ ನಡುವೆ ಇದ್ದಾರೆ. ಐಫೋನ್ ಖರೀದಿ ಮಾಡಲು ಹಾಸಿಗೆಗಿಂತ ಹೆಚ್ಚು ಕಾಲು ಚಾಚಿದಾಗ ಎದುರಾಗುವ ಅಪಾಯಗಳಿಗೆ ಮುಂದೆ ನಾವೇ ದೊಡ್ಡ ಬೆಲೆ ತೆರಬೇಕಾಗುತ್ತದೆ ಎನ್ನುವುದು ಸತ್ಯ ಮತ್ತು ಅತ್ಯಂತ ನೋವಿನ ಸಂಗತಿ.
ಇಂದಿನ ದಿನಗಳಲ್ಲಿ ದುಬಾರಿ ಐಫೋನ್ ಖರೀದಿಸುವ ಹುಚ್ಚಿಗಾಗಿ ಕೆಲವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವುದು ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ‘ಐಫೋನ್ ಖರೀದಿಸಲು ಅಂಗಾಂಗ ದಾನ ಮಾಡಿದ್ದೇನೆ’ ಎಂಬ ರೀತಿಯ ಪೋಸ್ಟ್‌ಗಳನ್ನು ಹಾಕಿ, ಇತರರಿಗೂ ತಪ್ಪು ಪ್ರೇರಣೆ ನೀಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ಇಂತಹ ಪೋಸ್ಟ್‌ಗಳು ಯುವಜನರಲ್ಲಿ ತಪ್ಪು ಸಂದೇಶವನ್ನು ಮೂಡಿಸುವುದರ ಜೊತೆಗೆ, ಕೆಲವರು ಇದನ್ನು ಅನುಕರಿಸಿ ಅಪಾಯಕಾರಿ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯೂ ಇದೆ. ಆದ್ದರಿಂದ, ಯಾವುದೇ ಫೋನ್‌ಗಾಗಿ ಇಂತಹ ಹುಚ್ಚಾಟಕ್ಕೆ ಯಾರೂ ಮುಂದಾಗಬಾರದು.
ಫೋನ್‌ನ್ನು ದುಡಿದು ಸಂಪಾದಿಸಿದ ಹಣದಿಂದ ಖರೀದಿಸಬಹುದು. ಅಗತ್ಯವಿದ್ದರೆ ಸಮಯ ತೆಗೆದುಕೊಂಡು ಖರೀದಿಸಬಹುದು. ಆದರೆ ಜೀವಕ್ಕೆ ಒಮ್ಮೆ ಅಪಾಯವಾದರೆ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಜೊತೆಗೆ ಐಫೋನ್ ಖರೀದಿಸಲು ನಾವು ಮಾಡುವ ಸರ್ಕಸ್‌ಗಳನ್ನು ಡಿಜಿಟಲ್ ಫ್ಲಾಟ್‌ಫಾರ್ಮ್ ಮೂಲಕ ವೈರಲ್ ಮಾಡುವುದು ಸಹ ಸಕಿಯಾದ ವರ್ತನೆಯಲ್ಲ. ಇದು ನಾವು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದರ ಜೊತೆಗೆ ಇತರರನ್ನು ಅಂತದ್ದೇ ತಪ್ಪು ಮಾಡಲು ಪ್ರೇರೇಪಿಸಿದಂತೆ. ಅಂತಹ ಕೆಲಸವನ್ನು ಮಹಾ ಪಾಪ ಎಂದರೆ ತಪ್ಪಾಗದು.

ಐಫೋನ್‌ಗಿಂತ ನಮ್ಮ ಜೀವ ದೊಡ್ಡದು. ಐಷಾರಾಮಿ ವಸ್ತುಗಳಿಗಾಗಿ ನಮ್ಮ ಅಮೂಲ್ಯ ಜೀವನವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುವುದು ಬೇಡ. ಜೊತೆಗೆ ಇತರರನ್ನು ಅಪಾಯಕಾರಿ ಅಥವಾ ತಪ್ಪು ಮಾರ್ಗಗಳಿಗೆ ಪ್ರೇರೇಪಿಸುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡದಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಇಂತಹ ಅಪಾಯಕಾರಿ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳ ಬಗ್ಗೆ ಆರಕ್ಷಕ ಠಾಣೆಗಳು ಮತ್ತು ಸೈಬರ್ ಪೊಲೀಸರು ಸೂಕ್ತ ನಿಗಾ ವಹಿಸಿ, ಅಗತ್ಯ ಕ್ರಮ ಕೈಗೊಳ್ಳವುದು ಸಹ ಸದ್ಯದ ತುರ್ತು ಎನ್ನಬಹುದು.
✍️ಸಲೀಂ ಬರೆಪ್ಪಾಡಿ
ಯುವ ಚಿಂತಕರು








































































