Wednesday, July 6, 2022
spot_img
Homeಸಾಹಿತ್ಯ/ಸಂಸ್ಕೃತಿಬದುಕಿನ  ಪುಟಗಳನ್ನು  ಮತ್ತೆ ತಿರುವಿ ನೋಡಿದಾಗ…

ಬದುಕಿನ  ಪುಟಗಳನ್ನು  ಮತ್ತೆ ತಿರುವಿ ನೋಡಿದಾಗ…

“ಹೆಣ್ಣಲ್ಲವೇ ನಮ್ಮನ್ನೆಲ್ಲ ಪಡೆದ ತಾಯಿ !

ಹೆಣ್ಣಲ್ಲವೇ ಹಡೆದವಳು

ಹೆಣ್ಣು ಹೆಣ್ಣೆಂದೇತಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು.

ಎಂದಿದ್ದನ್ನು ಸ್ಮರಿಸಿದಾಗ ಹೆಣ್ಣಿನ ಸ್ಥಿತಿ ಅರಿವಾಗುವುದು.  ಹುಟ್ಟುವುದು ಒಂದು ಮನೆಯಲ್ಲಾದರೆ, ಬಾಳುವುದು ಇನ್ನೊಂದು ಮನೆಯಲ್ಲಿ. ವಿಭಿನ್ನ ಸಂಪ್ರದಾಯ, ವಿಭಿನ್ನ ಅಭಿರುಚಿ, ವಿಭಿನ್ನ ವಾತಾವರಣ, ಎಲ್ಲಾ ಸರಿ ಹೋದರೆ ಏನೂ ಅನಿಸದು. ಸ್ವಲ್ಪ ಬಿರುಕು ಬಿಟ್ಟಿತೆಂದರೆ ಬಾಳೆಲ್ಲ ಗೋಳು. ಹೀಗಿರುವಾಗ ಬಡಕುಟುಂಬದಲ್ಲಿನ ತಂದೆ ತಾಯಿಗೆ ” ಹೆಣ್ಣು ” ಹುಣ್ಣಿನಂತೆ ಎಂಬ ಚಿಂತೆ.

ಹೆಣ್ಣು ಮಗಳು ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ ಪರಿಪೂರ್ಣಳು.

“ಬಡವರ ಮಗಳಲ್ಲೇ, ನಡುವೊಂದು ಹಿಡಿಯಲ್ಲೇ..

ನಡೆದರ ಬಾಳೇ ಸುಳಿಯಲ್ಲೇ, ನೀನು

ನುಡಿದರೆ ಕೋಗಿಲೆ ದನಿಯಲ್ಲೇ ”

ಎಂಬ ಮಾತು ಸತ್ಯವಾಗಿದ್ದರೂ ಅವಳು ವನಸುಮದಂತೆ ಅರಳಿ, ಅಲ್ಲಿಯೇ ಕಂದಿ ಕಮರಿ ಹೋಗುವ ಸಂದರ್ಭಗಳೇ ಹೆಚ್ಚು.

ಸ್ವಲ್ಪ ಮಿಕ್ಕಿದ ಅಕ್ಕಿಯಲಿ ಅನ್ನವ ಮಾಡಿ ಮನೆಮಂದಿಗೆ ಉಣಿಸಿ, ತಾನು ಮಾತ್ರ ಪಕ್ಕದ ಮಣ್ಣಿನ ತಂಬಿಗೆಯಲ್ಲಿದ್ದ ನೀರು ಕುಡಿದು ಹೊಟ್ಟೆ ತಂಪಾಯಿತೆನ್ನುವಾಗ ಮೂಡಿದ ಸಣ್ಣ ನಗು ಅವಳ ಕಷ್ಟ ಮರೆಸುವುದು.

ಮನೆಯಲ್ಲಿ ಎರಡು ತಟ್ಟೆ, ಜೊತೆಗೊಂದೆರಡು ಬಟ್ಟೆ, ನೆಮ್ಮದಿಯಿಂದ ನಿದ್ದೆ ಮಾಡಲು ದನದ ಕೊಟ್ಟಿಗೆಯಾದರು ಸರಿ ! ತನ್ನವರ ಬೆಳಗಿಸಿ  ತಾನು ಉರಿಯುವ ಜ್ಯೋತಿ ಹೆಣ್ಣು. ಬಡತನವೇ ಶಿಕ್ಷೆಯಾಗಿ ಬೆಟ್ಟದಷ್ಟು ಕನಸು ಆಕಾಂಕ್ಷೆಗಳನ್ನು ತನ್ನವರಿಗಾಗಿ ಸುಡುವ   ಗುಣ  ಬಡವರ ಹೆಣ್ಣಿದಲ್ಲವೇ?

ವರುಷ ಪೂರ್ತಿ ಜೀತದ ಆಳುವಂತೆ ದುಡಿದು, ದಿನದ ಖರ್ಚಿನಲ್ಲಿ ಚಿಲ್ಲರೆ ಹಣ ಕೂಡಿಟ್ಟು, ವರುಷಕ್ಕೊಂದರಂತೆ ಎರಡು ಜೊತೆ ಬಟ್ಟೆ ಕೊಂಡರೂ ಸರಿ ಅದನ್ನು ಜೋಪಾನ ಮಾಡುವ ಪರಿ ಆಕೆಗಷ್ಟೇ ಗೊತ್ತು.

ಮಳೆ ಸೋರುತ್ತಿರುವ ಮನೆಯ ಹಂಚಿನೊಳಗೆ, ಮುರಿದಿರುವ ಮನಸ್ಸಿನ ಕಣ್ಣೀರ ಸಂಚಿಕೆಯನ್ನು ವಿವರಿಸುವುದು ಅಸಾಧ್ಯ.

ಬಡತನದ ಬೇಗೆಯಲ್ಲಿ ಬಳಲಿ ಬೆಂಡಾದ ಹೆಣ್ಣು ಲೋಕಕ್ಕೆ ಅಬಲೆಯಂತೆ ಕಂಡರೂ ಅಂತರಾಳದಲ್ಲಿ ಅವಳೆಂದಿಗೂ ಸಬಲೆಯೇ.

ಮನಸ್ಸಿನ ಸುಪ್ತ ಶಕ್ತಿ  ಒಂದೇ ಅವಳ ಧೈರ್ಯಕ್ಕೆ ಜೊತೆಯಾಗಿ ಬದುಕು ನಡೆಸಲು ಬೆಂಗಾವಲು.

ಒಣಗಿದೆಲೆಯ ಸುರುಳಿ ಸುತ್ತಿ ಬೀಡಿ ಕಟ್ಟುತ್ತಾ ಕೈ ಸೇರುವ ಅಲ್ಪ ಪಗಾರದಲ್ಲೇ ಸರಾಗ ಬದುಕ ಕಟ್ಟುವ ಜಾಣೆ ಆಕೆ. ವಿದ್ಯೆಯಲ್ಲಿ ಅಪಾರ ಆಸಕ್ತಿ ಇದ್ದರೂ ಬಡತನವೇ ಮುಳ್ಳಾಗಿ ಅದನ್ನು ಅರ್ಧಕ್ಕೆ ನಿಲ್ಲಿಸಿ, ಗೇರುಬೀಜ ಫ್ಯಾಕ್ಟರಿ ಯಲ್ಲಿ ಗಾಣದೆತ್ತುವಿನಂತೆ ದುಡಿದು ಸೇರು ಅಕ್ಕಿಗೆ ಒದ್ದಾಡಿ ಗಂಜಿ ಬಡಿಸುವ ಅನ್ನಪೂರ್ಣೆ ಆಕೆ.

ದಿನ ಮನೆಯೆದುರು ನಿಲ್ಲುವ ಸಾಲಗಾರರ ಗಾಡಿಯೆದುರು ಬಿಡಿಗಾಸು ಕಟ್ಟಲಾಗದೆ ತಲೆ ಅಡಿಹಾಕಿ ನಿಲ್ಲುವಾಗ ಆ ಅವಮಾನದ ವೇದನೆ ಸಹಿಸುವ ಮಾತೆ ಹೆಣ್ಣು.

ಮೆಚ್ಚಿದ ಹುಡುಗನೆದುರು ಮದುಮಗಳಾಗಿ ನಿಲ್ಲುವ ದಿನ ಗೊತ್ತಾಗಿ, ಗೆರೆ ಹಾಕಿದ ವೆಚ್ಚಗಳು ಗಡಿ ದಾಟಿದಾಗ ಸರಿದೂಗಿಸಲಾರದೆ, ಅತ್ತೆ ಮಾವನ ಕಿರುಕುಳ, ತುಚ್ಛ ಮಾತಿಗೆ ನೊಂದರೂ ಅಪ್ಪ ಅಮ್ಮನ ಮರ್ಯಾದೆಗಾಗಿ ಎಲ್ಲವನ್ನು ಸಹಿಸಿ ಬದುಕುತ್ತಾಳೆ. ಬಡವರ ಹೆಣ್ಣೆಂದರೆ ಸಾಕು ಕಾಲ  ಕಸಕ್ಕಿಂತ ಕೀಳಾಗಿ ಕಾಣುವ ಜನರಿಗೆ ಕೊರತೆಯೆಲ್ಲಿ? ಆಕೆಯ ಕಾಲ್ಗುಣ ಸರಿ ಇಲ್ಲ ಎಂದು ಮಾತು ಮಾತಿಗೂ ನಿಂದನೆ.

ಇದನ್ನೆಲ್ಲಾ ಯಾರು ಕೇಳಬೇಕು?  ಕುರುಡು ಕಾಂಚಣದ ಝಣ ಝಣ ಸದ್ದಿನ ಮುಂದೆ ನಮ್ಮ ಬಡಕುಟುಂಬದ ಹೆಣ್ಣಿನ ಜೀವನ ಸೂತ್ರವಿಲ್ಲದ ಗಾಳಿಪಟದಂತೆ.  ಅದರ ನಡುವೆ ಹೆಣ್ಣು ಭ್ರೂಣಹತ್ಯೆ,   ಬಡವರ ಮಕ್ಕಳ ನಂಬಿಸಿ ಪ್ರೀತಿಯ ಬಲೆಗೆ ಸಿಕ್ಕಿಸಿ ಮಾಡಿದ ಅತ್ಯಾಚಾರ ಅನಾಚಾರಗಳು, ವರದಕ್ಷಿಣೆಯ ಆಸೆಗಾಗಿ  ಮದುವೆಯಾಗಿ ಆಕೆಗೆ ಚಿತ್ರಹಿಂಸೆ ನೀಡುವ ದೃಶ್ಯಗಳು  ನಮ್ಮ ಕಣ್ಮುಂದೆಯೇ ಇವೆ.

ಬಡವರ ಹೆಣ್ಣು ದೇವತೆಗೆ ಸಮಾನ. ಬೃಹತ್ ಬಂಗಲೆ ಇಲ್ಲದಿದ್ದರೂ, ವಿಶಾಲ ಮನಸು, ತಿಳಿದು ಬದುಕುವವಳು, ಬಯಕೆಗಳ ಮುರಿದು ಇರುವುದರಲ್ಲೇ ಸಂತೃಪ್ತಳು. ಹರಕು ಬಟ್ಟೆಗೂ ನಗುವಿನ ತೇಪೆ ಹಚ್ಚಿದವಳು, ಬರಿಗಾಲ ಪಯಣಕ್ಕೆ ಧೈರ್ಯದ ಪಾದರಕ್ಷೆ ತೊಡುತ್ತಾಳೆ, ಉರಿಯುವ ಅಗ್ಗಿಷ್ಟಿಕೆಯಲ್ಲಿ ನೋವನ್ನು ಕಚ್ಚುತ್ತಾಳೆ.

ಇಷ್ಟೆಲ್ಲ ಸವಾಲುಗಳ ನಡುವೆಯೂ, ಚಿಮಿಣಿ ದೀಪದಡಿಯಲ್ಲಿ ಬೆಳಗಿದ ಅದೆಷ್ಟು ಅದ್ಭುತ ಪ್ರತಿಭೆಗಳನ್ನು ಒಮ್ಮೆ ಕೇಳಿದರೆ ಸಾಕು, ಅವರ ಸಾಧನೆಗೆ ಮೊದಲ ಸ್ಫೂರ್ತಿ ಬಡತನ ಎನ್ನುವಾಗ ನಾವೊಮ್ಮೆ ಬದುಕಿನ  ಪುಟಗಳನ್ನ ಮತ್ತೆ ತಿರುವಿ ನೋಡಲೇ ಬೇಕು.

ಚೈತ್ರಾ ಕಬ್ಬಿನಾಲೆ---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!