ನಮ್ಮ ಸ್ವಾತಂತ್ರ್ಯೋತ್ಸವ ಪ್ರಗತಿಗೆ ಇಂಧನ ಒದಗಿಸುವಂತಿರಲಿ

0

ಅಮೃತೋತ್ಸವದೆಡೆಗೆ ಸಮೀಪವತಿ೯ಯೆನಿಸಿದ ಈ ಬಾರಿಯ ನಾಡಬಿಡುಗಡೆಯ ಹಬ್ಬ ಪ್ರಾಯಶಃ ಮುಂಬರುವ ಭಾರತ ಇತಿಹಾಸದಲ್ಲೇ ಉಲ್ಲೇಖನಾಹ೯ ಎನಿಸುವಂತಹದು. ಸಾಮಾಜಿಕ ಅಂತರದ, ಮುಖಪಟಲನದ, ಜನವಿರಳತೆಯ, ಬಾಹ್ಯ ಆಚರಣೆಯ ಸರಳತೆ ತುಂಬಿ ನಿಂತ 74ರ ಸ್ವಾತಂತ್ರ್ಯ ಉತ್ಸವ ಈ ಬಾರಿ ನಮ್ಮದು. ವಿಶ್ವ ಕುಟುಂಬದ ನೋವು-ನಲಿವುಗಳ ಅವಿಭಾಜ್ಯ ಸಂಗಾತಿತ್ವ ನಮ್ಮ ಭಾರತದ ಪಾಲಿಗೂ ಇದೆ. ಅಂತೆಯೇ ಕೊರೊನಾಬ್ಬರ ಬರಸಿಡಿಲು ನಮ್ಮ ನೆಲವನ್ನು ನಲುಗಿಸಿದೆ. ಕೊರನಾಪೂವ೯, ಕೊರನೋತ್ತರದ ಮಧ್ಯದ ಸಂಧಿಕಾಲದ ಈ ತೆರನಾದ ವಿಲಕ್ಷಣ ಸನ್ನಿವೇಶದಲ್ಲಿ ನಾವಿಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ,  ಅರುಣಾಚಲದಿಂದvಸೌರಾಷ್ಟ್ರದವರಗೆ ತ್ರಿವಣ೯ ಧ್ವಜ ಹಾರಿಸಬೇಕಾಗಿದೆ.

ಯಾವುದೇ ಧಾಮಿ೯ಕ ಅಥವಾ ರಾಷ್ಟ್ರೀಯ ಹಬ್ಬಗಳಿಗೆ ಎರಡು ಮುಖಗಳಿವೆ. ಒಂದು ಬಾಹ್ಯ ಆಚರಣೆಯ ಸಂಭ್ರಮದ ಮೆರುಗು; ಇನ್ನೊಂದು ಆಂತರಿಕ ಭಾವಸ್ಪಂದನ, ಚಿಂತನೆಗೆ ಗ್ರಾಸ ತುಂಬಿ ನಿಂತ ಹುರುಪಿನ ಮೈಮನದ ಪುಳಕ. ಇನ್ನೊಂದು ನಿಟ್ಟಿನಲ್ಲಿ, ಉತ್ಸವಗಳು ವೈಯಕ್ತಿಕ ಹಾಗೂ ಸಾಂಘಿಕ ಸ್ತರಗಳಲ್ಲಿ ಜರಗುವಂತಹದು. ಈ ಬಾರಿ ನಮ್ಮ ಸ್ವಾತಂತ್ರೋತ್ಸವ ಬಾಹ್ಯ ಆಚರಣೆಗಿಂತಲೂ ಮಿಗಿಲಾಗಿ ಮನೆಮನೆಯ, ಮನಮನದ ಹೊಸತನದ ಮೆರುಗು ತುಂಬಬೇಕಾಗಿದೆ. ಆಂತರಿಕವಾಗಿ ಮನೋಭೂಮಿಕೆಯ ಹೊಸಚಿಂತನೆ ಚಿಮ್ಮಿಸ ಬೇಕಾಗಿದೆ. ಈ ವೈಚಾರಿಕ ಭಾವಸ್ಪಂದನ ಎಂಬುದು ಕೇವಲ ಅಲಂಕಾರಿಕ ಶಬ್ಧಪುಂಜಗಳಲ್ಲ. ಬದಲಾಗಿ ,ಪ್ರತಿಯೊಬ್ಬ ಭಾರತೀಯ ಪ್ರಜೆಯು ತನ್ನ ವ್ಯಕ್ತಿಗತ ಬದುಕನ್ನು, ಈ ನಮ್ಮ ತಾಯ್ನೆಲದ ಏಳುಬೀಳುಗಳ ಜೊತೆ ಸಮೀಕರಿಸುವಂತಹದು. ರಾಷ್ಟ್ರ ಎಂಬ ಮಹಾನ್‌ ಸಿಂಧುವಿನಲ್ಲಿ ನಾವೆಲ್ಲಾ ಬಿಂದುಗಳು ಎಂಬ ಪ್ರಜ್ಞೆಗೆ ಈ ಉತ್ಸವ ಷರಾ ಬರೆಯುವಂತಿರಲಿ.

ಪ್ರಚಲಿತ ಜಾಗತಿಕ ಕುಟುಂಬದಲ್ಲಿ ಒಂದೊಂದು ರಾಷ್ಟ್ರವು  ಓವ೯ ಸಾವ೯ಭೌಮ ಸದಸ್ಯಎನಿಸುತ್ತದೆ. ನಾವಿಂದು ಸ್ಪಧಾ೯ತ್ಮಕ ಜಗತ್ತಿನಲ್ಲಿದ್ದೇವೆ.ಸವ೯ಕ್ಷೇತ್ರಗಳಲ್ಲಿಯೂ ಶಕ್ತಿಸಂವಧ೯ನೆ,ಸ್ವಾವಲಂಬನೆ ಹಾಗೂ ಪ್ರಗತಿಶೀಲತ್ವ ಇವೆಲ್ಲವೂ ಚಲಾವಣೆಯ ನಾಣ್ಯಗಳಂತಿರಬೇಕು. ಹೌದು,1947 ಆಗಸ್ಟ್‌ 14ರ ಮಧ್ಯರಾತ್ರಿಯಿಂದ ಇಂದಿನವರೆಗೆ ನಾವು ತ್ರಿವಣ೯ ಧ್ವಜದ ಮಧ್ಯೆ ರಾರಾಜಿಸುವ ಅಶೋಕಚಕ್ರದ ತೆರದಲ್ಲಿ ಪ್ರಗತಿಯ ಪಥದಲ್ಲಿ ಬಹಳಷ್ಟು ಮುಂದೆವರಿದಿದ್ದೇವೆ. ಅದೇ ರೀತಿ ಹತ್ತು ಹಲವು ಹಿಮಗಿರಿಯೆತ್ತರದ ಬಾಹ್ಯ ಹಾಗೂ ಆಂತರಿಕ ಸವಾಲುಗಳನ್ನು ಮೆಟ್ಟಿ ಮುಂದಡಿ ಇಟ್ಟಿದ್ದೇವೆ. ಮಾನವ ನಿಮಿ೯ತ ದುರಂತಗಳ ರಕ್ತರಾತ್ರಿಗಳನ್ನು, ನಿಸಗ೯ದ ಮುನಿಸಿನ ಕಣ್ಣೀರಕತೆ-ವ್ಯಥೆಗಳನ್ನು ಹೆಣೆದುಕೊಂಡೇ ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸದ ಲೇಖನಿ ಸಾಗಿದೆ. ಇದೀಗ ಪ್ರಚಲಿತ ಕೊರೊನಾ, ಲಾಕ್‌ಡೌನ್‌, ಕ್ವಾರಂಟೈನ್‌, ಸೀಲ್‌ಡೌನ್‌ಗಳೆಲ್ಲದರ ಹೊಸ, ಆದರೆ ಮರೆಯಲಾಗದ ಚರಿತ್ರೆಯ ಸುರಂಗ ದಾಟಿ ನೂತನ ಆಶಾಕಿರಣಕ್ಕಾಗಿ ಮುಂದಡಿಇಡುತ್ತಿದ್ದೇವೆ. ಈ ಸಂಕ್ರಮಣ ಕಾಲದ ಸ್ವಾತಂತ್ರೋತ್ಸವದ ಸಂದೇಶವಾದರೂ ಏನು? ಆತ್ಮಾವಲೋಕನದ ತಿಳಿ ಬೆಳಕಾದರೂ ಏನು? ಪ್ರಥಮವಾಗಿ, ಮಾನವ ಸಂಪನ್ಮೂಲದ ಗರಿಷ್ಠ ಸದ್ಬಳಕೆ ಇಂದಿನ ಅವಶ್ಯಕತೆ. ಹೊಸ ಶಿಕ್ಷಣ ನೀತಿಯ ಹೊಂಬೆಳಕಿನಲ್ಲಿ ಸುಂದರ ಸೂಯೋ೯ದಯಗಳನ್ನು ಮುಂದಿನ ಪೀಳಿಗೆಗೆ ಸೃಜಿಸುವ ಹೊಣೆಗಾರಿಕೆ ಹಿರಿಯರ ಹೆಗಲೇರಿದೆ. “ಶ್ರಮವೇವಜಯತೇ” ಎಂಬ ಘೋಷವಾಕ್ಯ ಪ್ರತಿಮನದ,ಪ್ರತಿಮನೆಯ ಮೂಲಮಂತ್ರವಾಗಬೇಕು. ʼದೇಶಸೇವೆʼಎನ್ನುವುದರ ಸರಳ ಅಥ೯ವೇ, ತಂತಮ್ಮ ಪಾಲಿನ ಕತ೯ವ್ಯವನ್ನು ಶ್ರದ್ಧೆಯಿಂದಮಾಡುವುದು. ʼರಾಷ್ಟ್ರಪ್ರೇಮʼ‌ ಎಂಬುದನ್ನು ಯಾವುದೇ ಲೀಟರ್‌ನಿಂದ ಮೀಟರ್‌ಗಳಲ್ಲಿಅಳೆಯಲು ಸಾಧ್ಯವಿಲ್ಲ. ಆದರೆ, ಈ ಹೃದಯದ ಭಾಷೆಗೆ ಸಮಗ್ರ ಭಾರತವನ್ನು ಸಶಕ್ತಗೊಳಿಸಬಲ್ಲ ಭೀಮಬಲವಿದೆ. ಗಡಿಕಾಯುವ ಯೋಧರಿಂದ ಹಿಡಿದು, ನೇಗಿಲಯೋಗಿಯವರೆಗೆ, ನೂರಾರು ಔದ್ಯೋಗಿಕ ಕಸುಬಿನ ಪರಿಣತಿ, ಛಾತಿಯಲ್ಲಿಅಡಗಿದೆ ಬೃಹತ್‌ ಭಾರತದ ಭೌಮಕಲ್ಪನೆ.

ʼರಾಮರಾಜ್ಯʼ, ʼಗ್ರಾಮರಾಜ್ಯʼ, ʼಸುಖಿರಾಜ್ಯʼ- ಈ ಎಲ್ಲಾ ಶಬ್ದಗಳು ಶೂನ್ಯ ಪದಬಂಧವಲ್ಲ. ಬದಲಾಗಿ ನೆಮ್ಮದಿಯ ಬದುಕಿನ ಮೂಲಸೆಲೆಗಳು; ಅಮೃತ ಶಿಲಾಫಲಕಗಳು. “ನಾವು-ನಮ್ಮವರು” ಎಂಬ ಸಮೀಕರಣದ ವಿಶಾಲ ಸತ್ವ ತತ್ವದಲ್ಲಿ, ರಾಷ್ಟ್ರದ ಪ್ರಜಾ ಸಮುದಾಯ ಬೆಳೆಯಬೇಕು.  ಧಮ೯, ಭಾಷೆ, ಗಡಿ, ಆಥಿ೯ಕ ಅಂತಸ್ತು, ಜಾತಿ, ಶೈಕ್ಷಣಿಕ ಹಿನ್ನಲೆ- ಇವೆಲ್ಲದಕ್ಕೂ ಮೀರಿ ನಿಂತು ದೇಶಪ್ರೇಮ, ಒಂದಿನಿತು ತ್ಯಾಗದ ಸಾಧ್ಯತೆಗೆ ತೆರೆದುಕೊಳ್ಳುವುದೇ ಈ ಬಾರಿಯ ನಾಡಬಿಡುಗಡೆಯ ಹಬ್ಬದ ಮೌನ ಸಂದೇಶ ಆಗಬೇಕು. ನಾವು ಭವಿಷ್ಯದ ಪ್ರವಾದಿಗಳಲ್ಲ. ಯಾವುದೇ ಸಂದಭ೯ದಲ್ಲಿ, ಯಾವುದೇ ಆಪತ್ತು, ಈ ನಮ್ಮ ವಿಶಾಲ ಭಾರತದ ಯಾವುದೇ ಭಾಗದಲ್ಲಿ ಅಪ್ಪಳಿಸದು ಎಂದು ಎಂದೂ ಹೇಳುವಂತಿಲ್ಲ. ಆದರೆ ಅವೆಲ್ಲವನ್ನೂ ಸಧೃಢವಾಗಿ ಎದುರಿಸುವ ನಾಯಕತ್ವ ಈ ದಿನಗಳಲ್ಲಿ ನಮ್ಮ ಪಾಲಿಗೆ ಒದಗಿ ಬಂದ ನೆಮ್ಮದಿಯಿದೆ. ಅದೇರೀತಿ ಜನ-ಮನಸ್ಪಂದನೆ ʼಜನಗಣಮನʼದ ರಾಷ್ಟ್ರಗೀತೆಯಲ್ಲಿ ಅನುರಣಿಸಬೇಕು.  ಅಂತಾರಾಷ್ಟ್ರೀಯವಾಗಿ ಯೋಗವನ್ನು ಬಿತ್ತರಿಸಿದ ಖ್ಯಾತಿಯಂತೆ ವಿಶ್ವದ ಅತ್ಯಂತ ಪ್ರಾಚೀನ ಸಂಸ್ಕೃತಿ, ಸಭ್ಯತೆಯ ಹರಿಕಾರರು ಎನಿಸಿದಂತೆ ಮತ್ತೊಮ್ಮೆ ಜನಸಾಗರ ಮೈಕೊಡಹಿ ಉತ್ತಮ ಭವಿಷ್ಯದ, ವತ೯ಮಾನದ ಹರಿಕಾರರಾಗಲು ಈ ಬಾರಿಯʼತಿರಂಗಾʼಧ್ವಜಾರೋಹಣ ಸ್ಫೂತಿ೯  ನಮ್ಮೆಲ್ಲರಉಸಿರೆನಿಸಲಿ.

ಡಾ.ಪಿ.ಅನಂತಕೃಷ್ಣ ಭಟ್ (9886092230)

 

 

 

 ---
Previous articleಬದುಕಿನ  ಪುಟಗಳನ್ನು  ಮತ್ತೆ ತಿರುವಿ ನೋಡಿದಾಗ…
Next articleಕಾರ್ಕಳ ಅಂಚೆ ಕಚೇರಿಗೆ ಪುತ್ತೂರೇ ವಿಭಾಗ ಕಚೇರಿ ! ಜಿಲ್ಲೆ ಬೇರ್ಪಡಿಸಿ 23 ವರ್ಷ ಸಂದರೂ ಬಗೆಹರಿಯದ ಸಮಸ್ಯೆ

LEAVE A REPLY

Please enter your comment!
Please enter your name here