ನಮ್ಮೂರ ಸಾಧಕರು – ಡಾ. ಶರತ್‌ ರಾವ್

ಪ್ರತಿಷ್ಠಿತ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಶನ್‌ (ಮಾಹೆ)ನ 8ನೇ ಕುಲಪತಿಯಾಗಿ ಕಾರ್ಕಳದ ಡಾ. ಶರತ್‌ ರಾವ್‌ ಅಧಿಕಾರ ವಹಿಸಿದ್ದಾರೆ. ಈ ಮೂಲಕ ಮಾಹೆಯ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಥಮ ಕಾರ್ಕಳದವರೆಂಬ ಹೆಗ್ಗಳಿಕೆಗೆ ಡಾ. ರಾವ್‌ ಪಾತ್ರರಾಗಿದ್ದಾರೆ. 4 ದಶಕಗಳ ಕಾಲ ಕೆಎಂಸಿ ಸಂಸ್ಥೆಯ ವಿವಿಧ ಸ್ತರಗಳಲ್ಲಿ ಕರ್ತವ್ಯ ಸಲ್ಲಿಸಿ 2009ರಿಂದ 2014ರವರೆಗೆ ಕೆಎಂಸಿ ಮಣಿಪಾಲದ ಮೂಳೆಚಿಕಿತ್ಸೆ ವಿಭಾಗ ಮುಖ್ಯಸ್ಥರಾಗಿ, 2015 -2019 ಅವಧಿಯಲ್ಲಿ ಅಸೋಸಿಯೇಟ್ ಡೀನ್ ಹಾಗೂ 2019-2023 ರವರೆಗೆ ಡೀನ್ ಆಗಿ ಕಾರ್ಯನಿರ್ವಹಿಸಿರುವ ಡಾ. ರಾವ್ 2023ರಲ್ಲಿ ಉಪ ಕುಲಪತಿಯಾಗಿ (ಆರೋಗ್ಯ ವಿಜ್ಞಾನ) ಭಡ್ತಿಗೊಂಡಿದ್ದರು.‌ 2026ರ ಮೇ 1ರಂದು ಡಾ. ಶರತ್‌ ರಾವ್‌ ಅವರು ಮಾಹೆಯ ವೈಸ್‌ ಚಾನ್ಸಲರ್‌ ಆಗಿ ಆಯ್ಕೆಯಾಗಿದ್ದಾರೆ.

ಶಿಕ್ಷಣ
ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳ ಪೆರ್ವಾಜೆ ಶಾಲೆಯಲ್ಲಿ, 6 ರಿಂದ 10ನೇ ತರಗತಿವರೆಗಿನ ವಿದ್ಯಾಭ್ಯಾಸವನ್ನು ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪಡೆದಿರುತ್ತಾರೆ. ಮೈಸೂರಿನಲ್ಲಿ ಎಂಬಿಬಿಎಸ್ ಪೂರೈಸಿ ಮೂಳೆಚಿಕಿತ್ಸೆಯಲ್ಲಿ ಡಿ. ಆರ್ಥೋ ಮತ್ತು ಎಂಎಸ್. ಪದವಿ ಪಡೆದಿರುವ ಡಾ. ಶರತ್‌ ಅವರು 1988ರಲ್ಲಿ ಕೆಎಂಸಿ ಮಣಿಪಾಲದಲ್ಲಿ ಸಹಾಯಕ ಉಪನ್ಯಾಸಕರಾಗಿ ವೃತ್ತಿ ಜೀವನ ಪ್ರಾರಂಭಿಸಿರುತ್ತಾರೆ. ಜರ್ಮನಿ, ಯುನೈಟೆಡ್ ಕಿಂಗ್‌ಡಮ್, ಇಟಲಿ ಮತ್ತು ಆಸ್ಟ್ರೇಲಿಯಾದಲ್ಲಿ ಉನ್ನತ ತರಬೇತಿ ಪಡೆದಿರುವ ಡಾ. ಶರತ್‌ ಅವರು ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ.

ಗೌರವ ಫೆಲೋಶಿಪ್
ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೃತ್ತಿಪರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಡಾ. ಶರತ್‌ ರಾವ್‌ ಅವರ ವೈದ್ಯಕೀಯ ನಾಯಕತ್ವ ಮತ್ತು ಆರೋಗ್ಯ ನಿರ್ವಹಣೆಗೆ ನೀಡಿದ ಅಸಾಧಾರಣ ಕೊಡುಗೆಗಾಗಿ 2025 ರಲ್ಲಿ ಲಂಡನ್‌ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ – FRCP ಗೌರವ ಫೆಲೋಶಿಪ್ ಸಂದಿದೆ. ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಶನ್ ಹಾಗೂ ದಕ್ಷಿಣ ಭಾರತದ ಆರ್ಥೋಪೆಡಿಕ್ ಅಸೋಸಿಯೇಶನ್ ಅಧ್ಯಕ್ಷರಾಗಿ ಹಾಗೂ ಎಒ ಟ್ರೋಮಾ ಇಂಡಿಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಇವರು ವೈದ್ಯಕೀಯ ಜರ್ನಲ್‌ಗಳಲ್ಲಿ 100ಕ್ಕೂ ಹೆಚ್ಚು ಸಂಶೋಧನ ಲೇಖನ ಹಾಗೂ ಹಲವು ದೇಶಗಳಲ್ಲಿ ಉಪನ್ಯಾಸ, ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ.

ನನ್ನ ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣದ ಅವಿಭಾಜ್ಯ ಅಂಗವಾಗಿರುವ MAHE ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನನಗೆ ತುಂಬಾ ಖುಷಿಯಿದೆ. ಈ ಹಿಂದಿನವರು ಹಾಕಿದ ಅಡಿಪಾಯವನ್ನು ಮುಂದುವರಿಸುತ್ತೇನೆ. ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಶ್ರೇಷ್ಠತೆಯನ್ನು ಹೆಚ್ಚಿಸಲು, ಜಾಗತಿಕ ತೊಡಗಿಸಿಕೊಳ್ಳುವಿಕೆ ಮತ್ತು ಸಾಮಾಜಿಕ ಪ್ರಭಾವವನ್ನು ವಿಸ್ತರಿಸುವ ನಿಟ್ಟಿನಲ್ಲಿ ಎಲ್ಲರೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದೇನೆ ಎಂದವರು ಕುಲಪತಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭ ಹೇಳಿದ್ದರು.

ಕಾರ್ಕಳ ನನಗೆ ಪ್ರಾಥಮಿಕ ಶಿಕ್ಷಣ ನೀಡಿರುವುದು ಮಾತ್ರವಲ್ಲ ಬದಲಾಗಿ ಸವಾಲುಗಳನ್ನು ತಾಳ್ಮೆಯಿಂದ ಎದುರಿಸುವುದನ್ನು ಕಲಿಸಿಕೊಟ್ಟಿದೆ. ಇದು ಕಾರ್ಕಳದ ಮಣ್ಣಿನ ಗುಣ ಎಂದು ಸ್ಮರಿಸುವ ಡಾ. ಶರತ್‌ ರಾವ್‌ ಅವರು ಎಂಬಿಬಿಎಸ್ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಪ್ಯಾಶನೆಟ್‌, ಮಾನವೀಯತೆ, ಸೇವಾ ಗುಣ ಹೊಂದಿರುವುದು ಅವಶ್ಯವೆಂದು ಕಿವಿಮಾತು ಹೇಳುತ್ತಾರೆ.









































































error: Content is protected !!
Scroll to Top