ನಮ್ಮೂರ ಸಾಧಕರು – ಜಸ್ಟೀಸ್‌ ಎನ್‌. ಸಂತೋಷ್‌ ಹೆಗ್ಡೆ

ಸಂತೃಪ್ತಿ – ಮಾನವೀಯತೆಯೇ ಶ್ರೇಷ್ಠ ಸಂಪತ್ತು

“ಭ್ರಷ್ಟಾಚಾರ ಸಮಾಜದ ಬಹುದೊಡ್ಡ ಪಿಡುಗು” ಎಂದು ಅದರ ನಿರ್ಮೂಲನೆಗಾಗಿಯೇ ಹೋರಾಡುತ್ತಿರುವ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್.‌ ಸಂತೋಷ್ ಹೆಗ್ಡೆ ಅವರು ಮೂಲತಃ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದವರು. 1940 ಜೂನ್‌ 16ರಂದು ಕೆ. ಎಸ್. ಹೆಗ್ಡೆ ಹಾಗೂ ನಿಟ್ಟೆಯ ಮೀನಾಕ್ಷಿ ಹೆಗ್ಡೆ ದಂಪತಿಯ ಪುತ್ರನಾಗಿ ಜನಿಸಿದರು. ಕೆ.ಎಸ್.‌ ಹೆಗ್ಡೆ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ, ‌ಲೋಕಾಸಭಾ ಸ್ಪೀಕರ್ ಆಗಿದ್ದರು.

ಶಿಕ್ಷಣ
ಮಂಗಳೂರಿನ ಸೈಂಟ್‌ ಅಲೋಸಿಯಸ್‌ ಹಾಗೂ ಮದ್ರಾಸ್‌ನ ಕ್ರಿಶ್ಚಿಯನ್‌ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದಿರುವ ಅವರು ಇಂಟರ್‌ ಮಿಡಿಯೇಟ್‌ ಶಿಕ್ಷಣವನ್ನು ಬೆಂಗಳೂರಿನ ಸೈಂಟ್‌ ಜೋಸೆಫ್‌ ಕಾಲೇಜಿನಲ್ಲಿ ಹಾಗೂ ಬಿಎಸ್ಸಿ ಪದವಿಯನ್ನು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಪೂರ್ಣಗೊಳಿಸಿರುತ್ತಾರೆ. 1965ರಲ್ಲಿ ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಲ್ಲಿ (ವಿಶ್ವವಿದ್ಯಾನಿಲಯ ಕಾಲೇಜು) ಕಾನೂನು ಪದವಿ ಪಡೆದಿದ್ದಾರೆ.

ವೃತ್ತಿ ಜೀವನ
1966ರಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಸಂತೋಷ್‌ ಹೆಗ್ಡೆಯವರು 1984ರಲ್ಲಿ ಅಡ್ವೊಕೇಟ್‌ ಜನರಲ್‌ ಆಗಿ ನೇಮಕಗೊಂಡರು. 1989ರಲ್ಲಿ ಭಾರತ ಒಕ್ಕೂಟದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಬಳಿಕ ಸಾಲಿಸಿಟರ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದರು. 1999 ಜನವರಿ 8ರಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡು 2005 ಜೂನ್‌ 16ರಂದು ನಿವೃತ್ತರಾದರು. ಹುಟ್ಟಿದ ದಿನದಂದೇ ನಿವೃತ್ತರಾದರು.

ಲೋಕಾಯುಕ್ತರಾಗಿ
2006 ಆಗಸ್ಟ್‌ 3 ರಂದು ಕರ್ನಾಟಕದ ಲೋಕಾಯುಕ್ತರಾಗಿ ನೇಮಕಗೊಂಡ ಸಂತೋಷ್‌ ಹೆಗ್ಡೆ ಅವರು ಭಷ್ಟರ ಪಾಲಿಗೆ ಅಕ್ಷರಶಃ ಸಿಂಹಸ್ವಪ್ನರಾಗಿ ಕಾಡಿದವರು. ಪ್ರಮುಖವಾಗಿ ರಾಜಕಾರಣಿಗಳ, ಭಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದವರು. ಒಂದು ಕಡೆ ಭ್ರಷ್ಟಾಚಾರಕ್ಕೆ ಕಡಿವಾಣ, ಮತ್ತೊಂದು ಕಡೆ ಸರಕಾರಿ ಕೆಲಸದಲ್ಲಿ ವಿಳಂಬ ನೀತಿ ತೋರುತ್ತಿದ್ದ ಅಧಿಕಾರಿಗಳಿಗೂ ಚುರುಕು ಮುಟ್ಟಿಸಿದ್ದರು. ಲೋಕಾಯುಕ್ತರಾಗಿ ಮಾನವೀಯ ನೆಲೆ, ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಭ್ರಷ್ಟರ ವಿರುದ್ಧ ನಿಷ್ಪಕ್ಷಪಾತ ಧೋರಣೆ ಹೊಂದಿದ್ದರು.

ಮೂವರು ಮುಖ್ಯಮಂತ್ರಿಗಳಿಗೆ ಗಣಿ ಉರುಳು
ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಮೂವರು ಮುಖ್ಯಮಂತ್ರಿಗಳ ವಿರುದ್ಧವೇ ಸಂತೋಷ್‌ ಹೆಗ್ಡೆ ಪ್ರಕರಣ ದಾಖಲಿಸಿದ್ದರು. ಅವರಲ್ಲಿ ಓರ್ವರು ಜೈಲು ಶಿಕ್ಷೆ ಅನುಭವಿಸಿ ಹೊರಬಂದರು. ವರದಿಯಲ್ಲಿ 9 ಮಂದಿ ಮಂತ್ರಿಗಳು, 14 ಐಎಎಸ್‌, ಕೆಎಎಸ್‌ ಅಧಿಕಾರಿಗಳು ಸೇರಿದಂತೆ 797 ಅಧಿಕಾರಿಗಳನ್ನು ದೋಷಿಗಳನ್ನಾಗಿಸಿದ್ದರು. ಈ ಬೆಳವಣಿಗೆ ಅಂದು ಕರ್ನಾಟಕದ ರಾಜಕೀಯದಲ್ಲಿ ಸಂಚಲನ್ನೇ ಸೃಷ್ಟಿಸಿತ್ತು. 2011 ಆಗಸ್ಟ್ 2 ರಂದು ಕರ್ನಾಟಕದ ಲೋಕಾಯುಕ್ತ ಹುದ್ದೆಯಿಂದ ನಿವೃತ್ತರಾದರು. ಅನಂತರ ಅಣ್ಣಾ ಹಜಾರೆ ಪ್ರಾರಂಭಿಸಿದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಟೀಮ್ ಅಣ್ಣಾ ತಂಡದ ಪ್ರಮುಖ ಸದಸ್ಯರಾಗಿ ಸೇರಿಕೊಂಡರು. ಆಗಸ್ಟ್ 2012ರಲ್ಲಿ ತಂಡದಿಂದ ಹೊರಬಂದರು.

ಪ್ರಶಸ್ತಿ
2010-11ನೇ ಸಾಲಿನಲ್ಲಿ ಟೈಮ್ಸ್‌ ಆಫ್‌ ಇಂಡಿಯಾದ ಮ್ಯಾನ್‌ ಆಫ್‌ ದಿ ಇಯರ್‌, 2010ರಲ್ಲಿ ಎನ್‌ಡಿಟಿವಿ ಇಂಡಿಯನ್‌ ಆಫ್‌ ದಿ ಇಯರ್‌ ಆ್ಯಂಟಿ ಕರಪ್ಸನ್‌ ಕ್ರೂಸೆಡರ್‌ ಗೌರವ, ಪೌಲ್‌ ಹ್ಯಾರಿಸ್‌ ಪ್ರಶಸ್ತಿ, ಪಬ್ಲಿಕ್‌ ಸರ್ವೀಸ್‌ ಎಕ್ಸಲೆನ್ಸ್‌ ಪ್ರಶಸ್ತಿ, ಸೀತಾರಾಮ್‌ ಜಿಂದಾಲ್‌ ಗೌರವ, ಹಂಪಿ ವಿಶ್ವವಿದ್ಯಾನಿಲಯದಿಂದ ನಾಡೋಜ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂತೋಷ್‌ ಹೆಗ್ಡೆ ಅವರನ್ನು ಅರಸಿ ಬಂದವು.

5 ಗೌರವ ಡಾಕ್ಟರೇಟ್‌
ಮಂಗಳೂರು ವಿಶ್ವವಿದ್ಯಾಲಯ (2005), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು, ತುಮಕೂರು ವಿಶ್ವವಿದ್ಯಾಲಯ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹಾಗೂ ಅಲೈನ್ಸ್‌ ಯೂನಿವರ್ಸಿಟಿಯಿಂದ ಸಂತೋಷ್‌ ಹೆಗ್ಡೆ ಗೌರವ ಡಾಕ್ಟರೇಟ್‌ಗೆ ಭಾಜನರಾದವರು.

ಕಾರ್ಕಳದೊಂದಿಗೆ ವಿಶೇಷ ನಂಟು
“ನ್ಯೂಸ್‌ ಕಾರ್ಕಳ” ಸಂತೋಷ್‌ ಹೆಗ್ಡೆ ಅವರನ್ನು ಮಾತನಾಡಿಸಿದಾಗ, ಕಾರ್ಕಳ ನಮ್ಮೂರು. ನನ್ನ ಕುಟುಂಬಸ್ಥರು ಅಲ್ಲಿದ್ದಾರೆ. ಅವರೊಂದಿಗೆ ಮತ್ತು ಕಾರ್ಕಳದೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಊರಿಗೆ ಬಂದಾಗಲೆಲ್ಲಾ ಕಾರ್ಕಳಕ್ಕೆ ಭೇಟಿ ನೀಡುತ್ತೇನೆ. ಕಾರ್ಕಳದಲ್ಲಿನ ನೆನಪುಗಳು ಶಾಶ್ವತ ಎಂದರು.









































































































error: Content is protected !!
Scroll to Top