ನಟಿ ರಮ್ಯಾಗೆ ದರ್ಶನ್‌ ಅಭಿಮಾನಿಗಳಿಂದ ಅವಹೇಳನಕಾರಿ ಸಂದೇಶ – ಕ್ರಮಕ್ಕೆ ಆಗ್ರಹಿಸಿ ಮಹಿಳಾ ಆಯೋಗ ಪತ್ರ

ಬೆಂಗಳೂರು : ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಕಳುಹಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ರೇಣುಕಾಸ್ವಾಮಿ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ನಟ ದರ್ಶನ್​ ಸೇರಿ ಕೆಲ ಆರೋಪಿಗಳಿಗೆ ಜಾಮೀನಿನ ಕುರಿತು ಸುಪ್ರೀಂನಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಪ್ರಕರಣದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ರಮ್ಯಾ, ʼಭಾರತದ ಸಾಮಾನ್ಯ ಜನರಿಗೆ ಸುಪ್ರೀಂ ಕೋರ್ಟ್ ಆಶಾಕಿರಣ – ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯʼ ಎಂದು ಬರೆದುಕೊಂಡಿದ್ದರು. ಈ ಹೇಳಿಕೆ ಕೊಟ್ಟ ಬೆನ್ನಲ್ಲೇ ನಟಿ ರಮ್ಯಾ ಟ್ರೋಲ್​ ಆಗಲು ಶುರುವಾಗಿದ್ದಾರೆ.

ಜುಲೈ 26ರಂದು, ʼದರ್ಶನ್​ ಅಭಿಮಾನಿಗಳಿಗೆ ನನ್ನ ಇನ್​ಸ್ಟಾಗ್ರಾಮ್​ಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಏಕೆ ನ್ಯಾಯ ಬೇಕು ಎಂಬುದಕ್ಕೆ ನಿಮ್ಮ ಕಮೆಂಟ್​ಗಳೇ ಸಾಕ್ಷಿʼ ಎಂದು ರಮ್ಯಾ ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು. ಇದಾದ ನಂತರ ಟ್ರೋಲ್​ ಹೆಚ್ಚಾಗಿದ್ದು, ನಟಿಗೆ ದರ್ಶನ್ ಫ್ಯಾನ್ಸ್​ ಹೆಸರಿನಲ್ಲಿ ಅಶ್ಲೀಲ ಸಂದೇಶಗಳು ಹರಿದು ಬಂತು. ನಂತರ ʼರೇಣುಕಾಸ್ವಾಮಿ ಮಾಡಿದ್ದ ಮೆಸೇಜ್​ಗೂ ಡಿಬಾಸ್​​ ಫ್ಯಾನ್ಸ್​ ಮೆಸೇಜ್​ಗೂ ಯಾವುದೇ ವ್ಯತ್ಯಾಸವಿಲ್ಲ’ ಎನ್ನುವ ಮತ್ತೊಂದು ಇನ್​ಸ್ಟಾಗ್ರಾಮ್​ ಪೋಸ್ಟ್‌ ಮೂಲಕ ರಮ್ಯಾ ಕಿಡಿಕಾರಿದ್ದಾರೆ. ಜೊತೆಗೆ ದರ್ಶನ್​ ಫ್ಯಾನ್​​ಗಳದ್ದು ಎನ್ನಲಾದ ಮೆಸೇಜ್​ಗಳ ಸ್ಕ್ರೀನ್​ಶಾಟ್​ಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ, ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ.

ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಬರೆದ ಪತ್ರವನ್ನು ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʼಮಾಜಿ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯಾರವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ. ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆʼ ಎಂದು ಪತ್ರದಲ್ಲಿದೆ.























































































































error: Content is protected !!
Scroll to Top