ವೈದ್ಯಕೀಯ ಸೇವೆಗಾಗಿ ಅಮೇರಿಕಾದ ಡ್ರೈವ್ ಆಫ್ ಹಾನರ್ ಗೌರವಕ್ಕೆ ಭಾಜನರಾಗಿದ್ದ ಡಾ. ಅವಿನಾಶ್ ಅಡಿಗ ಅವರು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜಯಂತಿನಗರದವರು. ಅಮೇರಿಕಾದ ಶ್ರೇಷ್ಠ ಯೂನಿವರ್ಸಿಟಿಗಳಲ್ಲಿ ಒಂದಾಗಿರುವ University Of Alabama Birminghamನ ಮೆಡಿಸಿನ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೋಫೆಸರ್, Holyoke Medical Center ಹಾಗೂ Critical Careನಲ್ಲಿ ನೆಫ್ರಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೋವಿಂದ ಅಡಿಗ ಮತ್ತು ಶಕುಂತಳಾ ಅಡಿಗ ದಂಪತಿ ಪುತ್ರ. ಗೋವಿಂದ ಅಡಿಗ ಅವರು ಇಂಗ್ಲೀಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.
ಶಿಕ್ಷಣ
ಕೆ.ಎಂ.ಇ.ಎಸ್., ಹೆಬ್ರಿ ನವೋದಯ ಹಾಗೂ ಕ್ರೈಸ್ಟ್ಕಿಂಗ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ನಿಟ್ಟೆಯಲ್ಲಿ ಪಿಯುಸಿ ಮಾಡಿರುವ ಅವಿನಾಶ್ ಅವರು ಬಳಿಕ ಬಳ್ಳಾರಿಯ ವಿಮ್ಸ್ (ವಿಜಯನಗರ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್)ನಲ್ಲಿ ಎಂಬಿಬಿಎಸ್ ಪೂರೈಸಿರುತ್ತಾರೆ. ಅನಂತರ ರಾಜಸ್ತಾನದ ಉದಯ್ಪುರದ ರವೀಂದ್ರನಾಥ್ ಟ್ಯಾಗೋರ್ ಮೆಮೋರಿಯಲ್ ಮೆಡಿಕಲ್ ಕಾಲೇಜಿನಲ್ಲಿ ಎಂಡಿ (ಮೆಡಿಸಿನ್) ಪೂರ್ಣಗೊಳಿಸಿ ಅಮೆರಿಕಾದ ಟೆಕ್ಸಾಸ್ನಲ್ಲಿರುವ ಟೆಕ್ಸಾಸ್ ಟೆಕ್ ಯೂನಿವರ್ಸಿಟಿ ಹೆಲ್ತ್ ಸೈನ್ಸ್ ಸೆಂಟರ್ನಲ್ಲಿ ಎಂಡಿ ಇಂಟರ್ನಲ್ ಮೆಡಿಸಿನ್, ನ್ಯೂಯಾರ್ಕ್ ಲೊಂಗೊನ್ ಮೆಡಿಕಲ್ ಸೆಂಟರ್ನಲ್ಲಿ ನೆಫ್ರಾಲಜಿಸ್ಟ್ ಹಾಗೂ ರುಟ್ಗೆರ್ಸ್ ನ್ಯೂಜೆರ್ಸಿ ಮೆಡಿಕಲ್ ಸೆಂಟರ್ನಲ್ಲಿ ಕ್ರಿಟಿಕಲ್ ಕೇರ್ ಫೆಲೊಶಿಪ್ ಮಾಡಿದ್ದಾರೆ.
ಡ್ರೈವ್ ಆಫ್ ಹಾನರ್
ಕೋವಿಡ್ ಸಮಯದಲ್ಲಿ ಅಕ್ಷರಶಃ ನಲುಗಿದ್ದ ವೇಳೆ ಡಾ. ಅವಿನಾಶ್ ಅವರು 1,500ಕ್ಕೂ ಹೆಚ್ಚು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯೊಂದಿಗೆ ಜನರಲ್ಲಿ ಧೈರ್ಯ, ಆತ್ಮಸೈರ್ಯ ತುಂಬುವ ಕಾರ್ಯವನ್ನೂ ಮಾಡಿದ್ದಾರೆ. ಡಾ. ಅವಿನಾಶ್ ಅವರ ಸೇವೆಗಾಗಿ ನ್ಯೂಜೆರ್ಸಿಯಲ್ಲಿರುವ ಭಾರತೀಯ ಅನಿವಾಸಿ ಸಂಘಟನೆಗಳು ಹಾಗೂ ಬೃಂದಾವನ ಕನ್ನಡಿಗರ ಸಂಘ ಡ್ರೈವ್ ಆಫ್ ಹಾನರ್ ಗೌರವ ನೀಡಿತ್ತು. ಅಲ್ಲದೇ ಆ ಸಮಯದಲ್ಲಿ ಬೆಂಗಳೂರು ಮತ್ತಿತರ ಭಾಗದ ಕೋವಿಡ್ ರೆಸ್ಪಾನ್ಸ್ ಟೀಮ್ನಲ್ಲಿ ಪಾಲ್ಗೊಂಡು ನೂರಾರು ಕೋವಿಡ್ ರೋಗಿಗಳಿಗೆ ಉಚಿತ ಫೋನ್ ಟ್ರೀಟ್ಮೆಂಟ್ ಮಾಡಿರುವುದು ಉಲ್ಲೇಖನೀಯ.

ಅಡಿಗ ಫೌಂಡೇಶನ್
ನಾವು ಸಮಾಜದಿಂದ ಸರ್ವಸ್ವವನ್ನೂ ಪಡೆಯುತ್ತೇವೆ. ಆದರೆ, ಅದಕ್ಕೆ ಪ್ರತಿಯಾಗಿ ನಾವೇನು ಸಮಾಜಕ್ಕೆ ನೀಡುತ್ತೇನೆ ಎನ್ನುವುದು ಮುಖ್ಯ ಎಂದು ಹೇಳುವ ಅವಿನಾಶ್ ಅವರು ಈ ನಿಟ್ಟಿನಲ್ಲಿ ಅಡಿಗ ಫೌಂಡೇಶನ್ ಸ್ಥಾಪಿಸಿರುತ್ತಾರೆ. ಫೌಂಡೇಶನ್ ಮುಖಾಂತರ ಆಯ್ದ ಬಡ ಮಕ್ಕಳಿಗೆ ಎಸೆಸ್ಸೆಲ್ಸಿ ನಂತರದ ಶಿಕ್ಷಣವನ್ನು ನೀಡಲು ಬಯಸಿದ್ದಾರೆ. ಉತ್ತಮ ವಿದ್ಯಾಭ್ಯಾಸದೊಂದಿಗೆ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ಉನ್ನತ ಸ್ಥಾನಕ್ಕೇರುವಂತೆ ಪ್ರೇರೇಪಿಸುವ ಕಾರ್ಯವನ್ನು ಅಡಿಗ ಫೌಂಡೇಶನ್ ಮಾಡಲಿದೆ. ಅವರಲ್ಲೂ ಸೇವಾ ಮನೋಭಾವನೆ ಮೈಗೂಡಿಸಿ ಮುಂದಿನ ದಿನಗಳಲ್ಲಿ ಅವರು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕೆಂಬ ಸದುದ್ದೇಶವನ್ನು ಡಾ. ಅವಿನಾಶ್ ಹೊಂದಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿರುವ ಡಾ. ಅವಿನಾಶ್, ನೀವು ವೈದ್ಯಕೀಯ ಕ್ಷೇತ್ರವನ್ನು ಆಯ್ದುಕೊಂಡಿರುವುದು ಸಾಧಾರಣ ಕೆಲಸವಲ್ಲ. ಇದು ಸೇವೆಯ ಯೋಗವಾಗಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದಂತೆ “ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ, ಆದರೆ ಫಲದ ನಿರೀಕ್ಷೆಯನ್ನು ಬಿಡಿ”. ವೈದ್ಯಕೀಯವೆಂದರೆ ಫಲಕ್ಕಾಗಿ ಮಾತ್ರ ಓದುವಿಕೆ ಅಲ್ಲ. ಪ್ರತಿದಿನವೂ ಹೊಸದಾಗಿ ಕಲಿಯುತ್ತಾ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳುವ ವೃತ್ತಿ. ರೋಗಿಗಳ ಜೀವನವನ್ನು ಬದಲಾಯಿಸಲು ನಿಮ್ಮ ಶ್ರಮ, ಸಮಯ, ಜ್ಞಾನ ಸಾಕು. ಆದರೆ, ಪ್ರತಿಫಲ, ಪ್ರಶಂಸೆ, ಗೌರವಗಳೆಲ್ಲ ಬರುವುದೆಂದರೆ ಅದು ತನ್ನಿಂತಾನಾಗಿ ಬರಲಿ. ಅವುಗಳ ಕುರಿತು ಯೋಚನೆಯಿಲ್ಲದೆ ಕೆಲಸ ಮಾಡುವುದೇ ಕರ್ಮ ಯೋಗ ಎನ್ನುತ್ತಾರೆ ಅವರು.
ಡಾ. ಅವಿನಾಶ್ ಅವರು ಅಮೇರಿಕಾದ ಬೋಸ್ಟನ್ ನಲ್ಲಿ ಪತ್ನಿ ಡಾ. ಇಷಾ ಅಡಿಗ (ನೇತ್ರ ತಜ್ಞೆ) ಹಾಗೂ ಪುತ್ರರಾದ ಇವಾನ್, ಆದ್ಯಂತರೊಂದಿಗೆ ಸುಖಿ ಕುಟುಂಬ ನಡೆಸುತ್ತಿದ್ದಾರೆ.






























































