ಜಗತ್ತಿನಲ್ಲಿ ಇರುವುದು ಒಂದೇ ಮಾನವ ಜಾತಿ – ನಾಗಲಕ್ಷ್ಮೀ ಚೌಧರಿ

ಕಾರ್ಕಳ : ಜಾತಿ ವ್ಯವಸ್ಥೆ ಎಂಬ ಹೆಮ್ಮರವನ್ನು ಬುಡಸಮೇತ ಕಿತ್ತೆಸೆಯುವವರೆಗೂ ಸಮಾಜದಲ್ಲಿ ನಿಜವಾದ ಸಮಾನತೆ ಸಾಧ್ಯವಿಲ್ಲ. ಯಾರಾದರೂ ನಿಮ್ಮ ಜಾತಿ ಯಾವುದು ಎಂದು ಕೇಳಿದರೆ ತಲೆ ತಗ್ಗಿಸಬೇಡಿ. ನಾನು ಹೆಣ್ಣು ಅಥವಾ ನಾನು ಗಂಡು ಎಂದು ಹೆಮ್ಮೆಯಿಂದ ಹೇಳಿ. ಇಡೀ ಜಗತ್ತಿನಲ್ಲಿ ಇರುವುದು ಒಂದೇ ಮಾನವ ಜಾತಿ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು.

ಅವರು ಮೇ 24ರಂದು ಬಂಡಿಮಠದಲ್ಲಿ ನಡೆದ ಕರ್ನಾಟಕ ಜೈ ಭೀಮ್‌ ಯುವ ಸೇನಾ ಸೇವಾ ಟ್ರಸ್ಟ್‌ ಹಾಗೂ ಕರ್ನಾಟಕ ಜೈ ಭೀಮ್‌ ಯುವ ಸೇನೆಯ ದ್ವಿತೀಯ ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಜಾತಿ ವ್ಯವಸ್ಥೆ, ಮಹಿಳಾ ಸಬಲೀಕರಣ ಮತ್ತು ಅಂತರ್ಜಾತಿ ವಿವಾಹಗಳ ಕುರಿತು ಮಾತನಾಡಿದರು.

ನಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಿಂತ ಬಾಲ್ಯವಿವಾಹಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಆದರೆ ನನ್ನ ಪೋಷಕರು ಸಮಾಜದ ವಿರೋಧದ ನಡುವೆಯೂ ನನಗೆ ಉನ್ನತ ಶಿಕ್ಷಣ ನೀಡಿದರು. ಅವರ ಪ್ರಗತಿಪರ ಚಿಂತನೆಯ ಫಲವಾಗಿ ನಾನು ಇಂದು ಡಾಕ್ಟರ್ ಆಗಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ದುರದೃಷ್ಟವಶಾತ್, ನನ್ನ ಈ ಸಾಧನೆಯನ್ನು ನೋಡಲು ಇಂದು ನನ್ನ ಹೆತ್ತವರು ಬದುಕಿಲ್ಲ. ಆದರೆ ಈ ಸಮಾಜವೇ ಇಂದು ನನ್ನನ್ನು ಮಗಳಂತೆ ಕಾಣುತ್ತಿದೆ ಎಂದು ಅವರು ತಮ್ಮ ಜೀವನದ ಹೋರಾಟದ ಅನುಭವಗಳನ್ನು ಹಂಚಿಕೊಂಡರು.

ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ಯಾವ ಸಮುದಾಯದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ಇಲ್ಲ ಎಂದು ಹೇಳಲು ಸಾಧ್ಯ? ಜಾತಿ, ಧರ್ಮ, ವರ್ಗ ಯಾವುದಾದರೂ ಇರಲಿ, ಮಹಿಳೆಯರು ಇಂದು ಅನೇಕ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ. ಇದರ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ವೇದಿಕೆಗೆ ಕರೆಸಿ, ಸರ್ಕಾರದ ಯೋಜನೆಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ದೂರು ನೀಡುವ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ವಿಶೇಷ ಜಾಗೃತಿ ಮೂಡಿಸಿದ ಅವರು ಅರಿವೇ ಬದುಕು ಅಜ್ಞಾನವೇ ಸಾವು ಎಂಬುದನ್ನು ಸದಾ ಜೀವನದಲ್ಲಿ ನೆನಪಿಟ್ಟುಕೊಳ್ಳಿ ಎಂದರು.

ಸನ್ಮಾನ
ತಮ್ಮ ಮನೆಗೆ ಕಳ್ಳತನಕ್ಕೆ ಬಂದಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದ ಪಳ್ಳಿಯ ಶ್ರಾವ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಭಾರತೀಯ ಭೂಸೇನೆಯ ನಿವೃತ್ತ ಯೋಧ ಆನಂದ್ ಕಬ್ಬಿನಾಲೆ, ಕ್ರೀಡಾ ಕ್ಷೇತ್ರದ ಸಾಧಕರು ಹಾಗೂ ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬ್ಯಾಗ್, ಛತ್ರಿ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಸಮಾನತೆ ಯಾರೂ ಕೊಡುವುದಿಲ್ಲ, ಅದನ್ನು ನಾವು ಪಡೆದುಕೊಳ್ಳಬೇಕು. ಸಾಧನೆ ಮಾಡಲು ಕರಾವಳಿ ಭಾಗ ಸೂಕ್ತ ಭೂಮಿ. ಕಾರ್ಕಳದ ಪ್ರತಿ ಗ್ರಾಮದಲ್ಲೂ ವಿವಿಧ ಕ್ಷೇತ್ರದ ಸಾಧಕರಿದ್ದಾರೆ. ಅವರೆಲ್ಲರನ್ನು ಮಾದರಿಯನ್ನಾಗಿಸಿಕೊಂಡು ಯುವಕರು ಸಮಾಜದ ಬಗ್ಗೆ ಚಿಂತನೆಯೊಂದಿಗೆ ಮುಂದೆ ಬರಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಪ್ರದೀಪ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ನಾಯ್ಕ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಲತಾ, ಉದ್ಯಮಿ ಜಾನ್‌ ಆರ್.‌ ಡಿಸಿಲ್ವಾ, ಕುಕ್ಕುಂದೂರು ಗ್ರಾ. ಪಂ. ಮಾಜಿ ಅಧ್ಯಕ್ಷೆ ಉಷಾ, ಪುರಸಭೆ ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ, ಕರ್ನಾಟಕ ಜೈ ಭೀಮ್ ಯುವ ಸೇನೆಯ‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್‌ ಆರ್.‌ ಮೂಡಬಿದ್ರಿ, ಕರ್ನಾಟಕ ಜೈ ಭೀಮ್ ಯುವ ಸೇನೆಯ ಟ್ರಸ್ಟ್‌ ಸಂಸ್ಥಾಪಕ ಲೊಕೇಶ್‌ ಎಂ., ಉದ್ಯಮಿ ಸಮದ್‌ ಖಾನ್‌, ಅಮ್ಮನ ನೆರವು ಚಾರಿಟೇಬಲ್‌ ಟ್ರಸ್ಟ್‌ನ ಅವಿನಾಶ್‌ ಶೆಟ್ಟಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಸೇನರಬೆಟ್ಟು ಸಾಣೂರು ಕಾರ್ಯಾಧ್ಯಕ್ಷ ಹರೀಶ್‌ ಶೆಟ್ಟಿ, ಉದ್ಯಮಿ ತಿಮ್ಮಪ್ಪ, ಕರ್ನಾಟಕ ಜೈ ಭೀಮ್ ಯುವ ಸೇನೆಯ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಸುನಿಲ್‌ ನಿಂಜೂರು, ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ಜೈ ಭೀಮ್ ಯುವ ಸೇನೆಯ ರಾಜ್ಯಾಧ್ಯಕ್ಷ ಎಸ್. ಪಿ. ಅಶೋಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ತಾಲೂಕು ಘಟಕದ ಮಹಿಳಾ ಸಂಘಟನಾ ಕಾರ್ಯದರ್ಶಿಗಳಾದ ವಾಣಿ ಸ್ವಾಗತಿಸಿ, ಸವಿತಾ ವರದಿ ವಾಚಿಸಿದರು. ನಳಿನಿ ಎಸ್. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ತಾಲೂಕು ಆಸ್ಪತ್ರೆ – ವಿಜೇತ ಶಾಲೆ ಭೇಟಿ
ಕಾರ್ಯಕ್ರಮಕ್ಕೂ ಮುನ್ನ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ಅಲ್ಲಿನ ವ್ಯವಸ್ಥೆಯ ಬಗ್ಗೆ ವಿಚಾರಿಸಿ ರೋಗಿಗಳೊಂದಿಗೆ ಮಾತುಕತೆ ನಡೆಸಿದರು. ನಂತರ ಅಯ್ಯಪ್ಪನಗರದಲ್ಲಿರುವ ವಿಜೇತ ವಸತಿಯುತ ವಿಶೇಷ ಶಾಲೆಗೆ ಭೇಟಿ ನೀಡಿದರು.





























































































































error: Content is protected !!
Scroll to Top