“ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು?|
ಆತುಮದ ಪರಿಕಥೆಯನರಿತವರೆ ನಾವು?||
ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ|

ನೀತಿ ನಿಂದೆಯೊಳಿರದು -ಮಂಕುತಿಮ್ಮ.||”
ಯಾರನ್ನೇ ಆಗಲಿ “ನೀನು ಪಾಪಿ,ದೋಷಿ” ಎಂದು ಒತ್ತಡ ಹಾಕಿ ಅವಹೇಳನ ಮಾಡಬಾರದು.ಯಾಕೆಂದರೆ ನಾವ್ಯಾರು ಪರಿಶುದ್ಧರಲ್ಲ.ಸಂಪೂರ್ಣ ನಿರ್ಮಲರು ಅಲ್ಲ .ತಮ್ಮ ಅಂತರ್ಯವನ್ನು ಸಂಪೂರ್ಣವಾಗಿ ತಿಳಿದವರು ಯಾರಿದ್ದಾರೆ? ಸೋತವರಿಗೆ ದುರ್ಬಲರಿಗೆ ಮತ್ತು ತಪ್ಪು ಮಾಡಿದವರಿಗೆ ನಾವು ಕನಿಕರ ತೋರಿಸಬೇಕೆ ಹೊರತು ನಿಂದಿಸುವುದಲ್ಲ ಎಂದು ಡಿ.ವಿ.ಜಿ ಹೇಳಿದ್ದಾರೆ.
“ತಪ್ಪು ಮಾಡದವ್ರು ಎಲ್ಲವ್ರೆ” ಎಂಬ ಹಾಡನ್ನು ನಾವೆಲ್ಲಾ ಕೇಳಿದ್ದೇವೆ.ಇದರ ಅರ್ಥ ತಪ್ಪು ಮಾಡದವರು ಎಲ್ಲಿಯೂ ಇಲ್ಲ.ಬದುಕಿನ ಪಾಠವನ್ನು ಕಲಿಯುವಲ್ಲಿ ತಪ್ಪಾಗುವುದು ಸಹಜ.ತಪ್ಪುಮಾಡದ ಪರಿಶುದ್ಧ ವ್ಯಕ್ತಿ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಮಾಡಿದ ತಪ್ಪನ್ನು ತಿದ್ದಿಕೊಂಡು ನಡೆಯುವ ಮನೋಭಾವ ನಾವು ಬೆಳೆಸಿಕೊಳ್ಳಬೇಕು ಮತ್ತು ಇತರರಿಗೂ ಆ ಅವಕಾಶ ನೀಡಬೇಕು .

ಈ ಜಗತ್ತಿನಲ್ಲಿ ಪುಕ್ಕಟೆಯಾಗಿ ದೊರೆಯುವ ಎರಡು ವಸ್ತುಗಳೆಂದರೆ ಒಂದು ಟೀಕೆ,ಇನ್ನೊಂದು ಸಲಹೆ.ಈ ಎರಡರಿಂದ ಯಾವ ಪ್ರಯೋಜನವಿಲ್ಲ.ಯಾರನ್ನೇ ಆಗಲಿ ಸಂಪೂರ್ಣವಾಗಿ ತಿಳಿದುಕೊಳ್ಳದೆ ನಾವು ಟೀಕೆ ಮಾಡಬಾರದು ಮತ್ತು ಅನಗತ್ಯ ಸಲಹೆ ಕೊಡಲು ಹೋಗಬಾರದು.”ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ.ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಚಾಚಿಕೊಂಡಿರುವಂತ ನಾಲಗೆ’ ಎಂಬ ಪುರಂದರದಾಸರ ಕೀರ್ತನೆಯು ಕೂಡ ಇದೇ ಅರ್ಥವನ್ನು ತಿಳಿಸುತ್ತದೆ.ವಿನಾಕಾರಣ ಇನ್ನೊಬ್ಬರನ್ನು ದೂಷಿಸುವ ಬದಲು ನಮ್ಮನ್ನು ನಾವು ಅರಿತು ನಡೆದಾಗ ಜೀವನ ಸಾರ್ಥಕ ಎಂದಿದ್ದಾರೆ.
“ಇನ್ನೊಬ್ಬರ ಬದುಕನ್ನು ಇಣುಕಿ ನೋಡುವುದನ್ನು ಬಿಟ್ಟಾಗಲೇ ನಮ್ಮ ಬದುಕು ನಮಗೆ ಸುಂದರವಾಗಿ ಕಾಣಲು ಸಾಧ್ಯ”.
























































































