ಯಾನ್‌ ತುಳು ಅಪ್ಪೆನ ಮಗೆ – ಉಡುಪಿಯ ನೂತನ ಬಿಷಪ್‌ ವಂ. ಡಾ. ಲೆಸ್ಲಿ ಕ್ಲಿಫರ್ಡ್‌

ಉಡುಪಿ : ಸೌಹಾರ್ದತೆ, ಸಹಬಾಳ್ವೆ, ಶಾಂತಿ ನಮ್ಮೆಲ್ಲರ ಬದುಕಿನ ಗುರಿಯಾಗಬೇಕು. ಯಾರೊಬ್ಬರ ಕಣ್ಣಲ್ಲಿ ಕಣ್ಣೀರು ತರಿಸುವ ಕೆಲಸ ಮಾಡಬಾರದು ಎಂಬುದು ಜಿಲ್ಲೆಯ ಜನತೆಯಲ್ಲಿ ನನ್ನ ವಿನಂತಿ ಎಂದು ಉಡುಪಿ ಧರ್ಮ ಕ್ಷೇತ್ರದ ಎರಡನೇ ಧರ್ಮಾಧ್ಯಕ್ಷರಾಗಿ ಪೀಠಾರೋಹಣ ಮಾಡಿರುವ ಅ.ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಸಂದೇಶದಲ್ಲಿ ಹೇಳಿದ್ದಾರೆ.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ಉಡುಪಿ ಧರ್ಮಪ್ರಾಂತದ ನೂತನ ಬಿಷಪ್ ಆಗಿ ನಿಯುಕ್ತಿಗೊಂಡ ಬಳಿಕ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾನ್ ತುಳು ಅಪ್ಪೆನ ಮಗೆ ಎಂದು ಕೊಂಕಣಿ, ಇಂಗ್ಲೀಷ್, ಕನ್ನಡದ ಜೊತೆ ಜೊತೆಗೆ ತುಳುವಿನಲ್ಲೂ ಮಾತನಾಡಿದ ಡಾ. ಲೆಸ್ಲಿ ಅವರು, ನಾನು ಹುಟ್ಟಿದ್ದು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಮೀಪ. ಉಚ್ಚಿಲ ಸರಸ್ವತಿ ಶಾಲೆ, ಅದಮಾರು ಪೂರ್ಣಪ್ರಜ್ಞ ಸಂಸ್ಥೆಯಲ್ಲಿ ಶಿಕ್ಷಣ ಪಡೆದೆ. ಹೀಗಾಗಿ ನಾನು ತುಳು ತಾಯಿಯ ಮಗ ಎಂದು ಸಮರ್ಥಿಸಿಕೊಂಡರು.

ಬದುಕು ಸುಂದರ
ಯಾರೊಬ್ಬರೂ ಹಸಿವಿನಿಂದ ನರಳಬಾರದು. ಎಲ್ಲರ ಮುಖದಲ್ಲಿ ಸಂತೋಷದ ನಗು ಇದ್ದರೆ ಅದಕ್ಕಿಂತ ಮಿಗಿಲಾದ ಖುಷಿ ಇನ್ನೊಂದಿಲ್ಲ. ನಮ್ಮ ಧರ್ಮ ಯಾವುದೇ ಇರಬಹುದು. ಆದರೆ, ನಾವೆಲ್ಲ ಒಂದೇ ದೇವರ ಮಕ್ಕಳು ಎಂಬುದನ್ನು ತಿಳಿದಿರಬೇಕು. ಭಾಷೆ, ಸಂಸ್ಕೃತಿ, ಸಹಬಾಳ್ವೆ, ಸಹಮಿಲನಕ್ಕೆ ಯಾವುದೇ ಧರ್ಮವಿಲ್ಲ. ಪ್ರೀತಿಗಿಂತ ಮಿಗಿಲಾದ ಧರ್ಮವಿಲ್ಲ. ಎಲ್ಲರೂ ಹೊಂದಿಕೊಂಡು ಬಾಳಿದರೆ ಬದುಕು ಸುಂದರ ಎಂದರು.

ನಮ್ಮ ನಮ್ಮ ಜಾತಿ-ಧರ್ಮ ಬೇರೆ ಇರಬಹುದು. ಆದರೆ ಮನುಷ್ಯತ್ವಕ್ಕೆ, ಸಹೋದರತ್ವಕ್ಕೆ ಯಾವುದೇ ಧರ್ಮವಿಲ್ಲ. ವಿವಿಧ ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುತ್ತಿರುವ ನಮ್ಮ ಜಿಲ್ಲೆ ಶಾಂತಿ, ಸಹಬಾಳ್ವೆಗೆ ಹೆಸರಾಗಲಿ. ನಾವೆಲ್ಲ ಸಹೋದರಂತೆ ಬಾಳೋಣ. ಸರ್ವೇಜನ ಸುಖಿ:ನೋ ಭವಂತು ಎನ್ನುವಂತೆ ಎಲ್ಲರೂ ಸುಖ, ಸಂತೋಷ, ನೆಮ್ಮದಿಯಿಂದ ಬಾಳೋಣ ಎಂದು ಡಾ. ಲೆಸ್ಲಿ ಆಶಿಸಿದರು.

ನಿರ್ಗಮನ ಬಿಷಪ್ ಅ.ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ನೂತನ ಧರ್ಮಾಧ್ಯಕ್ಷರನ್ನು ಸನ್ಮಾನಿಸಿದರು. ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾ ಧರ್ಮಾಧ್ಯಕ್ಷರಾದ ಲಿಯೋಪೋಲ್ಡೊ ಗಿರೆಲ್ಲಿ, ಗೋವಾ ಮತ್ತು ದಮನ್ ಮಹಾ ಧರ್ಮಪ್ರಾಂತ್ಯದ ಮಹಾ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ, ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಹಾಗೂ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ರಘುಪತಿ ಭಟ್, ಜೆ.ಆರ್. ಲೋಬೊ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಸಹಿತ ವಿವಿಧ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು. ವಂ. ವಿಲ್ಸನ್ ಡಿಸೋಜಾ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಕಲ್ಯಾಣಪುರ ಕೆಥಡ್ರವ್‌ನ ಧರ್ಮಗುರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ವಂ. ರೋಶನ್ ಡಿಸೋಜಾ ವಂದಿಸಿದರು. ವಂ. ಡೆನಿಸ್ ಡೆಸಾ ನಿರೂಪಿಸಿದರು.















































































error: Content is protected !!
Scroll to Top