ಉಡುಪಿ : ಒಂದೇ ಮನೆಯಲ್ಲಿದ್ದರೂ ಪತ್ನಿ ವಿರುದ್ಧ ಪತಿ ಚಿನ್ನ ಕದ್ದ ಆರೋಪ ಮಾಡಿರುವ ವರದಿ ಉಡುಪಿ ಉಚ್ಚಿಲದಿಂದ ವರದಿಯಾಗಿದೆ. ಉಚ್ಚಿಲದ ಕಿರಣ್ ಕುಮಾರ್ ಎಂಬವರು ಪತ್ನಿ ವನಿತಾ ವಿರುದ್ಧ ಆರೋಪ ಮಾಡಿದ್ದು, ಮನೆಯ ಕಪಾಟಿನಲ್ಲಿದ್ದ ಬ್ಯಾಂಕ್ ಲಾಕರ್ ಕೀ ಕದ್ದು ಚಿನ್ನ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಎಲೆಕ್ಟ್ರೀಕಲ್ ಇಂಜಿನಿಯರ್ ಆಗಿರುವ ಕಿರಣ್ ಕುಮಾರ್ ಅವರು ವನಿತಾರನ್ನು 2016ರಲ್ಲಿ ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಬೇರೆ-ಬೇರೆಯಾಗಿ ಜೀವನ ಸಾಗಿಸುತ್ತಿದ್ದರು. ಕಿರಣ್ ಅವರಿಗೆ ಸಂಬಂಧಪಟ್ಟ ದಾಖಲಾತಿಗಳು ಹಾಗೂ ಉಡುಪಿ ಶಾಖೆಯ ಐಡಿಬಿಐ ಬ್ಯಾಂಕ್ ಲಾಕರ್ ಕೀಯನ್ನು ಮನೆಯ ಅಲ್ಮಾರಿನಲ್ಲಿ ಇಟ್ಟಿದ್ದರು. ಏ. 10ರಂದು ಕಿರಣ್ ಕೆಲಸಕ್ಕೆ ಹೋಗಿದ್ದಾಗ ವನಿತಾ ಅವರು ಕೀ ಮೇಕರ್ ಸಹಾಯದಿಂದ ಅಲ್ಮಾರಿ ಒಡೆದು ಅದರೊಳಗಿದ್ದ ಬ್ಯಾಂಕ್ ಲಾಕರ್ ಕೀಯನ್ನು ಕಳವು ಮಾಡಿ ಬ್ಯಾಂಕ್ ಶಾಖೆಯಿಂದ 23 ಲಕ್ಷ ರೂ. ಮೌಲ್ಯದ 169 ಗ್ರಾಂ ಚಿನ್ನ ಕಳವು ಮಾಡಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಲಾಕರ್ ಕೀ ಕದ್ದು 23 ಲಕ್ಷ ರೂ. ಮೌಲ್ಯದ ಚಿನ್ನ ಕದ್ದ ಪತ್ನಿ – ಪತಿಯಿಂದ ದೂರು









