ಕಾರ್ಕಳ: ನಿರುದ್ಯೋಗಿ ಯುವ ಜನರಿಗೆ ಉದ್ಯೋಗದ ಭರವಸೆ ನೀಡಲು ತಾಲೂಕಿನಲ್ಲಿ ಆಯೋಜಿಸಿರುವ ಉದ್ಯೋಗ ಮೇಳವು ಹಿಂದಿನ ಯೋಜನೆಗಳಂತೆ ಕೇವಲ ಚುನಾವಣಾ ಗಿಮಿಕ್ ಆಗಬಾರದು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಆಶಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಸರ್ಕಾರವು ‘ಯುವನಿಧಿ’ ಯೋಜನೆಯ ಮೂಲಕ ನಿರುದ್ಯೋಗಿಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ವಿವಿಧ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಉದ್ಯೋಗ ಮೇಳ ಆಯೋಜಿಸಿ ಯುವಕರ ಸಮಸ್ಯೆಗೆ ಸ್ಪಂದಿಸುವುದು ಸ್ವಾಗತಾರ್ಹ ಮತ್ತು ಅನಿವಾರ್ಯ. ಆದರೆ, ಇದು ಕೇವಲ ರಾಜಕೀಯ ಲಾಭಕ್ಕಾಗಿ ಬಳಕೆಯಾಗಬಾರದು” ಎಂದು ತಿಳಿಸಿದ್ದಾರೆ.
ಹಿಂದೆ ಶಾಸಕರು ನಡೆಸಿದ್ದ ಉದ್ಯೋಗ ಮೇಳದಲ್ಲಿ ಕೆಲವೇ ಕೆಲವು ಜನರಿಗೆ ಮಾತ್ರ ಅವರ ಅರ್ಹತೆಗೆ ತಕ್ಕದಲ್ಲದ ಕೆಲಸ ನೀಡಲಾಗಿತ್ತು ಎಂಬ ಬೇಸರ ಪೋಷಕರಲ್ಲಿದೆ. ಇನ್ನು ಕೆಲವರಿಂದ ದತ್ತಾಂಶ (ಡಾಟಾ) ಸಂಗ್ರಹಿಸಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆಕ್ರೋಶವೂ ಇದೆ. ‘ಕಂಚು ಇಲ್ಲದ’ ಕಂಚಿನ ಪ್ರತಿಮೆ ನಿರ್ಮಾಣ, ಅನುದಾನವಿಲ್ಲದೆ ಜವಳಿ ಪಾರ್ಕ್ ಗುದ್ದಲಿ ಪೂಜೆಯಂತಹ ಗಿಮಿಕ್‌ಗಳ ಸಾಲಿಗೆ ಈ ಮೇಳವೂ ಸೇರದಿರಲಿ. ಮೇಳದಲ್ಲಿ ಪಾಲ್ಗೊಳ್ಳುವ ಯುವ ಜನತೆಗೆ ಗರಿಷ್ಠ ಮಟ್ಟದ ಉದ್ಯೋಗ ಭದ್ರತೆ ಸಿಗಲಿ ಎಂದು ಅವರು ಹೇಳಿದ್ದಾರೆ.
























