ಪತ್ತೊಂಜಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿದೆ 250 ಸರಕಾರಿ ಮನೆಗಳು – ಅರ್ಹರಿಂದ ಅರ್ಜಿ ಸಲ್ಲಿಕೆಗೆ ಅವಕಾಶ

ಕಾರ್ಕಳ : ಕಾರ್ಕಳ ನಗರದ ಪತ್ತೊಂಜಿಕಟ್ಟೆ ಪರಿಸರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ – ಸರ್ವರಿಗೂ ಸೂರು ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 250 ಮನೆ ನಿರ್ಮಾಣವಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ಅಂದರೆ ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿ ವಾಸವಾಗಿರುವವರಿಗೆ ಸೂರು ಕಲ್ಪಿಸಲು ಪುರಸಭೆ ಕಚೇರಿಯಿಂದ ಎರಡೂವರೆ ಕಿ.ಮೀ. ದೂರದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣವಾಗುತ್ತಿದೆ.
ಸರ್ವರಿಗೂ ಸೂರು ಎಂಬ ಪರಿಕಲ್ಪನೆಯಲ್ಲಿ ನಿರ್ಮಾಣವಾಗುತ್ತಿರುವ ಈ ಮನೆ G + 2 ಮಾದರಿಯಲ್ಲಿದ್ದು, ಮನೆಗಳು 295. 85 ಚದರಡಿ ವಿಸ್ತೀರ್ಣ ಹೊಂದಿರಲಿದೆ. ಪ್ರತಿ ಮನೆಗೆ 6,38,171 ರೂ. ವೆಚ್ಚವಾಗುತ್ತದೆ. ನೀರು, ವಿದ್ಯುತ್‌, ಚರಂಡಿ ವ್ಯವಸ್ಥೆ ಹೀಗೆ ಮೂಲಭೂತ ಸೌಲಭ್ಯ ಇರಲಿದೆ.

1 ಲಕ್ಷ ರೂ.ಗೆ ಮನೆ
ಮನೆ ಪಡೆಯಲು ಇಚ್ಚಿಸುವ ಅರ್ಹ ಫಲಾನುಭವಿಗಳು 1 ಲಕ್ಷ ರೂ. ಕೆಎಸ್‌ಡಿಪಿ ಮಂಡಳಿಯ ಕಮೀಷನರ್‌ ಖಾತೆಗೆ ಪಾವತಿಸಬೇಕು ಉಳಿದ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಭರಿಸುತ್ತದೆ. ಹೀಗಾಗಿ ಕೇವಲ ಒಂದು ಲಕ್ಷ ರೂ.ಗೆ ಮನೆ ದೊರೆತಂತಾಗಿದೆ.

200 ಅರ್ಜಿ ಸಲ್ಲಿಕೆ
ಈಗಾಗಲೇ ಕಾರ್ಕಳ ಪುರಸಭೆಗೆ 200ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದೆ. ಇನ್ನೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಬಂದಂತಹ ಅರ್ಜಿಗಳನ್ನು ಪುರಸಭೆ ನಗರ ಆಶ್ರಯ ಸಮಿತಿಗೆ ರವಾನಿಸಲಾಗುತ್ತಿದೆ. ಆಶ್ರಯ ಸಮಿತಿಯು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಿದೆ. ಆಯ್ಕೆಯಾದ ಬಳಿಕವಷ್ಟೇ ಫಲಾನುಭವಿಗಳು 1 ಲಕ್ಷ ರೂ. ಮೊತ್ತವನ್ನು ಮಂಡಳಿಗೆ ಪಾವತಿ ಮಾಡಿದರಾಯಿತು. ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಜನತೆಗೆ ಮನೆ ಹಸ್ತಾಂತರವಾಗುತ್ತದೆ. ಅರ್ಜಿ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಚೇರಿ ಸಂಪರ್ಕಿಸಬಹುದಾಗಿದೆ.

















error: Content is protected !!
Scroll to Top