ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್ ನಿಧನ

ಮಂಗಳೂರು : ಕೇವಲ ತಂತ್ರಜ್ಞಾನದಿಂದಷ್ಟೇ ಅಲ್ಲ, ಗ್ರಾಮೀಣ ಜನರ ಬದುಕಿಗೆ ಆಸರೆಯಾಗುವ ಮೂಲಕ ದೇಶದ ಗಮನ ಸೆಳೆದಿದ್ದ ಅಪರೂಪದ ತಾಂತ್ರಿಕ ಯೋಗಿ, ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಜ್ (76) ಅವರು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಸುಳ್ಯದ ಕೆವಿಜೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಗಿರೀಶ್ ಭಾರದ್ವಾಜ್ ಅವರು ಕೆಲವು ದಿನಗಳ ಹಿಂದೆ ಉತ್ತರಾಖಾಂಡ ರಾಜ್ಯದ ದೇವಸ್ಥಾನಗಳಿಗೆ ಹೋಗಿ ಬಂದಿದ್ದು, ಆ ಬಳಿಕ ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.


ಡಾ. ಗಿರೀಶ್ ಭಾರದ್ವಾಜ್ ಅವರು 1950ರ ಮೇ 2 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಜನಿಸಿದರು. ಹಳ್ಳಿಯ ಪರಿಸರದಲ್ಲೇ ಬೆಳೆದ ಅವರಿಗೆ ಗ್ರಾಮೀಣ ಭಾಗದ ಜನರ ಕಷ್ಟಗಳ ಅರಿವಿತ್ತು. 1973 ರಲ್ಲಿ ಮಂಡ್ಯದ ಪ್ರತಿಷ್ಠಿತ ಪಿ.ಇ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಪದವಿ ಮುಗಿದ ತಕ್ಷಣ ದೊಡ್ಡ ನಗರಗಳತ್ತ ಅಥವಾ ವಿದೇಶಗಳತ್ತ ಮುಖ ಮಾಡದ ಅವರು, ತಮ್ಮ ತಂದೆಯ ಆಶಯದಂತೆ ಹುಟ್ಟೂರಿನಲ್ಲೇ ಉಳಿದುಕೊಂಡರು. ಊರಿನಲ್ಲೇ ಸಣ್ಣದೊಂದು ವರ್ಕ್‌ಶಾಪ್ ಆರಂಭಿಸಿ ಸ್ಥಳೀಯರಿಗೆ ನೆರವಾಗಲು ಆರಂಭಿಸಿದರು.

ಅದು 1989ರ ಸಮಯ. ಅರಂಬೂರು ಗ್ರಾಮದ ಜನರಿಗೆ ಸುಳ್ಯ ಪಟ್ಟಣದೊಂದಿಗೆ ಸಂಪರ್ಕ ಸಾಧಿಸಲು ಪಯಸ್ವಿನಿ ನದಿಯೇ ದೊಡ್ಡ ಅಡ್ಡಿಯಾಗಿತ್ತು. ಮಳೆಗಾಲದಲ್ಲಂತೂ ಹಳ್ಳಿಯ ಜನ ಸಂಪೂರ್ಣವಾಗಿ ದ್ವೀಪದಂತಾಗುತ್ತಿದ್ದರು. ಅಲ್ಲಿ ಒಂದು ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಗಿರೀಶ್ ಅವರ ಬಳಿ ವಿನಂತಿಸಿಕೊಂಡರು. ಆ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ‘ತೂಗು ಸೇತುವೆ’ಯ ಕಲ್ಪನೆಯೇ ಅತ್ಯಂತ ಹೊಸದಾಗಿತ್ತು ಮತ್ತು ಸವಾಲಿನದ್ದಾಗಿತ್ತು.

ಇದನ್ನು ಯಶಸ್ವಿಯಾಗಿ ನಿಭಾಯಿಸಿದ ಗಿರೀಶ್ ಅವರು, 40 ಜನ ಸ್ವಯಂಸೇವಕ ಯುವಕರ ತಂಡವನ್ನು ಕಟ್ಟಿಕೊಂಡು ಕೇವಲ ಕೆಲವೇ ದಿನಗಳಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಅತ್ಯಂತ ಬಲಿಷ್ಠವಾದ ತಮ್ಮ ಮೊದಲ ತೂಗು ಸೇತುವೆಯನ್ನು ಸಾಕಾರಗೊಳಿಸಿದರು. ಆಶ್ಚರ್ಯದ ಸಂಗತಿಯೆಂದರೆ, ನಿರ್ಮಾಣವಾಗಿ 35ಕ್ಕೂ ಹೆಚ್ಚು ವರ್ಷಗಳು ಕಳೆದರೂ ಆ ಮೊದಲ ಸೇತುವೆ ಇಂದಿಗೂ ಜನರ ಸುರಕ್ಷಿತ ಸಂಪರ್ಕ ಕೊಂಡಿಯಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.

ಮೊದಲ ಯಶಸ್ಸಿನ ನಂತರ ಗಿರೀಶ್ ಭಾರದ್ವಾಜ್ ಅವರ ಖ್ಯಾತಿ ದೇಶದಾದ್ಯಂತ ಹರಡಿತು. ನದಿ, ಕೊಳ್ಳ, ಹಳ್ಳಗಳಿಂದಾಗಿ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದ ನೂರಾರು ದುರ್ಗಮ ಪ್ರದೇಶಗಳಿಗೆ ಇವರು ಆಶಾಕಿರಣವಾದರು. ಕರ್ನಾಟಕ, ಕೇರಳ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಭದ್ರ ತೂಗು ಸೇತುವೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವರು ದೇಶಾದ್ಯಂತ 160ಕ್ಕೂ ಹೆಚ್ಚು ತೂಗು ಸೇತುವೆಗಳ ನಿರ್ಮಾಣ ಮಾಡಿದ್ದಾರೆ. ಅವರ ಈ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತ್ತು.

















error: Content is protected !!
Scroll to Top