ಪಟ್ಟಾ ಜಾಗದಿಂದ ಸಾರ್ವಜನಿಕ ರಸ್ತೆಗೆ ಮರ ಬಿದ್ದಲ್ಲಿ ತೆರವುಗೊಳಿಸುವ ಜವಾಬ್ದಾರಿ ಯಾರದ್ದು ?
ಕಾರ್ಕಳ : ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲೂರು – ರಂಗನಪಲ್ಕೆ ಸಂಪರ್ಕಿಸುವ ಬಾಣಾಲು ನಾಯರ್‌ಬೆಟ್ಟು ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾರ್ವಜನಿಕ ರಸ್ತೆಯಲ್ಲಿ ಬೃಹತ್ ಆಕಾರದ ಮರವೊಂದು ಗಾಳಿ ಮಳೆಗೆ ಬಿದ್ದಿದ್ದು, ಮರ ತೆರವುಗೊಳಿಸುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜು. 6ರ ರಾತ್ರಿ ಬೀಸಿದ ಗಾಳಿ ಮಳೆಗೆ ಮರ ರಸ್ತೆಗೆ ಬಿದ್ದಿದೆ. ಪರಿಣಾಮವಾಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಅಲ್ಲದೆ ವಿದ್ಯುತ್ ತಂತಿಯೂ ಮುರಿದಿದೆ. ಈ ಬಗ್ಗೆ ಸ್ಥಳೀಯರು ಮರ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ತಿಳಿಸಿದಾಗ ಅದು ಪಟ್ಟಾ ಜಾಗದಲ್ಲಿರುವ ಮರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಪಟ್ಟಾ ಜಾಗದಲ್ಲಿ ಬಿದ್ದಿರುವ ಒಳ್ಳೆಯ ಮರ ತೆರವುಗೊಳಿಸಲು ಮುಂದಾದರೆ ಎಲ್ಲರಿಗಿಂತ ಮುಂಚೆ ಓಡಿ ಬಂದು ಕಿರಿ ಕಿರಿ ಮಾಡುವ ಅರಣ್ಯ ಅಧಿಕಾರಿಗಳು ಸಾರ್ವಜನಿಕ ರಸ್ತೆಗೆ ಬಿದ್ದ ಮರ ತೆರವಿಗೆ ಏಕೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗ ಏಕೆ ಪಟ್ಟಾ ಜಾಗ ಎಂಬ ಅಡ್ಡಿ ಎಂದು ಪ್ರಶ್ನಿಸಿರುವ ಸ್ಥಳೀಯರು ಮರ ಬಿದ್ದ ಪರಿಣಾಮ ವಿದ್ಯುತ್ ಕಂಬದ ತಂತಿಯೂ ಹಾನಿಗೊಳಗಾಗಿದ್ದು ಮೆಸ್ಕಾಂ ಇಲಾಖೆಯೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮರ ತೆರವು ಕಾರ್ಯ – ಪಿಡಿಓ
ಈ ಬಗ್ಗೆ ನ್ಯೂಸ್ ಕಾರ್ಕಳ ಬೈಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಲ್ಲಿ ವಿಚಾರಿಸಿದಾಗ, ಅದು ಪಟ್ಟಾ ಮತ್ತು ಸರಕಾರಿ ಜಾಗದ ನಡುವಿನ ಮರವಾಗಿದ್ದು ಸಾರ್ವಜನಿಕ ಸಂಪರ್ಕ ರಸ್ತೆಗೆ ಬಿದ್ದ ಕಾರಣ ಇಲ್ಲಿ ಪಟ್ಟಾ ಜಾಗ ಎಂದು ನೋಡದೆ ಪಂಚಾಯತ್ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಮರ ತೆರವುಗೊಳಿಸುವ ಕಾರ್ಯ ಪ್ರಾರಂಭಿಸಿದ್ದೇವೆ ಎಂದಿದ್ದಾರೆ.








