ಮಾಜಿ ಶಾಸಕ ದಿ. ಹೆಚ್. ಗೋಪಾಲ‌‌ ಭಂಡಾರಿಯವರ 7ನೇ ಪುಣ್ಯಸ್ಮರಣೆ

ಕಾರ್ಕಳ : ಬ್ಲಾಕ್‌ ಕಾಂಗ್ರೆಸ್‌ ಕಾರ್ಕಳ ಇದರ ಆಶ್ರಯದಲ್ಲಿ ಮಾಜಿ ಶಾಸಕ ದಿ. ಹೆಚ್. ಗೋಪಾಲ ಭಂಡಾರಿಯವರ 7ನೇ ಪುಣ್ಯಸ್ಮರಣೆ ಪ್ರಯುಕ್ತ ಜು.4ರಂದು ತಾಲೂಕು ಕಚೇರಿ ಬಳಿಯಿರುವ ದೇವಾಡಿಗ ಸುಧಾರಕ‌ ಸಂಘದ ಸಭಾಂಗಣದಲ್ಲಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಂಗ್ರೆಸ್‌ ಮುಖಂಡರು ಗೋಪಾಲ ಭಂಡಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿದರು.

ಭಂಡಾರಿಯವರ ಸ್ಥಾನ ಯಾರಿಗೂ ತುಂಬಲು ಸಾಧ್ಯವಿಲ್ಲ – ಶುಭದ ರಾವ್
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಒಬ್ಬ ರಾಜಕಾರಣಿಯಾದವ ಹೇಗಿರಬೇಕೆಂಬುದಕ್ಕೆ ಉತ್ತಮ ನಿದರ್ಶನ ಗೋಪಾಲ ಭಂಡಾರಿಯವರು. ಅವರ ಸ್ಥಾನವನ್ನು ಯಾರಿಗೂ ತುಂಬಲು ಸಾಧ್ಯವಿಲ್ಲ ಅವರಿಗೆ ಅವರೇ ಸಾಟಿ. ರಾಜಕೀಯವಾಗಲಿ, ವೈಯಕ್ತಿಕ ಬದುಕಿನಲ್ಲಾಗಲಿ ಯಾರೊಬ್ಬರಿಗೂ ಬೇಸರ ಪಡಿಸದಂತಹ ಶ್ರೇಷ್ಠ ವ್ಯಕ್ತಿತ್ವ ಅವರದು. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳುವುದೇ‌ ಅವರಿಗೆ ನಾವು ನೀಡುವ ಗೌರವ ಮತ್ತು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಶೃದ್ಧಾಂಜಲಿ ಎಂದರು

ಪುತ್ಥಳಿ ನಿರ್ಮಾಣ
ಅವರ ಪುತ್ಥಳಿ ನಿರ್ಮಾಣದ ಕನಸು ನಮ್ಮದಾಗಿದ್ದು, ಈಗಾಗಲೇ ಕಳೆದ ವರ್ಷ ಹೆಬ್ರಿ ನಿರ್ಮಾಣ ಮಾಡಲಾಗಿದೆ. ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ನಿರ್ಮಾಣ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಆದರೆ, ಕಾಂಗ್ರೆಸ್ ಭವನಕ್ಕೆ ಜಾಗ ನಿಗದಿಯಾಗಿದ್ದು, ಭವನದ ಆವರಣದಲ್ಲೇ ಭಂಡಾರಿಯವರ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಯೋಜಿಸಿದ್ದೇವೆ ಎಂದರು.

ಭ್ರಷ್ಟಚಾರ- ದ್ವೇಷ ರಹಿತ ರಾಜಕಾರಣವೇ ನಿಜವಾದ‌ ರಾಜಕೀಯ : ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಗೋಪಾಲ ಭಂಡಾರಿ ಅವರ ಅಗಲುವಿಕೆ ಎಂದಿಗೂ ತುಂಬಲಾರದ ನಷ್ಟ. ನಾವಿಂದು ಒಂದು ಸುಸಜ್ಜಿತ ವ್ಯವಸ್ಥೆಯಲ್ಲಿದ್ದೇವೆ ಎಂದರೆ ಅದಕ್ಕೆ ವೀರಪ್ಪ ಮೊಯ್ಲಿ ಮತ್ತು ಗೋಪಾಲ ಭಂಡಾರಿಯವರ ಮಾರ್ಗರ್ದನವೇ ಕಾರಣ. ಅವರ ನಿಸ್ವಾರ್ಥ ಸೇವೆಯ ಪ್ರತಿಫಲವನ್ನು ಇಂದು ನಾವು ಹೋದೆಲ್ಲೆಲ್ಲಾ ಪಡೆಯುವ ಗೌರವದಲ್ಲಿ ಕಾಣುತ್ತಿದ್ದೇವೆ. ರಾಜಕೀಯವೆಂದರೆ ಅಧಿಕಾರವಲ್ಲ ಜನಸೇವೆಯ ಅವಕಾಶವೆಂಬುದನ್ನು ಅರ್ಥಗರ್ಭಿತವಾಗಿ ಪಾಲಿಸಿದವರು ಭಂಡಾರಿಯವರು ಎಂದ ಅವರು ಭ್ರಷ್ಟಚಾರ ರಹಿತವಾದ ಮತ್ತು ದ್ವೇಷ ರಹಿತವಾದ ರಾಜಕಾರಣವೇ ನಿಜವಾದ‌ ರಾಜಕೀಯ ಎಂದು ಹೇಳಿದರು.

ಗಂಗೆಯಂತೆ ಪವಿತ್ರ – ಬಿಪಿನ್‌ಚಂದ್ರಪಾಲ್‌ ನಕ್ರೆ
ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಗೋಪಾಲ ಭಂಡಾರಿಯವರ ಬದುಕು ಗಂಗೆಯಂತೆ ಪವಿತ್ರವಾದುದು. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಜನನಾಯಕನಾಗಿ ಕಾರ್ಕಳ-ಹೆಬ್ರಿಯ ಮೂಲೆ ಮೂಲೆಗೂ ತೆರಳಿ ಜನರ ಕಷ್ಟ, ನೋವಿಗೆ ಸ್ಪಂದಿಸುತ್ತಿದ್ದರು. ಅಲ್ಲದೆ ನಮ್ಮಲ್ಲಿದ್ದ ಒರಟುತನದ ಮಾತುಗಳನ್ನು ಸರಿಪಡಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಕಾರ್ಕಳ ಕಾಂಗ್ರೆಸ್‌ನ ಕಾರ್ಯಕರ್ತರ ಮನದಲ್ಲಿ ಮೂರ್ತಿಯಾಗಿ ನೆಲೆಯಾಗಿದ್ದಾರೆ ಎಂದು ಹೇಳಿದರು.

ಮತ್ತೆ ಮತ್ತೆ ನೆನಪಿಸುವ ಹೆಸರು – ಮಂಜುನಾಥ ಪೂಜಾರಿ ಮುದ್ರಾಡಿ
ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ‌ ಮಾತನಾಡಿ, ಕಾರ್ಕಳದ ಜನತೆ ಮತ್ತೆ ಮತ್ತೆ ನೆನಪಿಸುವ ಹೆಸರು ಗೋಪಾಲ‌ ಭಂಡಾರಿಯವರದು. ಅವರು ಯಾವುದೇ ಅಹಂ‌ ಭಾವವಿಲ್ಲದೆ ಬಾಳಿ ‌ಬದುಕಿದವರು. ನಮ್ಮಂತಹ ನೂರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಹೆಚ್ಚು ಶಿಕ್ಷಣ ಪಡೆದವರಲ್ಲ. ಆದರೆ ಡಿಗ್ರಿ, ಡಾಕ್ಟರೇಟ್‌ಗಿಂತಲೂ ಮಿಗಿಲಾದ ಮಾನವೀಯ ಮೌಲ್ಯ ಹೊಂದಿದ್ದರು ಎಂದರು.

ನೆನಪು ಶಾಶ್ವತ – ನೀರೆ ಕೃಷ್ಣ ಶೆಟ್ಟಿ
ಗೋಪಾಲ ಭಂಡಾರಿ ಅಭಿಮಾನಿ ವೇದಿಕೆಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಕುಟುಂಬದ ಹಿರಿಯ ವ್ಯಕ್ತಿಯನ್ನು ನೆನೆದಾಗ ಮಾತ್ರ ಕುಟುಂಬದ ಮಗು ಸನ್ನಡತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಕಾಂಗ್ರೆಸ್‌ ಕುಟುಂಬದಲ್ಲಿ ಗೋಪಾಲ ಭಂಡಾರಿಯವರ ನೆನಪು ಶಾಶ್ವತ. ಹಣವಿದ್ದರೆ ಮಾತ್ರ ಹೆಸರು ಎಂಬ ಮಾತಿಗೆ ಅಪವಾದ ಎಂಬಂತೆ ಗುರುತಿಸಿಕೊಂಡವರು ಭಂಡಾರಿಯವರು ಎಂದು ಗೋಪಾಲ ಭಂಡಾರಿಯವರ ಕಾರ್ಯವೈಖರಿಯನ್ನು ನೆನಪಿಸಿಕೊಂಡರು.

ಮಾದರಿದಾಯಕ ವ್ಯಕ್ತಿತ್ವ – ಸುಧಾಕರ್‌ ಕೋಟ್ಯಾನ್
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಧಾಕರ್ ಕೋಟ್ಯಾನ್ ಮಾತನಾಡಿ, ಗೋಪಾಲ ಭಂಡಾರಿಯವರೆಂದರೆ‌ ನಮ್ಮಗೊಂದು ದೈರ್ಯ ಎಂಬಂತಿದ್ದರು. ರಾಜಕೀಯ‌ ರಂಗ ಹೊರತು ಬೇರೆಲ್ಲೂ ರಾಜಕೀಯದ ವಿಚಾರ ಅವರು ಮಾತನಾಡಿದವರಲ್ಲ. ಅವರ ಈ ನಡೆ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಇಂಜಿನಿಯರ್‌ ವಿದ್ಯಾರ್ಥಿಯೋರ್ವನಿಗೆ ಧನ ಸಹಾಯ ಮಾಡಲಾಯಿತು. ರಕ್ತದಾನ ಶಿಬಿರದಲ್ಲಿ 56 ಯುನಿಟ್ ರಕ್ತ ಸಂಗ್ರಹವಾಗಿದೆ. ಗ್ಯಾರಂಟಿ ಅನುಷ್ಠಾನ‌ ಸಮಿತಿಯ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಪುರಸಭೆಯ ಮಾಜಿ ಅಧ್ಯಕ್ಷರಾದ ಸುಭಿತ್ ಎನ್. ಆರ್., ಪ್ರತಿಮಾ ರಾಣೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ಪ್ರಮುಖರಾದ ಸಿರಿಯಣ್ಣ ಶೆಟ್ಟಿ, ಉಮೇಶ್ ರಾವ್ ಬಜಗೋಳಿ, ಡಾ. ಪ್ರೇಮದಾಸ್, ಶಬ್ಬೀರ್ ಮಿಯ್ಯಾರು, ಕಾಂಗ್ರೆಸ್‌ನ ವಿವಿಧ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿರಿಯ ಕಾಂಗ್ರೆಸ್ ಮುಖಂಡರಾದ ಪ್ರಭಾಕರ್ ಬಂಗೇರ ಸ್ವಾಗತಿಸಿ, ಜಾರ್ಜ್ ಕ್ಯಾಸ್ತಲಿನೋ ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಿನಾಥ್‌ ಭಟ್‌ ವಂದಿಸಿದರು.









error: Content is protected !!
Scroll to Top