ರಾಮಮಂದಿರ ಹುಂಡಿ ಹಣ ದುರುಪಯೋಗ ಬಿಜೆಪಿ-ಸಂಘ ಪರಿವಾರಕ್ಕೂ ನೋವುಂಟು ಮಾಡಿದೆ : ಸಂಸದ ಕೋಟ

ಉಡುಪಿ : ಅಯೋಧ್ಯೆಯ ರಾಮಮಂದಿರ ಹುಂಡಿ ಹಣ ದುರುಪಯೋಗ ವಿಷಯದಲ್ಲಿ ಯಾರೂ ಮೌನವಾಗಿಲ್ಲ. ರಾಮಮಂದಿರ ಹಿಂದೂಗಳ ಶ್ರದ್ಧಾಕೇಂದ್ರವಾಗಿದ್ದು, ಅಲ್ಲಿ ನಡೆದಿರುವ ಘಟನೆ ದೇಶಕ್ಕೂ, ಬಿಜೆಪಿಗೂ ಹಾಗೂ ಸಂಘ ಪರಿವಾರಕ್ಕೂ ನೋವುಂಟು ಮಾಡಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಬಂಧನ ಸೇರಿದಂತೆ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ ಎಂದು ಮುಖ್ಯಮಂತ್ರಿಯವರೂ ಹೇಳಿದ್ದಾರೆ ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಚಪ್ಪಲಿ ಎಸೆದ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಘಟನೆ ತಪ್ಪು. ಅದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಆಡಳಿತ ಪಕ್ಷದ ಶಾಸಕರೇ ಪ್ರಚೋದನಾತ್ಮಕವಾಗಿ ವರ್ತಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕಾರಿನ ಮೇಲೆ ನಿಂತು ತೊಡೆ ತಟ್ಟಿ, ಭುಜ ತಟ್ಟಿ ಪ್ರಚೋದನೆ ನೀಡುವುದು ಸರಿಯಲ್ಲ. ಈ ಕುರಿತು ಮುಖ್ಯಮಂತ್ರಿಗಳು ಉತ್ತರ ನೀಡಬೇಕು. ಆಡಳಿತ ಪಕ್ಷದ ಶಾಸಕರಿಗೆ ಬುದ್ಧಿ ಹೇಳುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ. ಆದರೆ ಪ್ರಚೋದನೆ ನೀಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಗೃಹ ಸಚಿವರು ರಾಜ್ಯಧರ್ಮ ಪಾಲಿಸಿ, ಎಲ್ಲರ ಮೇಲೂ ಸಮಾನವಾಗಿ ಕಾನೂನು ಅನ್ವಯಿಸಬೇಕು ಎಂದರು. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಆಡಿಯೊ ಕುರಿತು ಪ್ರತಿಕ್ರಿಯಿಸಿದ ಅವರು, ಸದಾನಂದ ಗೌಡರೇ ನಾನು ಮಾತನಾಡಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಅಡ್ಡ ಮತದಾನ ಪ್ರಕರಣದಲ್ಲಿ ಸಣ್ಣಪುಟ್ಟ ಸಮಸ್ಯೆ ಆಗಿದ್ದು, ಎಲ್ಲ ಮಾಹಿತಿಯನ್ನೂ ಪಕ್ಷದ ಕೇಂದ್ರ ನಾಯಕತ್ವ ಪಡೆದುಕೊಂಡಿದೆ ಎಂದು ಹೇಳಿದರು. ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕ ಪ್ರಮಾಣ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ತಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂಬ ನಿಲುವು ತಿಳಿಸಿದ್ದಾರೆ.

ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ ಎಂದರು. ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು–ನೀವು ಹುಟ್ಟುವುದಕ್ಕೂ ಮುನ್ನವೇ ಆರ್‌ಎಸ್‌ಎಸ್ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿದೆ.

ರಾಷ್ಟ್ರಪ್ರೇಮದ ಪ್ರತೀಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಅದು. ಜಾತಿ–ಧರ್ಮಕ್ಕಿಂತ ದೇಶ ಮೊದಲು ಎನ್ನುವ ರಾಷ್ಟ್ರಭಕ್ತರ ಸಂಘವಾಗಿದೆ. ನೆಹರೂ ಅವರಿಂದಲೂ ಮೆಚ್ಚುಗೆ ಪಡೆದಿದ್ದು, ಗಣರಾಜ್ಯೋತ್ಸವ ಪಥಸಂಚಲನದಲ್ಲೂ ಸಮವಸ್ತ್ರದಲ್ಲಿ ಭಾಗವಹಿಸಿದೆ. ಆರ್‌ಎಸ್‌ಎಸ್ ನೋಂದಣಿ ಬಗ್ಗೆ ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ಗೃಹ ಸಚಿವ ಜಿ. ಪರಮೇಶ್ವರ್ ಅವರ ಹಿಂದಿನ ಅವಧಿಯಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. ಆರ್‌ಎಸ್‌ಎಸ್‌ನಿಂದ ರಾಜ್ಯದ 500ಕ್ಕೂ ಹೆಚ್ಚು ಕಡೆ ಪತ್ರ ಸಂಚಲನ ನಡೆದಿದ್ದರೂ ಎಲ್ಲಿಯೂ ಗೊಂದಲಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿದರು.































error: Content is protected !!
Scroll to Top