ಇಂದಿನಿಂದ ʼವಿಬಿ-ಜಿ ರಾಮ್‌ ಜಿʼ ಜಾರಿ – 125 ದಿನಗಳ ಕೆಲಸ

ದೆಹಲಿ : ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾಯ್ದೆಯ (ನರೇಗಾ) ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಕಾಯ್ದೆಯು ದೇಶದಾದ್ಯಂತ ಇಂದಿನಿಂದಲೇ (ಜು. 1) ಅನುಷ್ಠಾನಕ್ಕೆ ಬರಲಿದೆ. ಹೊಸ ಕಾಯ್ದೆಯಡಿ ಪರಿಷ್ಕೃತ ವೇತನ ದರಗಳನ್ನು ಮಂಗಳವಾರ ಪ್ರಕಟಿಸಲಾಗಿದೆ.

ರಾಷ್ಟ್ರೀಯ ಸರಾಸರಿ ವೇತನ, ನರೇಗಾ ಅಡಿಯಲ್ಲಿ ದಿನಕ್ಕೆ ₹298.8ಗಳಿಂದ ಈಗ ವಿಬಿ-ಜಿ ರಾಮ್ ಜಿ ಅಡಿಯಲ್ಲಿ ದಿನಕ್ಕೆ 327.4ಗಳಿಗೆ ಏರಿಕೆ ಮಾಡಲಾಗಿದೆ. ಅಂದರೆ ದಿನಕ್ಕೆ ಸರಾಸರಿ ₹28.6 ಹೆಚ್ಚಳವಾಗಿದೆ. ಜುಲೈ 1 ರಿಂದಲೇ ಪರಿಷ್ಕೃತ ವೇತನ ದರ ಜಾರಿಗೆ ಬರಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.

125 ದಿನಗಳ ಕೆಲಸದ ಗ್ಯಾರಂಟಿ
ಹಳೆಯ ಯೋಜನೆಯಡಿ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಆದರೆ ಹೊಸ ಕಾಯ್ದೆಯಡಿ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ಗರಿಷ್ಠ 125 ದಿನಗಳ ಉದ್ಯೋಗ ಖಾತರಿ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಕನಿಷ್ಠ ಕೂಲಿ ₹300
ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ದಿನಗೂಲಿ ದರವು ₹300 ಕ್ಕಿಂತ ಕಡಿಮೆ ಇರಬಾರದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಈ ಮುನ್ನ ಕೆಲವು ರಾಜ್ಯಗಳಲ್ಲಿ ಕನಿಷ್ಠ ಕೂಲಿ ₹241ರಷ್ಟಿತ್ತು.

ರಾಜ್ಯಾವಾರು ಕೂಲಿ ದರಗಳು
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಕೂಲಿ ದರವನ್ನು ಶೇ. 15 ರಿಂದ 25 ರಷ್ಟು ಹೆಚ್ಚಿಸಲಾಗಿದೆ. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಗರಿಷ್ಠ ಶೇ 24.5 ರಷ್ಟು ಏರಿಕೆಯಾಗಿದೆ. ಹರಿಯಾಣದಲ್ಲಿ ಅತ್ಯಧಿಕ ₹409, ಗೋವಾದಲ್ಲಿ ₹406, ಕೇರಳದಲ್ಲಿ ₹401 ಹಾಗೂ ಸಿಕ್ಕಿಂನಲ್ಲಿ ಗರಿಷ್ಠ ₹450 ದಿನಗೂಲಿ ನಿಗದಿಪಡಿಸಲಾಗಿದೆ.

ಅನುದಾನ ಹಂಚಿಕೆ:
ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೊದ ಹಂತವಾಗಿ ₹95,692.31 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ನರೇಗಾ ಅಡಿಯಲ್ಲಿ ಜೂನ್ 30ರವರೆಗೆ ನಡೆಯುವ ಎಲ್ಲ ಕಾಮಗಾರಿಗಳು ಹೊಸ ಕಾಯ್ದೆಯ ಅಡಿ ತಡೆರಹಿತವಾಗಿಯೇ ಮುಂದುವರಿಯಲಿವೆ. ಅಲ್ಲದೇ ವಿಬಿ-ಜಿ ರಾಮ್ ಜಿ ಕಾಯ್ದೆ ಅನ್ವಯ ಎಲ್ಲ ಕಾರ್ಮಿಕರಿಗೆ ಉದ್ಯೋಗ ಚೀಟಿ ನೀಡುವವರೆಗೆ ನರೇಗಾದಡಿ ನೀಡಲಾಗಿದ್ದ ಉದ್ಯೋಗ ಚೀಟಿಯನ್ನೇ ಮಾನ್ಯ ಮಾಡಲಾಗುವುಹ ಹೇಳಿದೆ.
‘ಇ-ಕೆವೈಸಿ ಮೂಲಕ ಉದ್ಯೋಗ ಚೀಟಿ ಪಡೆಯಲು ಬಾಕಿ ಇರುವ ಕಾರ್ಮಿಕರಿಗೂ ಕೆಲಸ ನಿರಾಕರಿಸಬಾರದು. ಉದ್ಯೋಗ ಚೀಟಿಗೆ ನೋಂದಣಿಯಾಗದ ಕಾರ್ಮಿಕರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಮುಂದುವರಿಸಬಹುದು ಎಂದೂ ತಿಳಿಸಿದೆ.























error: Content is protected !!
Scroll to Top