ಕಾರ್ಕಳ – ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ ಬೆಳ್ತಂಗಡಿ ಮಲವಂತಿಗೆ ಗ್ರಾಮಸ್ಥರು
ಕಾರ್ಕಳ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಯಲ್ಲಿನ ಜನವಸತಿ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಶಾಶ್ವತವಾಗಿ ತಡೆಗಟ್ಟಲು ಪುನರ್ವಸತಿ ಕಲ್ಪಿಸಬೇಕೆಂಬ ನಿರ್ಣಯವನ್ನು ಸರಕಾರದಿಂದ ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಈ ವ್ಯಾಪ್ತಿಯ ಅನೇಕ ಕುಟುಂಬಗಳು ಸ್ವಯಂ ಪ್ರೇರಿತವಾಗಿ ಹೊರಬರುವುದಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಸರಕಾರ ಪರಿಹಾರ ಹಣವನ್ನೂ ಇನ್ನೂ ಸಹ ನೀಡಿಲ್ಲ ಎಂದು ಬೆಳ್ತಂಗಡಿ ತಾಲೂಕಿನ ಎಳನೀರು ಸುತ್ತುಗಟ್ಟು ಮಲವಂತಿಗೆ ಗ್ರಾಮದ 9 ಕುಟುಂಬದ ಜನತೆ ಆ. 13ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ ಕುದುರೆಮುಖ ವನ್ಯಜೀವಿ ವಿಭಾಗ – ಕಾರ್ಕಳ ಇಲ್ಲಿಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಎಳನೀರು ಸುತ್ತುಗಟ್ಟು ಮಲವಂತಿಗೆ ಗ್ರಾಮದ ಜಿತೇಂದ್ರ ಇಂದ್ರ (4.05 ಎಕ್ರೆ), ಚೆನ್ನಕ್ಕ (1.15 ಎಕ್ರೆ), ನೇಮು ಮಲೆಕುಡಿಯ (2.59 ಎಕ್ರೆ), ಮೃತ್ಯುಂಜಯ ನಾಯ್ಕ್ (2.45 ಎಕ್ರೆ), ಕಮಲ (2.14 ಎಕ್ರೆ) ಕರಿಯ ಮಲೆಕುಡಿಯ (0.62 ಎಕ್ರೆ), ಚಿನ್ನಮ್ಮ (1.12 ಎಕ್ರೆ), ಸಂತೋಷ್ (0.9 ಎಕ್ರೆ), ನಾವೂರ ಗ್ರಾಮದ ಕವಿತಾ ಕೊಡಂಗೆ (0.9 ಎಕ್ರೆ) ಈ 9 ಕುಟುಂಬಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದುವುದಾಗಿ 2018 – 2020ರ ಅವಧಿಯಲ್ಲಿ ಸ್ವಯಂ ಪ್ರೇರಿತವಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಅದರಂತೆ ಇವರ ಅರ್ಜಿಗಳನ್ನು ಪರಿಶೀಲಿಸಿ, ಮೌಲ್ಯಮಾಪನ ಮಾಡಿ 6 ಕೋಟಿ 28 ಲಕ್ಷ ರೂ. ಪರಿಹಾರವನ್ನು ಸೂಚಿಸಲಾಗಿತ್ತು. 2025ರ ಡಿ. 17ರಂದು ಜಿಲ್ಲಾಧಿಕಾರಿಯವರ ಅಧಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುನರ್ವಸತಿ ಪರಿಹಾರ ಪಾವತಿಸಲು ಅನುಮೋದನೆ ದೊರೆತಿರುತ್ತದೆ. ಆದರೆ, ಸರಕಾರ ಈವರೆಗೂ ಪರಿಹಾರದ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಇವರೊಂದಿಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿದ್ಧಾಪುರ ವನ್ಯಜೀವಿ ಉಪವಿಭಾಗ ಜಿ. ಡಿ. ದಿನೇಶ್, ನೀವು ನೀಡಿದ ಅರ್ಜಿಗಳನ್ನು ನಮ್ಮ ಇಲಾಖೆ ಪರಿಶೀಲಿಸಿ, ಮೌಲ್ಯಮಾಪನ ಮಾಡಿಸಿ, ಜಿಲ್ಲಾಡಳಿತದಿಂದ ಅನುಮೋದನೆಗೊಂಡು ಪುನರ್ವಸತಿ ಪರಿಹಾರಕ್ಕಾಗಿ ಸರಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೆ ಈ ಯೋಜನೆಯಲ್ಲಿ ಪುನರ್ವಸತಿ ಪರಿಹಾರಕ್ಕಾಗಿಯೇ ಸುಮಾರು 400 ಕೋ. ರೂ ಹಣ ಅಂದಾಜಿಸಲಾಗಿದೆ. ಅದರಂತೆ ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಯ ಅರ್ಜಿ ಸಲ್ಲಿಸಿದವರಲ್ಲಿ 356 ಕುಟುಂಬಗಳಿಗೆ ಈ ಹಿಂದೆ 142 ಕೋಟಿ ರೂ. ಪರಿಹಾರ ನೀಡಿ ಸ್ಥಳಾಂತರ ಮಾಡಲಾಗಿದೆ. ಮುಂದೆಯೂ ಸರಕಾರ ಒದಗಿಸುವ ಹಣದಲ್ಲಿ ಜ್ಯೇಷ್ಠತೆಯನ್ವಯ ಪರಿಹಾರ ನೀಡುವುದಾಗಿ ತಿಳಿಸಿದರು.

ಈ ವೇಳೆ ಇತ್ತೀಚೆಗೆ ಅರಣ್ಯ ಸಚಿವರು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಜನವಸತಿ ಪ್ರದೇಶದಿಂದ ಸ್ವಯಂ ಪ್ರೇರಿತವಾಗಿ ಹೊರಬರುವ ಕುಟುಂಬಗಳಿಗೆ ಹೆಚ್ಚುವರಿಯಾಗಿ 20 ಕೋ. ರೂ. ಅನುದಾನ ಮಂಜುರೂ ಮಾಡಲಾಗಿದೆ ಎಂದಿದ್ದರು. ಈ ಅನುದಾನವನ್ನು ನೀಡಬಹುದಲ್ಲವೇ ? ಹಾಗೂ ಕೆರೆಕಟ್ಟೆ ಪ್ರದೇಶದ ಜನತೆಗೆ ಅನುದಾನ ಒದಗಿಸಿದ್ದೀರಿ ನಮಗೇ ಇನ್ನೂ ನೀಡಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ನಿಮ್ಮ ಎಲ್ಲಾ ಅರ್ಜಿಗೆ ಸಂಬಂಧಿಸಿದಂತೆ ನಮ್ಮ ಇಲಾಖಾ ಮಟ್ಟದಲ್ಲಿ ಮಾಡಬೇಕಾದ ಎಲ್ಲಾ ಕೆಲಸ ಮಾಡಿದ್ದೇವೆ. ಇನ್ನು 20 ಕೋಟಿ ಅನುದಾನವನ್ನು ಮಂಗಳೂರು ಜಿಲ್ಲೆಗೆ ಮಾತ್ರ ನೀಡಿಲ್ಲ ಹಾಗಿರುವಾಗ ನಿಮಗೆ ಮಾತ್ರ ಆ ಹಣವನ್ನು ನೀಡಲು ಹೇಗೆ ಸಾಧ್ಯ. ಅಲ್ಲದೆ ಕೆರೆಕಟ್ಟೆ ಪ್ರದೇಶದ ಪರಿಸ್ಥಿತಿ, ವಾತಾವರಣ ಭಿನ್ನವಾಗಿದೆ ಆದ್ದರಿಂದ ಎಲ್ಲವನ್ನೂ ಒಂದೇ ರೀತಿಯಾಗಿ ನೋಡಲು ಸಾಧ್ಯವಿಲ್ಲ ಎಂದ ಅರಣ್ಯ ಅಧಿಕಾರಿ ದಿನೇಶ್ ಮಂಗಳೂರು ಜಿಲ್ಲೆಗೆ ಅನುದಾನ ಒದಗಿಸಿದಲ್ಲಿ ಮಲವಂತಿಗೆ ಗ್ರಾಮದ ನಿಮ್ಮ 9 ಕುಟುಂಬಗಳಿಗೂ ಜ್ಯೇಷ್ಠತೆಯನ್ವಯ ಪರಿಹಾರ ಒದಗಿಸುತ್ತೇವೆ ಎಂದು ಹೇಳಿದರು.
ಬೆಳೆ ಹಾನಿ ಪರಿಹಾರ ನೀಡುತ್ತಿಲ್ಲ
ನಾವು ಮಾಡಿದ ಕೃಷಿ, ಬೆಳೆಗಳು ವನ್ಯ ಜೀವಿಗಳು, ಮಳೆಯಿಂದಾಗಿ ನಾಶವಾಗುತ್ತಿದೆ. ಈ ಬಗ್ಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದಾಗ ನೀವು ಈಗಾಗಲೇ ಭೂಮಿಯನ್ನು ಸ್ವಇಚ್ಚೆಯಿಂದ ಅರಣ್ಯ ಇಲಾಖೆಗೆ ಬಿಟ್ಟು ಕೊಟ್ಟಾಗಿದೆ ಹಾಗಿರುವಾಗ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದಾಗ ಇದಕ್ಕೆ ದಿನೇಶ್ ಅವರು ಆ ರೀತಿ ಹೇಳಲು ಸಾಧ್ಯವಿಲ್ಲ. ವನ್ಯಜೀವಿಗಳಿಂದ ಏನಾದರೂ ನಿಮ್ಮ ಬೆಳೆ ಹಾನಿಯಾಗಿದ್ದಲ್ಲಿ ಖಂಡಿತವಾಗಿಯೂ ನಮ್ಮ ಇಲಾಖೆಯಿಂದ ಪರಿಹಾರ ಒದಗಿಸಲಾಗುವುದು ಆದರೆ, ಹವಾಮಾನ ವೈಪರೀತ್ಯದಿಂದ ಬೆಳೆ ನಾಶ ಆದಲ್ಲಿ ಅದು ನಮ್ಮ ಇಲಾಖಾ ವ್ಯಾಪ್ತಿಗೊಳಪಡುವುದಿಲ್ಲ ಎಂದ ಹೇಳಿದರು.
ಮನವಿ ಸಲ್ಲಿಸಲಾಗುವುದು
ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ನಮ್ಮ ಇಲಾಖಾ ವತಿಯಿಂದ ಮಾಡಬೇಕಾದ ಎಲ್ಲಾ ಕೆಲಸಗಳನ್ನು ನಾವು ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಆದರೆ ಪರಿಹಾರ ಹಣ ಯಾಕೆ ಇನ್ನೂ ಸಿಕ್ಕಿಲ್ಲ ಎಂದು ನಾವು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಣ ಒದಗಿಸುವುದು ಸರಕಾರ. ಸರಕಾರದ ಖಜಾನೆಯಿಂದ ಅನುದಾನ ಬಂದಲ್ಲಿ ನಾವು ಈಗಾಗಲೇ ಅರ್ಜಿ ಸಲ್ಲಿಸಿ ಅನುಮೋದನೆಗೊಂಡವರಿಗೆ ನೀಡುತ್ತೇವೆ ಎಂದ ದಿನೇಶ್ ನಿಮ್ಮ ಪರವಾಗಿ ಮತ್ತೊಮ್ಮೆ ಪರಿಹಾರದ ಹಣಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಕುದುರೆಮುಖ ವನ್ಯಜೀವಿ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲತಾ ಭಟ್, ಕಾರ್ಕಳ ವಲಯ ಅರಣ್ಯ ಅಧಿಕಾರಿ ಪ್ರಭಾಕರ್ ಕುಲಾಲ್ ಉಪಸ್ಥಿತರಿದ್ದರು. ಮಲವಂತಿಗೆ ಗ್ರಾಮದ 9 ಕುಟುಂಬದ ಸುಮಾರು 20 ಮಂದಿ ಕಚೇರಿಗೆ ಆಗಮಿಸಿದ್ದರು.








































