ಕಾರ್ಕಳ ಎಸ್‌ಕೆಪಿಎ ವಲಯದ 31ನೇ ವಾರ್ಷಿಕ ಸಭೆ

ಕಾರ್ಕಳ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ ಇದರ ಕಾರ್ಕಳ ವಲಯದ 31ನೇ ವಾರ್ಷಿಕ ಸಭೆ ಹೋಟೆಲ್ ಪ್ರಕಾಶ್‌ನಲ್ಲಿ ನಡೆಯಿತು.

ಎಸ್‌ಕೆಪಿಎ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಅಧ್ಯಕ್ಷ ನವೀನ್ ರೈ ಪಂಜಾಳ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಸೋಸಿಯೇಷನ್‌ನ ವಿವಿಧ ಯೋಜನೆಗಳನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕು. ವಿಶೇಷವಾಗಿ ಛಾಯಾ ಸಾಂತ್ವನ ಯೋಜನೆಗೆ ಎಲ್ಲರೂ ಕೈಜೋಡಿಸುವ ಮೂಲಕ ಆಪತ್ಕಾಲದಲ್ಲಿ ಸದಸ್ಯರಿಗೆ ನೆರವಾಗುವಂತೆ ಸಹಕರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ವಲಯದ ಅಧ್ಯಕ್ಷ ಪ್ರಮೋದ್ ಚಂದ್ರ ಪೈ ಮುನಿಯಾಲ್ ಮಾತಾನಾಡಿ, ವಲಯದ ನೂತನ ಯೋಜನೆಯಾದ ವೈದ್ಯ ಬಂಧು ಕಾರ್ಡ್ ಅನ್ನು ಸದಸ್ಯರಿಗೆ ವೈದ್ಯಕೀಯ ಸಲಹೆಗಾಗಿ ನೀಡಲಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಇದು ಸಹಕಾರಿಯಾಗಲಿದೆ. ಅಲ್ಲದೆ, ಸದಸ್ಯರಿಗೆ ಆಪತ್ಕಾಲದಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ‘ಸಹಾಯ ಹಸ್ತ ನಿಧಿ’ ರಚಿಸಲಾಗುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಕಳೆದ ಒಂದು ವರ್ಷದಲ್ಲಿ ಜಿಲ್ಲಾ ಹಾಗೂ ವಲಯದ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರದಿಂದ ಉತ್ತಮ ಕಾರ್ಯಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿದ್ದು, ಮುಂದೆಯೂ ಇದೇ ಸಹಕಾರ ಮುಂದುವರಿಯಲಿ ಎಂದು ಆಶಿಸಿದರು.

ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ ಸುಶಾಂತ್ ಬಜಗೋಳಿ, ಪ್ರಶಾಂತ್ ಬಜಗೋಳಿ ಹಾಗೂ ವಿಶ್ರಾಂತ ಬಜಗೋಳಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಗೋಪಾಲ್ ಸುಳ್ಯ, ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ, ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಪ್ರಸಾದ್ ಐಸಿರ, ಕಾರ್ಕಳ ವಲಯದ ಗೌರವಾಧ್ಯಕ್ಷ ಟಿ.ವಿ. ಸುಶೀಲ್ ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ವಲಯದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸುಶಾಂತ್ ಬಜಗೋಳಿ ಸ್ವಾಗತಿಸಿದರು, ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಸತೀಶ್ ಆಚಾರ್ಯ ವರಂಗ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಶೇಖರ್ ಕುಕ್ಕುಜೆ ವಾರ್ಷಿಕ ವರದಿ ವಾಚಿಸಿದರು. ವಿಠ್ಠಲ್ ಅಮೀನ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸುಜಿತ್ ಅಂಚನ್ ವಂದಿಸಿದರು.























































error: Content is protected !!
Scroll to Top