ಉಡುಪಿ : 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕಾರ್ಕಳ ಹಾಗೂ ಕಾಪು-ಶಿರ್ವದಲ್ಲಿ ಆಯೋಜಿಸಲಾಗಿರುವ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೆಲ ಪ್ರಮುಖ ಭಾಷಣಕಾರರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಿರುವ ಜಿಲ್ಲಾಡಳಿತದ ಕ್ರಮದ ಬಗ್ಗೆ ಹಿಂದೂ ಜಾಗರಣ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.
ಕಾರ್ಕಳದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮಂಗಳೂರು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ಹಾಗೂ ಕಾಪು-ಶಿರ್ವದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬಜರಂಗದಳದ ಪುನೀತ್ ಪಂಪ್‌ವೆಲ್ ಆಗಮಿಸಬೇಕಿತ್ತು. ಆದರೆ ಇಬ್ಬರಿಗೂ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಕರು ಹಾಗೂ ಸಂಘಟನೆಯ ಮುಖಂಡರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ, ದೇಶದ ಕಾನೂನು ಮತ್ತು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘಟನೆಯಾಗಿ ನಾವು ಶಾಂತಿಯುತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಯಾವುದೇ ನಿರ್ಬಂಧಗಳು ನಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.

ವಾಕ್ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಮೂಲಕ ಎಲ್ಲ ಸಂಘಟನೆಗಳಿಗೂ ತಮ್ಮ ವಿಚಾರಗಳನ್ನು ಶಾಂತಿಯುತವಾಗಿ ಮಂಡಿಸಲು ಅವಕಾಶ ದೊರೆಯಬೇಕು. ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಯಾವುದೇ ಆತಂಕ ಅಥವಾ ಕಾನೂನು ಸುವ್ಯವಸ್ಥೆಯ ವಿಚಾರಗಳಿದ್ದರೆ, ಸಂಘಟನೆಯೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ರೀತಿಯ ಬೆದರಿಕೆ ಅಥವಾ ಒತ್ತಡಕ್ಕೆ ಸಂಘಟನೆ ಬಗ್ಗುವುದಿಲ್ಲ. ಕಾರ್ಯಕರ್ತರಿಗೆ ಅನಗತ್ಯ ಮಾನಸಿಕ ಕಿರುಕುಳ ನೀಡುವ ಪರಿಸ್ಥಿತಿ ನಿರ್ಮಾಣವಾದರೆ ಜಿಲ್ಲೆಯಾದ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜೇಶ್ ಉಚ್ಚಿಲ ತಿಳಿಸಿದ್ದಾರೆ.
ಅಖಂಡ ಭಾರತ ಸಂಕಲ್ಪ ದಿನದ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯಲಿದ್ದು, ಸಾರ್ವಜನಿಕರು ಹಾಗೂ ಕಾರ್ಯಕರ್ತರು ಕಾನೂನು ಮತ್ತು ಸುವ್ಯವಸ್ಥೆಗೆ ಆದ್ಯತೆ ನೀಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಸಂಘಟನೆ ಮನವಿ ಮಾಡಿದೆ.








































