ಬಸ್‌ ನಿಲ್ದಾಣದಿಂದ ನಿಧಾನಗತಿಯಾಗಿ ಸಾಗುವ ಬಸ್‌ಗಳು – ಸಂಚಾರಕ್ಕೆ ದುಸ್ತರ

ಕಾರ್ಕಳ : ಉಡುಪಿ ಕಡೆಯಿಂದ ಶರವೇಗದಲ್ಲೇ ಕಾರ್ಕಳ ಬಸ್‌ ನಿಲ್ದಾಣ ಆಗಮಿಸುವ ಖಾಸಗಿ ಬಸ್‌ಗಳು ಬಳಿಕ ಅಲ್ಲಿಂದ ತೆರಳುವ ಅನಂತಶಯನವರೆಗೆ ಆಮೆಗತಿಯಲ್ಲಿ ಸಾಗುವುದು ಸಾಮಾನ್ಯವಾಗಿದೆ. ಬಸ್‌ ನಿಲ್ದಾಣದಿಂದ ಅನಂತಶಯನದವರೆಗೆ ಪ್ಯಾಸೆಂಜರ್‌ ಹತ್ತಿಸಿಕೊಳ್ಳುವ ಉದ್ದೇಶದಿಂದ ಬಸ್‌ಗಳು ಅತ್ಯಂತ ನಿಧಾನಗತಿಯಲ್ಲಿ ಮುಂದುವರಿಯುತ್ತಿದೆ. ಪ್ಯಾಸೆಂಜರ್‌ ಸಿಕ್ಕಲ್ಲಿ ಅಲ್ಲೇ ಬಸ್‌ಗೆ ಬ್ರೇಕ್‌ ಹೊಡೆಯಲಾಗುತ್ತಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ, ಅಲ್ಲದೇ ರಸ್ತೆ ಅಪಘಾತಕ್ಕೂ ಕಾರಣವಾಗುತ್ತಿದೆ.

ಕಾರ್ಕಳ ಬಸ್‌ ನಿಲ್ದಾಣಕ್ಕೆ ಟ್ರಾಫಿಕ್‌ ನಿಯಮವನ್ನು ಗಾಳಿಗೆ ತೂರಿ ಬಸ್‌ಗಳು ವೇಗವಾಗಿ ಬರುತ್ತಿದೆ. ಅಲ್ಲಿ ಟ್ರಾಫಿಕ್ ಪೊಲೀಸ್ ಕೂಡ ಇರುವುದಿಲ್ಲ. ಖಾಸಗಿ ಬಸ್‌ಗಳ ಸಮಯದ ವೇಳಾಪಟ್ಟಿ ಪಾಲನೆಯೂ ಬಸ್‌ ವೇಗಕ್ಕೆ ಕಾರಣಗಳಲ್ಲೊಂದು. ಬಸ್‌ ನಿಲ್ದಾಣದಲ್ಲಿ ಹಿರಿಯರು, ಮಹಿಳೆಯರು, ಮಕ್ಕಳು ಜೀವವನ್ನು ಕೈಯ್ಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿಯಿದೆ.

ರೋಡ್‌ಬ್ಲಾಕ್‌
ಬಸ್‌ಸ್ಟ್ಯಾಂಡ್‌ನಿಂದ ಹೊರಟ ಬಸ್‌ಗಳು ನಿಧಾನವಾಗಿ ಚಲಿಸುತ್ತ ಅನಂತಶಯನ ದೇವಳದ ತನಕ ಸ್ಟಾಪ್ ಕೊಟ್ಟು ಜನರನ್ನು ಹತ್ತಿಸುತ್ತಾ ಸಾಗುತ್ತದೆ. ಪರಿಣಾಮವಾಗಿ ವಾಹನದ ದಟ್ಟನೆಯಿಂದಾಗಿ ರೋಡ್‌ ಬ್ಲಾಕ್‌ ಆಗುತ್ತದೆ. ಈ ಮಾರ್ಗದಲ್ಲಿ ಸ್ಟಾಪ್ ಕೊಟ್ಟು ಜನರನ್ನು ಹತ್ತಿಸಬಾರದು ಎಂಬ ನಿಯಮ ಪುರಸಭೆಯ ಕಡತದಲ್ಲಿ ಮಾತ್ರ ಇದೆ. ಅಲ್ಲೇ ಪುರಸಭೆ ಕಚೇರಿಯಿದ್ದರೂ, ದಿನನಿತ್ಯದ ಈ ಸಮಸ್ಯೆಯ ಬಗ್ಗೆ ಪ್ರಶ್ನಿಸುವವರು ಯಾರು ಇಲ್ಲಂದಂತಾಗಿದೆ.

ಇಕ್ಕಟ್ಟಾದ ಬಸ್‌ಸ್ಟ್ಯಾಂಡ್‌
ಕಾರ್ಕಳ ಬಸ್‌ಸ್ಟ್ಯಾಂಡಿನಲ್ಲಿ ಮುಖ್ಯವಾಗಿ ಸ್ಥಳದ ಕೊರತೆಯಿದೆ. ಇರುವ ಇಕ್ಕಟ್ಟಿನ ಜಾಗದಲ್ಲಿ ಬಸ್ಸುಗಳು ಅಡ್ಡಾದಿಡ್ಡಿ ನಿಲ್ಲುತ್ತವೆ. ಬಸ್‌ ನಿಲ್ದಾಣದ ಬಹುಪಾಲು ಜಾಗ ಖಾಸಗಿ ವಾಹನಗಳಿಗೆ ಅತಿಕ್ರಮಣವಾಗಿದೆ ಎಂಬ ಆರೋಪಗಳಿದ್ದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಇನ್ನೂ ಕ್ರಮ ಕೈಗೊಂಡಿಲ್ಲ. ಈಗ ಬಸ್‌ಸ್ಟ್ಯಾಂಡಿನಲ್ಲಿ ಉಳಿದಿರುವುದು ಅಂಗೈಯಷ್ಟೇ ಜಾಗ.

ಮುಗಿಯದ ಪಾರ್ಕಿಂಗ್‌ ಸಮಸ್ಯೆ
ಕಾರ್ಕಳ ನಗರ ಭಾಗದಲ್ಲಿನ ದೊಡ್ಡ ಸಮಸ್ಯೆ ವಾಹನ ಪಾರ್ಕಿಂಗ್‌ಗೆ ಸುಸಜ್ಜಿತವಾದ ವ್ಯವಸ್ಥೆ ಇಲ್ಲದಿರುವುದು. ಹೀಗಾಗಿ ಜನರು ಜಾಗ ಸಿಕ್ಕಿದಲ್ಲಿ ಕಾರು, ಬೈಕ್‌, ದ್ವಿಚಕ್ರ ವಾಹನಗಳನ್ನು ನುಗ್ಗಿಸಿ ನಿಲ್ಲಿಸಿ ಹೋಗುತ್ತಾರೆ. ಇದರಿಂದ ವಾಹನಗಳ ಸರಾಗ ಓಡಾಟಕ್ಕೆ, ಮಾತ್ರವಲ್ಲದೆ ಪಾದಾಚಾರಿಗಳ ಸಂಚಾರಕ್ಕೂ ಬಹಳಷ್ಟು ಸಮಸ್ಯೆ ಉಂಟಾಗುತ್ತಿದೆ.

ನೇತಾಡಿಕೊಂಡೆ ಹೋಗುವ ವಿದ್ಯಾರ್ಥಿಗಳು
ಕೆಲ ಬಸ್‌ಗಳಲ್ಲಿ ಮುಖ್ಯವಾಗಿ ಬೈಲೂರು ಭಾಗದಿಂದ ಕಾರ್ಕಳ, ಕಾರ್ಕಳದಿಂದ ಕಾಬೆಟ್ಟು, ಕಾರ್ಕಳದಿಂದ ನಿಟ್ಟೆಯತ್ತ ಸಾಗುವ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಸ್ಟೆಪ್‌ನಲ್ಲಿ ನಿಂತು ನೇತಾಡಿಕೊಂಡೇ ಹೋಗುತ್ತಾರೆ. ನೇತಾಡಿಕೊಂಡು ಹೋದ ಪರಿಣಾಮವಾಗಿ ಜೀವ ಕಳೆದುಕೊಂಡ ಘಟನೆಗಳು ನಡೆದಿದೆ. ಆದರೂ ಈ ಬಗ್ಗೆ ಇನ್ನೂ ಬಸ್‌ ಮಾಲಕರು, ಚಾಲಕರು ಎಚ್ಚೆತ್ತುಕೊಳ್ಳದಿರುವುದು ದುರಂತ. ಕೆಲವೊಮ್ಮೆ ಚಾಲಕರು, ನಿರ್ವಾಹಕರನ್ನು ದೂರಿದರೆ ಸಾಲದು ಯಾಕೆಂದರೆ ಕಂಡಕ್ಟರ್‌, ಚಾಲಕರು ಬೈಯ್ದರೂ ಕೇಳದ ವಿದ್ಯಾರ್ಥಿಗಳಿದ್ದಾರೆ. ಎಷ್ಟು ಹೇಳಿದರೂ ಸ್ಟೆಪ್‌ನಲ್ಲೇ ನೇತಾಡುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಒಮ್ಮೆ ಬಿಸಿ ಮುಟ್ಟಿಸುವ ಕೆಲಸವೂ ಆಗಬೇಕಿದೆ.

ರಸ್ತೆಯಲ್ಲೇ ತರಕಾರಿ ವ್ಯಾಪಾರ
ನಗರ ಭಾಗದಲ್ಲಿ ಮೂರು ಮಾರ್ಗದಿಂದ ಅನಂತಶಯನದವರೆಗೆ ರಸ್ತೆ ಬದಿಯಲ್ಲಿ ಪುಟ್‌ಬಾತ್‌ ಮಾತ್ರವಲ್ಲದೆ ನಡುರಸ್ತೆಯವರೆಗೆ ತರಕಾರಿ ವ್ಯಾಪಾರದವರನ್ನು ಕಾಣಬಹುದು. ರಸ್ತೆಯಲ್ಲೇ ತರಕಾರಿ ಇಟ್ಟು ಕೂರುತ್ತಿದ್ದು, ಪರಿಣಾಮವಾಗಿ ವಾಹನ ಸವಾರರಿಗೆ ಮಾತ್ರವಲ್ಲದೆ ಪಾದಚಾರಿಗಳ ಓಡಾಟಕ್ಕೂ ಸಮಸ್ಯೆಯಾಗುತ್ತಿದೆ.

ವೇಗದ ಮೇಲೆ ನಿಯಂತ್ರಣ ಬಂದರೆ ಅಪಘಾತ ಕಡಿಮೆಯಾಗಿ ಸಾವಿರಾರು ಜೀವಗಳನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು.











































































error: Content is protected !!
Scroll to Top