ಸಿಜೆಐ ಭೇಟಿಗೆ ರಾಹುಲ್ ಗಾಂಧಿ ಸಮಯ ಕೋರಿದ್ದಕ್ಕೆ ಬಿಜೆಪಿ ಟಾಂಗ್
ನವದೆಹಲಿ: ಸಾಂವಿಧಾನಿಕ ಸಂಸ್ಥೆಗಳನ್ನು ದೈನಂದಿನ ರಾಜಕೀಯ ಹೋರಾಟಗಳಿಂದ ದೂರ ಇರಿಸಬೇಕು ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಭೇಟಿಗೆ ಸಮಯ ಕೋರಿದ್ದು, ಅವರ ನಡೆಯನ್ನು ವಿರೋಧಿಸಿ ಬಿಜೆಪಿ ಈ ಹೇಳಿಕೆ ನೀಡಿರುವುದಾಗಿದೆ.

ಈ ಬಗ್ಗೆ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಅಧಿಕಾರ ವಿಭಜನೆಯ ತತ್ವದಿಂದ ಹಿಡಿದು ಅಧಿಕಾರಕ್ಕಾಗಿ ಹತಾಶೆಗೊಳ್ಳುವವರೆಗೆ, ರಾಹುಲ್ ಗಾಂಧಿ ಅವರು ಸಂವಿಧಾನಿಕ ಕಾನೂನು ಮತ್ತು ರಾಜಕೀಯ ನಾಟಕದ ನಡುವಿನ ವ್ಯತ್ಯಾಸವನ್ನೇ ಮರೆತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಿಜೆಐ ಅವರು ವಿಪಕ್ಷ ನಾಯಕರ ಭೇಟಿಯ ಮನವಿಯನ್ನು ತಿರಸ್ಕರಿಸಿರುವುದು ಸ್ಪಷ್ಟ ಸಂದೇಶವನ್ನು ನೀಡಿದೆ. ನ್ಯಾಯಾಂಗ ಸಂಸ್ಥೆಗಳನ್ನು ದೈನಂದಿನ ರಾಜಕೀಯ ಆಟಗಳಲ್ಲಿ ಎಳೆದುತರಬಾರದು. ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಓಡಾಡಿದ ತಕ್ಷಣ ಸಂವಿಧಾನ ಅರ್ಥವಾಗಿದೆ ಎಂದರ್ಥವಲ್ಲ. ಸಂವಿಧಾನವನ್ನು ಓದಿ, ಗೌರವಿಸಿ ಮತ್ತು ಅಧಿಕಾರ ವಿಭಜನೆಯ ನಿಯಮವನ್ನು ಕಲಿತುಕೊಳ್ಳಿ. ಸಂವಿಧಾನವು ಆಡಳಿತಕ್ಕೆ ಮಾರ್ಗದರ್ಶಿಯೇ ಹೊರತು ರಾಜಕೀಯ ಪ್ರದರ್ಶನದ ವಸ್ತುವಲ್ಲ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮತಗಳ್ಳತನ ಆರೋಪ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ, ಚುನಾವಣಾ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ತಡೆ ಹಾಗೂ ಬ್ಯಾಲೆಟ್ ಪೇಪರ್ ಬಳಸಲು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಸಂಜೆ ಸಿಜೆಐ ಭೇಟಿಗೆ ಸಮಯ ಕೋರಿದ್ದರು.
ಈ ಎಲ್ಲಾ ವಿಷಯಗಳು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿದ್ದು ಭೇಟಿ ಸಾಧ್ಯವಿಲ್ಲ ಎಂದು ಸಿಜೆಐ ರಾಹುಲ್ ಗಾಂಧಿ ಮನವಿ ತಿರಸ್ಕರಿಸಿರುವುದಾಗಿದೆ.











































