ಟಿಕೆಟ್ ರೋಲ್‌ಗಳ ಮೇಲೂ ಆರ್ಥಿಕ ಸಂಕಷ್ಟದ ಹೊಡೆತ
ಬೆಂಗಳೂರು: ಮಹಿಳೆಯರಿಗೆ ಶಕ್ತಿ ಯೋಜನೆಯ ಮೂಲಕ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ಸರ್ಕಾರಕ್ಕೆ ಈಗ ನಿಶ್ಶಕ್ತಿ ಸಮಸ್ಯೆ ಎದುರಾಗಿದೆ. ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ ಎಂಬ ಸಂದೇಹ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಹಣದ ಸಮಸ್ಯೆಯ ಕಾರಣಕ್ಕೆ ಇತ್ತೀಚೆಗೆ ಡಿಸೇಲ್ ಇಲ್ಲದೆ ಕೆಲವು ಬಸ್ಸುಗಳು ಸಂಚಾರ ನಿಲ್ಲಿಸಿದ್ದವು. ತೈಲ ಕಂಪನಿಗಳಿಗೆ ಬಾಕಿ ಹಣ ಪಾವತಿಸದೆ ಇರುವ ಕಾರಣ ಡೀಸೆಲ್ ಪೂರೈಕೆಯಲ್ಲಿ ತೊಡಕಾಗಿತ್ತು. ಇದೀಗ ಇನ್ನೊಂದು ಸಮಸ್ಯೆ ಎದುರಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್ ಮುದ್ರಿಸುವ ಪೇಪರ್ ರೋಲ್‌ಗಳ ತೀವ್ರ ಕೊರತೆ ಎದುರಾಗಿದೆ. ಹಾಗಾಗಿ, ಕಾಗದ ಉಳಿಸುವ ಉದ್ದೇಶದಿಂದ ನಿರ್ವಾಹಕರು 3 ರಿಂದ 4 ಪ್ರಯಾಣಿಕರಿಗೆ ಸೇರಿಸಿ ಒಂದೇ ಟಿಕೆಟ್ ವಿತರಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ನಡೆಯುತ್ತಿದೆ.

ಶಕ್ತಿ ಯೋಜನೆಯ ಅಡಿಯಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಕ್ತಿ ಯೋಜನೆ ಜಾರಿಯಾದಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಏನೋ ಹೆಚ್ಚಾಗಿದೆ..ಆದರೆ ಅವರು ಎಷ್ಟು ಮಂದಿ ಬಂದರೂ ಹಣ ಕೊಡೋದಿಲ್ಲ. ಇಡೀ ಬಸ್ ಮಹಿಳೆಯರಿಂದಲೇ ತುಂಬಿ ತುಳುಕುತ್ತದೆ. ಪುರುಷರಿಗೆ ಟಿಕೆಟ್ ಇದ್ದರೂ, ಅವರು ಬಸ್‌ಗೆ ಹೋಗುವ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಸಾರಿಗೆ ಇಲಾಖೆ ನಷ್ಟಕ್ಕೀಡಾಗಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರದಿಂದ ಸಾರಿಗೆ ಸಂಸ್ಥೆಗಳಿಗೆ ಬರಬೇಕಾದ ಸಬ್ಸಿಡಿ ಅಥವಾ ಆರ್ಥಿಕ ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದರಿಂದ, ಕೆಲವು ದಿನಗಳ ಹಿಂದಷ್ಟೇ ಇಲಾಖೆಯು ತೈಲ ಕಂಪನಿಗಳಿಗೆ ಪಾವತಿಸಬೇಕಾದ ಅಂದಾಜು 170 ಕೋಟಿ ರೂಪಾಯಿಗಳಿಗೂ ಅಧಿಕ ಬಿಲ್ ಬಾಕಿ ಹಣ ಪಾವತಿಸದ ಕಾರಣ ಬಸ್‌ಗಳಿಗೆ ಡೀಸೆಲ್ ಕೊರತೆ ಎದುರಾಗಿ ಹಲವು ಬಸ್‌ಗಳು ಸಂಚಾರ ಮಾಡಿರಲಿಲ್ಲ. ಇದೀಗ ಟಿಕೆಟ್ ನೀಡುವ ಇಟಿಎಂ ಯಂತ್ರಗಳಲ್ಲಿ ಬಳಸುವ ಮುದ್ರಣ ಕಾಗದದ ಪೂರೈಕೆದಾರರಿಗೆ ಬಾಕಿ ಹಣ ಪಾವತಿಯಾಗಿಲ್ಲ. ಹೀಗಾಗಿ ಟಿಕೆಟ್‌ಗೆ ಬಳಸುವ ಕಾಗದವೂ ಸರಿಯಾಗಿ ಸರಬರಾಜು ಆಗಿಲ್ಲ. ಇದರಿಂದ ಬಸ್‌ಗಳಲ್ಲಿ ಕಂಡಕ್ಟರ್ ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ. ನಿರ್ವಾಹಕರು ಇದಕ್ಕಾಗಿ ಮೂರ್ನಾಲ್ಕು ಜನ ಪ್ರಯಾಣಿಕರಿಗೆ ಸೇರಿ ಒಂದು ಟಿಕೆಟ್‌ನಂತೆ ಕೊಡುತ್ತಿದ್ದಾರೆ.
ಸಾರಿಗೆ ಇಲಾಖೆ ನಷ್ಟದಲ್ಲಿ. ಈ ಮಧ್ಯೆ ನಾಲ್ಕೂ ಸಾರಿಗೆ ನಿಗಮಗಳಿಗೆ 430 ಕೋಟಿ ರೂಪಾಯಿ ಬಿಡುಗಡೆ ಮಾಡೋದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಹೇಳಿದೆ. ಒಟ್ಟು 430 ಕೋಟಿ ರೂಪಾಯಿಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) 164.34 ಕೋಟಿ ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಎನ್‌ಡಬ್ಲ್ಯೂಕೆಆರ್‌ಟಿಸಿ) 105.39 ಕೋಟಿ ರೂ., ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) 81.82 ಕೋಟಿ ರೂ. ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 78.43 ಕೋಟಿ ರೂ. ದೊರೆಯಲಿದೆ.
ಎರಡು ವಾರಗಳ ಹಿಂದೆ ಕೆಎಸ್‌ಆರ್‌ಟಿಸಿ ಆಹ್ವಾನಿಸಿದ್ದ ಪ್ರಸ್ತಾವನೆಗಳ ಕೋರಿಕೆ (ಆರ್‌ಎಫ್‌ಪಿ) ಈ ಬೆಳವಣಿಗೆಗೆ ಸಂಬಂಧಿಸಿದೆ. ಜೂನ್ 2023ರಿಂದ ಜುಲೈ 2026ರವರೆಗೆ ಶಕ್ತಿ ಯೋಜನೆಗಾಗಿ ಸಾರಿಗೆ ನಿಗಮಗಳು 20,956 ಕೋಟಿ ರೂಪಾಯಿ ವೆಚ್ಚ ಮಾಡಿವೆ. ಆದರೆ, ಈ ಅವಧಿಯಲ್ಲಿ 15,305 ಕೋಟಿ ರೂಪಾಯಿ ಮಾತ್ರ ಮರುಪಾವತಿಯಾಗಿದ್ದು, ಇನ್ನೂ 5,651 ಕೋಟಿ ರೂಪಾಯಿ ಬಾಕಿ ಉಳಿದಿದೆ ಎಂದು ಆರ್‌ಎಫ್‌ಪಿ ದಾಖಲೆಯಲ್ಲಿ ತಿಳಿಸಲಾಗಿದೆ. ಇದು ಸಾರಿಗೆ ಇಲಾಖೆಗೆ ಹೊರೆಯಾಗಿದೆ.





































