ಉಡುಪಿಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಘೋಷಿಸಿದ ರಾಜ್ಯ ಸರ್ಕಾರ

ಶೀಘ್ರದಲ್ಲೇ ಜಿಲ್ಲಾ ಹಂತದಲ್ಲಿ ಅಧಿಕೃತ ಘೋಷಣೆ

ಉಡುಪಿ: ಕರ್ನಾಟಕ ಸರ್ಕಾರ ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತ ಜಿಲ್ಲೆಯಾಗಿ ಘೋಷಣೆ ಮಾಡಿದ್ದು, ನ. 1 ರಂದು ಅಧಿಕೃತವಾಗಿ ಜಿಲ್ಲಾ ಹಂತದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಸಾಕ್ಷರತ ಮಾನದಂಡದ ಅನುಸಾರ ಜಿಲ್ಲೆಯಲ್ಲಿ ಶೇ.95ರಷ್ಟು ಸಾಕ್ಷರತೆ ಸಾಧನೆ ಮಾಡಲಾಗಿದ್ದು, ನಿಯಮಾನುಸಾರ ಅದನ್ನು ಶೇ.100 ಎಂದು ಪರಿಗಣಿಸಿ ಸರ್ಕಾರ ಈ ಆದೇಶ ಮಾಡಿದೆ. ಜಿಲ್ಲಾ ಪಂಚಾಯತ್‌ನಿಂದ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತ ಜಿಲ್ಲೆಯಾಗಿ ಘೋಷಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರದ ಹಂತದಲ್ಲಿ ಜಿಲ್ಲೆಯ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶಿಲಿಸಿ ಈ ಆದೇಶ ನೀಡಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ ಉಡುಪಿ ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್‌ಗಳು, 7 ತಾಲೂಕು ಪಂಚಾಯತ್‌ಗಳು ಮತ್ತು 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಕ್ಷರತೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಮಾನದಂಡಗಳನ್ನು ಅನುಸರಿಸಿ ಸಂಪೂರ್ಣ ಸಾಕ್ಷರತೆಯ ದೃಢೀಕರಣಗಳನ್ನು ಹೊಂದಿರುತ್ತವೆ.

ಉಡುಪಿ ಜಿಲ್ಲೆಯು ಶೇ.95ಕ್ಕಿಂತ ಹೆಚ್ಚು ಸಾಕ್ಷರರನ್ನು ಹೊಂದಿರುವ ಜಿಲ್ಲೆಯಾಗುವುದರಿಂದ ಕೆಲವು ಷರತ್ತು ಮತ್ತು ನಿಬಂಧನೆಗಳಂತೆ ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರ ಜಿಲ್ಲೆಯೆಂದು ಘೋಷಿಸಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸರ್ಕಾರ ಆದೇಶಿಸಿದೆ.

*ಉಡುಪಿ ಜಿಲ್ಲೆಯು ಸಂಪೂರ್ಣ ಸಾಕ್ಷರ ಜಿಲ್ಲೆ ಎಂದು ಘೋಷಿಸುವಾಗ ಲಭ್ಯವಿರುವ 2011ರ ಸಾಕ್ಷರತಾ ಅಂಕಿ-ಅಂಶಗಳು, ನಂತರದ ಸಾಕ್ಷರತಾ ಕಾರ್ಯಕ್ರಮಗಳ ಪ್ರಗತಿಯ ದತ್ತಾಂಶಗಳನ್ನು ಮರುಪರಿಶೀಲಿಸಿ ಶೇ.95 ಕ್ಕಿಂತ ಹೆಚ್ಚು ಸಾಕ್ಷರತೆಯ ಪ್ರಮಾಣ ಖಚಿತಪಡಿಸಿಕೊಳ್ಳಬೇಕು.

*ಖಚಿತಪಡಿಸಿಕೊಂಡ ಅನಂತರ ಸಂಪೂರ್ಣ ಸಾಕ್ಷರತೆಯ ಜಿಲ್ಲೆಯನ್ನಾಗಿ ಘೋಷಿಸಲು ಪ್ರಮುಖವಾದ ದಿನಗಳನ್ನು (ಸ್ವಾತಂತ್ರ್ಯ ದಿನಾಚಾರಣೆಯಂತಹಾ ರಾಷ್ಟ್ರೀಯ ದಿನಗಳು, ಕನ್ನಡ ರಾಜ್ಯೋತ್ಸವದಂತಹಾ ನಾಡಹಬ್ಬ) ಜಿಲ್ಲೆಯ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸತಕ್ಕದ್ದು.

*ನಿಗದಿಯಾದ ದಿನದಂದು ಜಿಲ್ಲೆಯ ಜನಪ್ರತಿನಿಧಿಗಳು, ಸಚಿವರು, ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮುಖ ಕಾರ್ಯಕ್ರಮದಲ್ಲಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿ ಘೋಷಿಸಬೇಕು.

*ಇತರೆ ಜಿಲ್ಲೆಗಳಿಗೆ ಪ್ರೇರಣೆಯಾಗುವಂತೆ ಸದರಿ ಪ್ರಕ್ರಿಯೆಯ ದಾಖಲೀಕರಣ ಮಾಡಿ ಪ್ರಚಾರ ನೀಡಬೇಕು.

*ಸಂಪೂರ್ಣ ಸಾಕ್ಷರತೆ ಜಿಲ್ಲೆಯನ್ನಾಗಿ ಘೋಷಿಸಿದ ನಂತರವೂ ಉಳಿಕೆಯಾದ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ, ನವ ಸಾಕ್ಷರರಿಗೆ ಅಭ್ಯಾಸ ಮಾಡಿಸುವ ಕ್ರಮಗಳು, ವಲಸೆ ಬರುವ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಕ್ರಮಗಳನ್ನು ಜಾರಿಯಲ್ಲಿರಿಸಬೇಕು.



















































































error: Content is protected !!
Scroll to Top