ವೈದ್ಯಕೀಯ ವೃತ್ತಿ ಮಾನವೀಯ ಸೇವೆಯ ಮಹತ್ತರ ಹೊಣೆಗಾರಿಕೆ: ಡಾ. ಶಾಂತರಾಮ ಶೆಟ್ಟಿ

ಆಳ್ವಾಸ್ ಆರೋಹಣ 2026: ಪ್ರಥಮ ಬ್ಯಾಚಿನ ಎಂಬಿಬಿಎಸ್ ವಿದ್ಯಾರ್ಥಿಗಳ ಸ್ವಾಗತ ಕಾರ‍್ಯಕ್ರಮ, ಶ್ವೇತವಸ್ತ್ರಧಾರಣಾ ಸಮಾರಂಭ

ಮೂಡುಬಿದಿರೆ: ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ. ಅದು ಮಾನವ ಜೀವವನ್ನು ಉಳಿಸುವ ಮಹತ್ತರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ರೋಗಿಗಳ ಬಗ್ಗೆ ಕರುಣೆ, ಸಹಾನುಭೂತಿ ಹಾಗೂ ಸೇವಾ ಮನೋಭಾವ ಬೆಳೆಸಿಕೊಂಡು, ಶಿಸ್ತು ಮತ್ತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಹೇಳಿದರು.

ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್, ಡಾ ವಿಎಸ್ ಆಚರ‍್ಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ, ‘ಆಳ್ವಾಸ್ ಆರೋಹಣ 2026’ ಪ್ರಥಮ ಬ್ಯಾಚಿನ ಎಂಬಿಬಿಎಸ್ ವಿದ್ಯಾರ್ಥಿಗಳ ಸ್ವಾಗತ ಕಾರ‍್ಯಕ್ರಮ ಹಾಗೂ ಶ್ವೇತವಸ್ತ್ರಧಾರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾವಿರ ಮೈಲುಗಳ ಪ್ರಯಾಣವೂ ಮೊದಲ ದಿಟ್ಟ ಹೆಜ್ಜೆಯಿಂದ ಆರಂಭವಾಗುತ್ತದೆ. ನೀವು ಇಂದು ಆ ಹೆಜ್ಜೆಯನ್ನಿಟ್ಟಿದ್ದೀರಿ. ಈ ಪ್ರಯಾಣವನ್ನು ಶಿಸ್ತು, ಸಮರ್ಪಣೆ ಮತ್ತು ಬದ್ಧತೆಯಿಂದ ಪೂರ್ಣಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ.
ಭಾರತೀಯ ವೈದ್ಯರು ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದು, ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಸೇರಿದಂತೆ ವಿದೇಶಗಳ ಆರೋಗ್ಯ ವ್ಯವಸ್ಥೆಯಲ್ಲಿ ಭಾರತೀಯ ವೈದ್ಯರ ಕೊಡುಗೆಯನ್ನು ಶ್ಲಾಘಿಸಿದರು.
ವೈದ್ಯಕೀಯ ಶಿಕ್ಷಣದ ಮೊದಲ ವರ್ಷದ ಮಹತ್ವವನ್ನು ವಿವರಿಸಿದ ಅವರು ಮೂಲ ವಿಷಯಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಕರು ಶಿಫಾರಸು ಮಾಡುವ ಪ್ರಮಾಣಿತ ಪಠ್ಯಪುಸ್ತಕಗಳನ್ನು ಓದಬೇಕು. ತರಗತಿ ಹಾಗೂ ಪ್ರಯೋಗಾಲಯದ ಅಭ್ಯಾಸಗಳನ್ನು ತಪ್ಪಿಸಬಾರದು ಮತ್ತು ಪ್ರಾಯೋಗಿಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಮಗ್ರ ಬೋಧನೆ ಮತ್ತು ಸಮಸ್ಯೆ ಆಧಾರಿತ ಕಲಿಕೆ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ರೋಗಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದರು.

ವೈದ್ಯರು ರೋಗಿಗಳು, ಶಿಕ್ಷಕರು, ಸಹೋದ್ಯೋಗಿಗಳು, ದಾದಿಯರು, ತಂತ್ರಜ್ಞರು ಹಾಗೂ ಆರೋಗ್ಯ ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರನ್ನೂ ಗೌರವಿಸಬೇಕು. ತಂಡದ ಸಹಕಾರ, ಸಮಯಪಾಲನೆ, ಶಿಸ್ತು ಮತ್ತು ವೃತ್ತಿಪರ ನಡವಳಿಕೆ ರೋಗಿಗಳ ವಿಶ್ವಾಸ ಗಳಿಸಲು ಅತ್ಯಗತ್ಯ. ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ ಬೆಳೆಸಿಕೊಂಡು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೇರಿದಂತೆ ವಿವಿಧ ಸಂಸ್ಥೆಗಳ ಸಂಶೋಧನಾ ಯೋಜನೆಗಳು ಹಾಗೂ ಅನುದಾನಗಳ ಸದ್ಬಳಕೆ ಮಾಡಿಕೊಳ್ಳಬೇಕು. ವಸತಿ ನಿಲಯದ ಜೀವನವು ಸ್ವಾವಲಂಬನೆ, ಸ್ನೇಹ ಮತ್ತು ಶಿಸ್ತನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಕರ್ನಾಟಕದಲ್ಲಿ ಒಟ್ಟು 72 ವೈದ್ಯಕೀಯ ಕಾಲೇಜುಗಳಿದ್ದು, ಹೊಸದಾಗಿ ಆರಂಭಗೊಂಡಿರುವ ಆಳ್ವಾಸ್ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ಶೈಕ್ಷಣಿಕ ವರ್ಷದಲ್ಲೇ 150 ಎಂಬಿಬಿಎಸ್ ಸೀಟುಗಳ ಪೈಕಿ 146 ಸೀಟುಗಳು ಈಗಾಗಲೇ ಭರ್ತಿಯಾಗಿದ್ದು, ಮುಂದಿನ ಸುತ್ತಿನಲ್ಲಿ ಉಳಿದ ನಾಲ್ಕು ಸೀಟಗಳು ಭರ್ತಿಯಾಗಲಿವೆ ಎಂದರು.

ವೈದ್ಯಕೀಯ ಶಿಕ್ಷಣದಲ್ಲಿ ಶೈಕ್ಷಣಿಕ ಗುಣಮಟ್ಟ ಸಾಧಿಸಲು ಸಂಸ್ಥೆಯ ಆಡಳಿತ ಮಂಡಳಿ, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ವೈದ್ಯಕೀಯ ಕ್ಷೇತ್ರವು ಮಾನವ ಜೀವಕ್ಕೆ ಸಂಬಂಧಿಸಿದ ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ ಪ್ರತಿಯೊಂದು ಕಾರ್ಯವನ್ನೂ ಅತ್ಯಂತ ಜಾಗರೂಕತೆ, ಕಾಳಜಿ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು. ವಿದ್ಯಾರ್ಥಿಗಳು ಉತ್ತಮ ಸಂವಹನ ಕೌಶಲ ಬೆಳೆಸಿಕೊಳ್ಳಬೇಕು, ರೋಗಿಗಳ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿ ಹೊಂದಿರಬೇಕು ಹಾಗೂ ತಮ್ಮ ಭವಿಷ್ಯಕ್ಕಾಗಿ ಪೋಷಕರು ಮಾಡಿರುವ ತ್ಯಾಗವನ್ನು ಅರಿತುಕೊಳ್ಳಬೇಕು ಎಂದರು. ದುಶ್ಚಟಗಳಿಂದ ದೂರವಿದ್ದು, ಅಧ್ಯಯನ ಮತ್ತು ವೃತ್ತಿಪರ ಗುರಿಗಳತ್ತ ಗಮನಹರಿಸುವಂತೆ ಸಲಹೆ ನೀಡಿದರು.

ದೇಶದ ರಕ್ಷಣೆಯಲ್ಲಿ ಸೈನಿಕರು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ತೋರುವ ಶಿಸ್ತು ಹಾಗೂ ಬದ್ಧತೆಯಂತೆಯೇ ವೈದ್ಯರೂ ತಮ್ಮ ಕರ್ತವ್ಯ ನಿರ್ವಹಿಸಬೇಕು. ರೋಗಿಗಳ ಸೇವೆಯಿಂದ ಹಿಂದೆ ಸರಿಯದೆ ಧೈರ್ಯ, ಸಮರ್ಪಣೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದು ವೈದ್ಯರ ಕರ್ತವ್ಯವಾಗಬೇಕು ಎಂದರು.

ಆಳ್ವಾಸ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮಹಾಬಲ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ಪಿ. ಹರೀಶ್ ನಾಯಕ್ ವಂದಿಸಿದರು. ಡಾ. ಕೃಷ್ಣ ಉಣ್ಣಿ ಹಾಗೂ ಡಾ. ಅಭಿಜ್ಞಾ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು.

ನಂತರ ನಡೆದ ಅಧಿವೇಶನಗಳಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ‘ಆಳ್ವಾಸ್‌ನಲ್ಲಿನ ಜೀವನಾನುಭವ’ದ ಕುರಿತು ಮಾತನಾಡಿದರು‌. ಡಾ. ವಿನಯ್ ಆಳ್ವ ವಿದ್ಯಾರ್ಥಿ ಜೀವನದಲ್ಲಿ ಜೀವನಮೌಲ್ಯಗಳು, ಶಿಸ್ತು, ವೃತ್ತಿಪರತೆ ಹಾಗೂ ಜವಾಬ್ದಾರಿಯುತ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ತಿಳಿಸಿದರು.







































































error: Content is protected !!
Scroll to Top