ಕ್ರೈಸ್ಟ್‌ಕಿಂಗ್‌ ಪ್ರಾಥಮಿಕ – ಪ್ರೌಢಶಾಲಾ ವಿಭಾಗ ವಿದ್ಯಾರ್ಥಿ ಸಂಘದ ಪದಗ್ರಹಣ

ಕಾರ್ಕಳ : ಕ್ರೈಸ್ಟ್‌ಕಿಂಗ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ನೂತನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ಜು.2ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ರೆ.ಫಾ ಕ್ಯಾನುಟ್ ಬರ್ಬೋಜ ಅವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಕೂಡ ಮಹತ್ವ ನೀಡಿದಾಗ ಮಾತ್ರ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕ್ರೈಸ್ಟ್‌ಕಿಂಗ್‌ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೊಂದಿಗೆ ಕೌಶಲ್ಯ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಅಭಿನಂದನಾರ್ಹ ಎಂದರು.

ಕಾರ್ಕಳ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್‌ ಶೇಖರ್ ನಾಯ್ಕ್ ಮಾತನಾಡಿ, ಹೆತ್ತವರು ಮತ್ತು ಗುರು, ಹಿರಿಯರಿಗೆ ಗೌರವಿಸುವುದರೊಂದಿಗೆ ಉತ್ತಮ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಿ ಎಂದು ಹೇಳಿದರು.
ರೊಟೇರಿಯನ್ ಡಾ. ಭರತೇಶ್ ಎ. ಮಾತನಾಡಿ, ಉತ್ತಮ ನಡತೆ, ಸಂಸ್ಕಾರ, ವಿನಯತೆ, ಶಿಸ್ತು ಇದ್ದಾಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಲು ಸಾಧ್ಯ. ಇಂತಹ ಉತ್ತಮ ಮೌಲ್ಯಗಳ ಜೊತೆಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಜೀವನ ಪಾಠವನ್ನು ಈ ವಿದ್ಯಾಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದನ್ನು ನೀವು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಿಮ್ಮ ಬದುಕು ಉಜ್ವಲವಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಕಳ ರೋಟರಿ ಕ್ಲಬ್, ರಾಕ್ ಸಿಟಿಯ ಅಧ್ಯಕ್ಷ ಎಚ್. ಮಂಜುನಾಥ್ ಹೆಗ್ಡೆ ಮಾತನಾಡಿ, ಸಂಸ್ಥೆಯಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಾಯಕತ್ವ ಗುಣ ಮೈಗೂಡಿಸಿಕೊಳ್ಳುವುದರೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್‌ ಎಜ್ಯುಕೇಶನ್ ಟ್ರಸ್ಟ್‌ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಅಗಾಧವಾದ ಬುದ್ಧಿವಂತಿಕೆಯಿದೆ. ಈ ಬುದ್ಧಿವಂತಿಕೆಯನ್ನು ನೀವು ಉತ್ತಮ ಕೆಲಸಗಳಿಗೆ ಉಪಯೋಗಿಸಿಕೊಂಡು ನಿಮ್ಮ ಶಾಲೆ, ಹೆತ್ತವರು ಹಾಗೂ ಸಮಾಜಕ್ಕೆ ಹೆಸರು ತರುವ ವ್ಯಕ್ತಿಗಳಾಗಿ ಎಂದು ಹೇಳಿದರು.

ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಐ ಕ್ರಿಸ್ಟೋಫರ್ ಕೋಟ್ಯಾನ್‌ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಸಂಸ್ಥೆಯ ವಿದ್ಯಾರ್ಥಿ ಸಮಾಲೋಚಕಿ ಡಾ.ಸಿಸ್ಟರ್ ಶಾರ್ಲೆಟ್ ಸಿಕ್ವೇರಾ, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಜಾಲಿ ಜೇಕಬ್‌ರವರು ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಶಾಲಾ ನಾಯಕ ತನ್ಮಯ್ ಉದಯ್ ಶೆಟ್ಟಿ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಶಾಲಾ ನಾಯಕ ಮಿಲನ್ ಡಿಸೋಜ ವಂದಿಸಿದರು. ವಿದ್ಯಾರ್ಥಿಗಳಾದ ಜೋರ್ಡನ್ ಡಿಸೋಜ ಮತ್ತು ಶ್ರುತ ಜೈನ್ ಕಾರ್ಯಕ್ರಮ ನಿರೂಪಿಸಿದರು.































error: Content is protected !!
Scroll to Top