ಮಹಾಭಾರತದ ಸಾರವೇ ಧರ್ಮ – ಡಾ. ವಿನಾಯಕ ಭಟ್

ಕಾರ್ಕಳ : ಮಹಾಭಾರತದಲ್ಲಿ ಎಲ್ಲಾ ಪಾತ್ರಗಳೂ ನಾಯಕರಂತೆ ವಿಜೃಂಭಿಸಿ ಧರ್ಮರಾಯ ಮಾತ್ರ ಮೂಲೆಗುಂಪಾಗುವಂತಾದರೂ ವ್ಯಾಸರು ಮಾತ್ರ ಆತನನ್ನು ರಾಜನನ್ನಾಗಿ ಇಟ್ಟುಕೊಂಡು ಧರ್ಮರಾಜನಾಗಿ ನೋಡಿಕೊಂಡರು. ಮಹಾಭಾರತದ ಒಟ್ಟು ಸಾರವಾಗಿ ನಾವು ನೋಡುವುದು ಧರ್ಮವನ್ನೇ ಎಂದು ಡಾ. ವಿನಾಯಕ ಭಟ್ ಗಾಳಿಮನೆ ಅಭಿಪ್ರಾಯಪಟ್ಟರು.

ಅವರು ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇದರ ಸಹಭಾಗಿತ್ವದಲ್ಲಿ ನಡೆಯುವ 2026ರ ತಿಂಗಳ ಸರಣಿ ಕಾರ್ಯಕ್ರಮ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ 6ನೇ ಸೋಪಾನದಲ್ಲಿ ಅವರು ‘ಧರ್ಮ ನಂದನ’ ಎಂಬ ಕುರಿತಾಗಿ ಜೂ.28ರಂದು ಕಾರ್ಕಳದ ಪ್ರಕಾಶ್ ಹೋಟೆಲ್‌ನ ಸಂಭ್ರಮ ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧರ್ಮದಿಂದ ಗಳಿಸುವ ಸಕಲ ಸಂಪತ್ತು, ಕೀರ್ತಿ, ಪ್ರತಿಷ್ಠೆಗಳು ಅಶಾಶ್ವತವಾಗಿದ್ದು ಧರ್ಮ ಮಾರ್ಗದಿಂದ ಗಳಿಸುವಂಥಾದ್ದೇ ಶಾಶ್ವತ ಎಂಬುದನ್ನು ಪ್ರತಿಪಾದಿಸಿದ ಧರ್ಮರಾಯ ಯಾವ ಸಂದರ್ಭದಲ್ಲಿಯೂ ಧರ್ಮಪ್ರಜ್ಞೆಯನ್ನು ಬೀಳಲು ಬಿಡದೆ ಅದನ್ನೇ ಬದುಕಾಗಿಸಿಕೊಂಡು ಪಾಂಡವರ ಏಕಸೂತ್ರತೆಯನ್ನೂ ಕಾಪಾಡಿದ. ಸಂಘರ್ಷವೆಂಬ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ದುರ್ಯೋಧನ ಮಾಡುತ್ತಾ ಬಂದರೆ ಅದಕ್ಕೆ ನೀರು ಸುರಿಯುವ ಕಾರ್ಯವನ್ನು ಧರ್ಮರಾಯ ಮಾಡುತ್ತಾ ಬಂದು ಎತ್ತರದಲ್ಲಿ ನಿಲ್ಲುತ್ತಾನೆ ಎಂದ ಅವರು ಬದುಕಿನ ಸಾರ್ಥಕತೆಗೆ ಧರ್ಮ ಮಾರ್ಗ ಅವಶ್ಯ ಎಂದರು.

ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಏರ್‌ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್, ಅಲ್ಲಮಪ್ರಭು ಪೀಠದ ಪ್ರಧಾನ ನಿರ್ದೇಶಕ ತೆ. ವಿಜಯ ಕುಮಾರ್ ವೇದಿಕೆಯಲ್ಲಿದ್ದರು. ಶಾರ್ವರಿ ಪ್ರಾರ್ಥಿಸಿ, ಸದಾನಂದ ನಾರಾವಿ ಸ್ವಾಗತಿಸಿದರು. ಡಾ. ಮಾಲತಿ ಜಿ.ಪೈ ಕಾರ್ಯಕ್ರಮ ನಿರೂಪಿಸಿ, ಸುಲೋಚನಾ ಬಿ. ವಿ. ವಂದಿಸಿದರು.







































































error: Content is protected !!
Scroll to Top