ಕಾರ್ಕಳ : ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಬೈಲೂರು ಗ್ರಾಮ ಪಂಚಾಯತ್ ಹಾಗೂ ಶ್ರೀ ವಿನಾಯಕ ಸಂಜೀವಿನಿ ಒಕ್ಕೂಟ ಬೈಲೂರು ಇದರ ಸಹಯೋಗದಲ್ಲಿ ಬೈಲೂರು ಪಂಚಾಯತ್ ಸಭಾಂಗಣದಲ್ಲಿ ನಡೆಯುವ 10 ದಿನಗಳ ಫ್ಯಾಷನ್ ಬ್ಲೌಸ್ ಮತ್ತು ನೈಟಿ ಹೊಲಿಗೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜೂ. 29ರಂದು ನಡೆಯಿತು. ಬೈಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವಲ್ಲಿ ಈ ರೀತಿಯ ತರಬೇತಿ ಕಾರ್ಯಕ್ರಮಗಳ ಪಾತ್ರ ಮಹತ್ತರವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿಯ ಸದುಪಯೋಗ ಪಡೆದುಕೊಳ್ಳಿ ಎಂದರು.
ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ವಿನಾಯಕ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾಲಿನಿ ಸುಕೇಶ್ ಪೂಜಾರಿ, ಜೀವನೋಪಾಯ ಸಮಿತಿಯ ಅಧ್ಯಕ್ಷೆ ತಸ್ವಿನ್ ಹಾಗೂ ಸಂಪನ್ಮೂಲ ವ್ಯಕ್ತಿ ಶುಭ ಉಪಸ್ಥಿತರಿದ್ದರು. ಸಂಜೀವಿನಿ ಸದಸ್ಯೆ ಸುಜಾತಾ ಶೆಟ್ಟಿ, ಮಾಜಿ ಅಧ್ಯಕ್ಷೆ ಚೇತನ ನಾಯಕ್ ಹಾಗೂ ಸಂಜೀವಿನಿ ಒಕ್ಕೂಟದ ಎಂಬಿಕೆ ರವಿಕಲಾ ಕಾರ್ಯಕ್ರಮಕ್ಕೆ ಸಹಕರಿಸಿದರು. 30 ಸಂಜೀವಿನಿ ಮಹಿಳೆಯರು ಪಾಲ್ಗೊಂಡಿದ್ದರು.








































