ದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 20ರಿಂದ ಆಗಸ್ಟ್ 13ರವರೆಗೆ ನಡೆಯುವ ಸಾಧ್ಯತೆ ಇದ್ದು, ಈ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ಸುಮಾರು ನಾಲ್ಕು ವಾರಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಹಲವು ಮಹತ್ವದ ಮಸೂದೆಗಳು ಕುರಿತು ಚರ್ಚೆ ನಡೆಯಲಿದೆ.
ಈ ಬಾರಿಯ ಅಧಿವೇಶನದಲ್ಲಿ ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ 33% ಮೀಸಲಾತಿ ಜಾರಿಗೊಳಿಸುವ ಸಂವಿಧಾನ ತಿದ್ದುಪಡಿ ಮಸೂದೆ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರ ಪುನರ್‌ವಿಂಗಡನೆ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಚಯಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಎರಡೂ ಮಸೂದೆಗಳು ಏಪ್ರಿಲ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಅಗತ್ಯವಾದ ಮೂರನೇ ಎರಡರಷ್ಟು ಬಹುಮತ ದೊರೆಯದ ಕಾರಣ ಅಂಗೀಕಾರವಾಗಿರಲಿಲ್ಲ. ಈಗ ಕೆಲವು ವಿರೋಧ ಪಕ್ಷಗಳ ವಿಷಯಾಧಾರಿತ ಬೆಂಬಲದ ನಿರೀಕ್ಷೆಯೊಂದಿಗೆ ಸರ್ಕಾರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಈ ಬಾರಿ ಅಧಿವೇಶನದಲ್ಲಿ ಟಿಎಂಸಿ ಮತ್ತು ಶಿವಸೇನೆಯಲ್ಲಿನ (ಯುಬಿಟಿ) ಬಂಡಾಯವು ಹೊರಹೊಮ್ಮುವ ಸಾಧ್ಯತೆ ಇದೆ. ಈಗಾಗಲೇ ಪ್ರತ್ಯೇಕ ಗುಂಪುಗಳಾಗಿ ಗುರುತಿಸಲು ಕೋರಿರುವ 20 ಟಿಎಂಸಿ ಮತ್ತು ಆರು ಶಿವಸೇನೆ (ಯುಬಿಟಿ) ಸಂಸದರ ಬೇಡಿಕೆಗಳ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ.
















