ಎನ್ಯೂಮರೇಷನ್‌ ಫಾರಂ ಡಿಜಿಟಲೀಕರಣದಲ್ಲಿ ಉಡುಪಿ ರಾಜ್ಯಕ್ಕೆ ಪ್ರಥಮ – ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌

ಕಾರ್ಕಳದ ಜ್ಯೋತಿರಾವ್‌ ಸೇರ್ವೆಗಾರ್‌ ಅವರಿಗೆ ಅಭಿನಂದನೆ

ಉಡುಪಿ : ಪ್ರಜಾಪ್ರಭುತ್ವದ ಅಡಿಪಾಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ದೋಷರಹಿತ ಹಾಗೂ ಗುಣಮಟ್ಟದ ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯವನ್ನು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ನಿರ್ವಹಿಸಿ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜು. 25ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ [ಎಸ್.ಐ.ಆರ್] ಕಾರ್ಯಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಎಸ್.ಐ.ಆರ್. ಮನೆ ಮನೆ ಸಮೀಕ್ಷೆಯ ನಮೂನೆಗಳಲ್ಲಿ 2002ರ ಮತದಾರರ ಪಟ್ಟಿಯಲ್ಲಿ ಮ್ಯಾಪಿಂಗ್ ಆಗದವರು ಸಹ ವೈಯಕ್ತಿಕ ವಿವರಗಳನ್ನು ಏನ್ಯೂಮರೇಷನ್ ಫಾರ್ಮ್ ನ ಕೊನೆಯ ಕಾಲಂನಲ್ಲಿ ವಿವರಗಳನ್ನು ಭರ್ತಿ ಮಾಡಿ, ಬಿ. ಎಲ್. ಓ. ಗಳಿಗೆ ನೀಡಬಹುದಾಗಿದೆ ಎಂದರು.

ಒಂದೊಮ್ಮೆ ಬಿ. ಎಲ್. ಓ. ಗಳು ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಮನೆಯಲ್ಲಿ ಇಲ್ಲದಿದ್ದಲ್ಲಿ ಅವರ ಪರವಾಗಿ ಕುಟುಂಬದ ಯಾವುದೇ ಒಬ್ಬ ವಯಸ್ಕರು ಸಹಿ ಹಾಕಿ ಗಣತಿ ನಮೂನೆಗಳನ್ನು ಬಿ. ಎಲ್. ಓ. ಗಳಿಗೆ ನೀಡಬಹುದಾಗಿದೆ ಎಂದರು.

ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಪಡೆದುಕೊಂಡ ಎನ್ಯೂಮರೇಷನ್‌ ಫಾರಂಗಳ ಡಿಜಿಟಲೀಕರಣ ಕಾರ್ಯದಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿರುವುದರಿಂದ ಮುಖ್ಯ ಚುನಾವಣಾಧಿಕಾರಿಯವರು ಜಿಲ್ಲೆಯ ಸಾಧನೆಯನ್ನು ಶ್ಲಾಘಿಸಿದರು.

9,40,340 ಗಣತಿ ನಮೂನೆ ಡಿಜಿಟಲೀಕರಣ
ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಮಾತನಾಡಿ, ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR-2026) ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುವ ಪ್ರಕ್ರಿಯೆಯಲ್ಲಿ ಶೇ. 100 ಪ್ರಗತಿ ಸಾಧಿಸಿದ್ದಾರೆ. ಜುಲೈ 25 ಸಂಜೆ 4 ಗಂಟೆವರೆಗೆ ಒಟ್ಟು 9,40,340 ಗಣತಿ ನಮೂನೆಯನ್ನು ಡಿಜಿಟಲೀಕರಣಗೊಳಿಸಿ ಶೇ. 88.39 ರಷ್ಟು ಪ್ರಗತಿಯಾಗಿರುತ್ತದೆ. 14,835 ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಕಂಡುಬಂದಿರುತ್ತದೆ. 14426 ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದು, 5225 ಮತದಾರರು ತಮ್ಮ ದಾಖಲಾತಿ ಮಾಡಿರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮಿಷನರ್ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.

































error: Content is protected !!
Scroll to Top