ಕಾರ್ಕಳ : ಸೈಬರ್ ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಜಾಗೃತಿ ಅತ್ಯಂತ ಮುಖ್ಯವಾಗಿದೆ. ಎಪಿಕೆ ಫೈಲ್‌ಗಳು, ಅನುಮಾನಾಸ್ಪದ ಲಿಂಕ್‌ಗಳು ಹಾಗೂ ಅಪರಿಚಿತ ಮೊಬೈಲ್ ಅಪ್ಲಿಕೇಷನ್ ಯಾವುದೇ ಕಾರಣಕ್ಕೂ ಡೌನ್‌ಲೋಡ್ ಮಾಡಬಾರದು ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸನ್ನ ಸಲಹೆ ನೀಡಿದರು.
ಪತ್ರಿಕಾ ಭವನದಲ್ಲಿ ನಡೆದ ಪೊಲೀಸ್ ಇಲಾಖೆ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಹಿಂದಿನ ಅವಧಿಗೆ ಹೋಲಿಸಿದರೆ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ದಾಖಲಾದ ಪ್ರಕರಣಗಳಲ್ಲಿ ಸುಮಾರು ಶೇ.80ರಷ್ಟು ಪತ್ತೆ ಕಾರ್ಯ ಯಶಸ್ವಿಯಾಗಿ ನಡೆಸಲಾಗಿದೆ. ಆದರೂ ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸುವುದು ಅಗತ್ಯ. ಅಪರಿಚಿತರು ಕಳುಹಿಸುವ ಎಪಿಕೆ ಫೈಲ್‌ಗಳನ್ನು ಕ್ಲಿಕ್ ಮಾಡುವುದರಿಂದ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು ಹಾಗೂ ಒಟಿಪಿ ಮಾಹಿತಿಗಳು ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿ ಅಥವಾ ಮಾಹಿತಿಯನ್ನು ಅದರ ಸತ್ಯಾಸತ್ಯತೆ ಪರಿಶೀಲಿಸದೆ ಹಂಚಿಕೊಳ್ಳಬಾರದು. ಆಧಾರ ರಹಿತ, ಸುಳ್ಳು ಸುದ್ದಿ, ವ್ಯಕ್ತಿಯ ತೇಜೋವಧೆ ಮಾಡುವ ಅಥವಾ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ರೀತಿಯ ಪೋಸ್ಟ್‌ಗಳು ಮತ್ತು ಸಂದೇಶಗಳನ್ನು ಪ್ರಸಾರ ಮಾಡಿದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪೋಕ್ಸೊ ಪ್ರಕರಣಗಳಲ್ಲಿ ಸಂತ್ರಸ್ತ ಮಕ್ಕಳ ಗುರುತು ಬಹಿರಂಗಪಡಿಸುವುದು ಕಾನೂನುಬಾಹಿರವಾಗಿದೆ. ಸಂತ್ರಸ್ತರ ಹೆಸರು, ವಿಳಾಸ, ಛಾಯಾಚಿತ್ರ ಅಥವಾ ಗುರುತು ಪತ್ತೆಯಾಗುವ ಯಾವುದೇ ಮಾಹಿತಿಯನ್ನು ಪ್ರಕಟಿಸಬಾರದು. ಈ ಕುರಿತು ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಲಯಗಳು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದು, ಮಾಧ್ಯಮಗಳು ಹಾಗೂ ಸಾರ್ವಜನಿಕರು ಅವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಸೈಬರ್ ವಂಚನೆಗೆ ಒಳಗಾದರೆ ವಿಳಂಬ ಮಾಡದೆ ತತ್‌ಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಬೇಕು. ಆರಂಭಿಕ ಹಂತದಲ್ಲಿಯೇ ದೂರು ನೀಡಿದರೆ ಹಣ ಮರುಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪಿಎಸ್‌ಐ ಪ್ರಸನ್ನ ಹೇಳಿದರು.
ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಹೆಬ್ರಿ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಸುಕುಮಾರ್, ಸಂಘದ ಪದಾಧಿಕಾರಿಗಳಾದ ಉದಯ ಮುಂಡ್ಕೂರು, ಹರೀಶ್ ಸಚ್ಚರಿಪೇಟೆ, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.

















