ಉಡುಪಿ : ರಾಷ್ಟ್ರ ಮಟ್ಟದ ಎಂಬಿಬಿಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಎನ್‌ಟಿಎ ನಡೆಸಿದ ನೀಟ್ 2026ರ ಫಲಿತಾಂಶದಲ್ಲಿ 720ಕ್ಕೆ 680 ಅಂಕಗಳೊಂದಿಗೆ ಜನರಲ್ ಮೆರಿಟ್‌ನಲ್ಲಿ 267ನೇ ರ‍್ಯಾಂಕ್ ಪಡೆದು ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಮೇಧಾಂಶ್ ಎನ್.ಬಿ ಹಾಗೂ 670 ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ 701ನೇ ರ‍್ಯಾಂಕ್ ಪಡೆದುಕೊಂಡ ಅನಿರುದ್ಧ್ ಆರ್. ಉಡುಪ ಅವರನ್ನು ಉಡುಪಿ ಜ್ಞಾನಸುಧಾದಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನೀಟ್ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ ಸನ್ಮಾನಿಸಲಾಯಿತು. ಟ್ರಸ್ಟ್ ವತಿಯಿಂದ ಮೇಧಾಂಶ್ ಇವರಿಗೆ 2.5 ಲಕ್ಷ, ಅನಿರುದ್ಧ್ ಆರ್. ಉಡುಪ ಅವರಿಗೆ 2 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ನೀಟ್‌ನಲ್ಲಿ 500ಕ್ಕಿಂತ ಅಧಿಕ ಅಂಕಗಳನ್ನು ಪಡೆದುಕೊಂಡ ಉಡುಪಿ ಜ್ಞಾನಸುಧಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರು ಮಾತನಾಡಿ ನೀಟ್ ಪರೀಕ್ಷೆಗೆ ನಡೆಸುವ ತಯಾರಿಗಿಂತ ಕಠಿಣವಾದದ್ದು ಹೆತ್ತವರು ತಮ್ಮ ಮಕ್ಕಳನ್ನು ನೋಡಿಕೊಳ್ಳುವುದು. ಅಂತಹ ಹೆತ್ತವರನ್ನು ದೇವರಾಗಿ ಕಾಣಿರಿ. ಕೀಳರಿಮೆ ಬಿಟ್ಟು ಮನಸ್ಸಿನ ನಿಗ್ರಹ ಮತ್ತು ಸಮಯದ ಪರಿಪಾಲನೆಯ ಜೊತೆಗೆ ಮುಂದುವರಿಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಓ. ಮತ್ತು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ಮಾತನಾಡಿ ನೀಟ್ ಪರೀಕ್ಷಾ ಸಾಧನೆಯನ್ನು ಸರ್ಕಾರ ಗುರುತಿಸುವಂತಾಗಬೇಕು.
ಉಡುಪಿ ಜ್ಞಾನಸುಧಾ ಕಾಲೇಜು ದೈವಿಕ ಅನುಭೂತಿಯನ್ನು ನೀಡುತ್ತದೆ. ಜ್ಞಾನಸುಧಾದ ನಾಲ್ಕು ಸಂಸ್ಥೆಗಳು ಆರೋಗ್ಯಕರ ಸ್ಪರ್ಧೆಯೊಂದಿಗೆ ಕೆಲಸ ಮಾಡುತ್ತಿವೆ ಎಂದರು.
ಅಜೆಕಾರು ಜ್ಞಾನಸುಧಾದ ಪ್ರಾಂಶುಪಾಲ ಸಂತೋಷ್ ಮಾತನಾಡಿ ವಿದ್ಯಾರ್ಥಿಗಳ ಬದ್ಧತೆ, ಸತತ ಪರಿಶ್ರಮ, ಪೋಷಕರ ಪ್ರೋತ್ಸಾಹ ಮತ್ತು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಬೋಧಕ, ಬೋಧಕೇತರ ವರ್ಗದವರ ದುಡಿಮೆಯ ಫಲಿತಾಂಶ ಎಂದರು.
ಈ ಬಾರಿಯ ನೀಟ್ 2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಒಟ್ಟು 528 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ, 59 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ ಹಾಗೂ 133 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಸಂಸ್ಥೆಯ 260 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಪಡೆದಿದ್ದಾರೆ.

ಈ ಸಂದರ್ಭ ಮಣಿಪಾಲ ಜ್ಞಾನಸುಧಾದ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಉಡುಪಿ ಜ್ಞಾನಸುಧಾದ ಪ್ರಾಂಶುಪಾಲ ಶ್ರೀನಿಧಿ ಭಾಗವತ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು., ಉಪಪ್ರಾಂಶುಪಾಲ ಪ್ರಕಾಶ್ ಜೋಗಿ, ಉಡುಪಿ ಜ್ಞಾನಸುಧಾದ ಜೆಇಎ ಸಂಯೋಜಕ ಪ್ರವೀಣ್ ಜೋನ್ ಡಿ ಅಲ್ಮೆಡಾ, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಮೊದಲಾದವರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ನಿಖಿ ಅನ್ನಾ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.















