ಕಾಂಗ್ರೆಸ್‌ ಓಲೈಕೆಗಾಗಿ ಸುಳ್ಳು ಪ್ರಚಾರ ನಿಲ್ಲಿಸಿ : ಸುಂದರ್ – ಸಂಜೀವ ಮಾಳ ತಾಕೀತು

ಕಾರ್ಕಳ : ಕಾರ್ಕಳದ ಅಭಿವೃದ್ಧಿ ಎನ್ನುವುದು ಅದು ಸುನಿಲ್ ಕುಮಾರ್ ಅವರ ದೂರದೃಷ್ಟಿಯ ಫಲ. ಇಡೀ ರಾಜ್ಯದಲ್ಲಿ ತಾಲೂಕು ಮಟ್ಟದಲ್ಲಿ ಮಾದರಿಯಾಗಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನ ಇದ್ದರೆ ಅದು ಕಾರ್ಕಳದಲ್ಲಿ. ಶಾಸಕರ ನಿರಂತರ ಪ್ರಯತ್ನದ ಫಲವಾಗಿ ಬೃಹತ್ ಅನುದಾನ ದೊರಕಿದ್ದರ ಪರಿಣಾಮ ಸುಸಜ್ಜಿತ ಅಂಬೆಡ್ಕರ್ ಭವನ ಆಗಿದೆ. ಇದರ ಲಾಭ ಪಡೆದುಕೊಂಡು ಪ್ರಚಾರದ ತೆವಲಿಗಾಗಿ ಇದು ನಮ್ಮ ಶ್ರಮದ ಪ್ರತಿಫಲ ಎಂಬುದಾಗಿ ಹೇಳುವ ನೀವು ಬೊಗಳೆ ಬಿಡುವುದರಲ್ಲಿ ನಿಸ್ಸೀಮರು ಎಂದು ತಾ.ಪಂ. ಮಾಜಿ ಅಧ್ಯಕ್ಷ ಸುಂದರ್ ಹಾಗೂ ಸಂಜೀವ ಮಾಳ ಅವರು ಅಣ್ಣಪ್ಪ ನಕ್ರೆ ಹಾಗೂ ರಾಘವ ಕುಕ್ಕುಜೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೀವು ದಾರಿ ತಪ್ಪಿಸುವ ರಾಜಕಾರಣ ಬಿಟ್ಟು ಜನಪರ ಕೆಲಸ ಮಾಡಿ ಅಥವಾ ಜನಪರ ಕೆಲಸ ಮಾಡಿದವರನ್ನು ಗುರುತಿಸುವ ಕಾರ್ಯ ಮಾಡಿ. ಕಾರ್ಕಳ ಅಂಬೇಡ್ಕರ್‌ ಭವನ ನಿಮ್ಮಿಂದಲೇ ಆಗಿದ್ದು ಎಂದು ಸುಳ್ಳು ಹೇಳುವ ನೀವು ಪ್ರತ್ಯೇಕ ತಾಲೂಕು ಆಗಿ ರಚನೆಗೊಂಡಿರುವ ಹೆಬ್ರಿ ತಾಲೂಕಿನಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 6 ಕೋಟಿ ರೂ. ಅನುದಾನ ತನ್ನಿ ಎಂದು ಸುಂದರ ಹಾಗೂ ಸಂಜೀವ ಅವರು ಪ್ರಕಟಣೆಯಲ್ಲಿ ಸವಾಲು ಹಾಕಿದ್ದಾರೆ.

ಹೆಬ್ರಿ ತಾಲೂಕು ಘೋಷಣೆಯಾಗಿ ವರ್ಷಗಳೇ ಕಳೆದರೂ ಅಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಿಲ್ಲ. ಈಗ ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ನಿಮಗೆ ನಿಜವಾಗಿಯೂ ಸಮುದಾಯದ ಮೇಲೆ ಕಾಳಜಿ ಇದ್ದರೆ, ನೀವು ಹೇಳಿದಂತೆ ಕಾರ್ಕಳ ಅಂಬೆಡ್ಕರ್ ಭವನಕ್ಕೆ ನಿಮ್ಮ ಪ್ರಯತ್ನದಿಂದ ಅನುದಾನ ಬಂದಿದ್ದರೆ ಹೆಬ್ರಿ ಅಂಬೇಡ್ಕರ್ ಭವನಕ್ಕೆ 6.0 ಕೋಟಿ ರೂ. ಅನುದಾನ ತಂದು ನಿರ್ಮಾಣ ಮಾಡಿ ತೋರಿಸಿ. ಆಗ ನಿಮ್ಮ ಶಕ್ತಿ ಏನು ಎಂಬುದು ಜನರಿಗೆ ತಿಳಿಯುತ್ತದೆ. ಸವಾಲು ಸ್ವೀಕರಿಸುವ ತಾಕತ್ತು ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ತಲಾ 60 ಲಕ್ಷ ರೂ.
ಕೇಂದ್ರ ಸರಕಾರದ ಪಿ.ಎಂ. ಜನ್ ಮನ್ ಕಾರ್ಯಕ್ರಮದಡಿ ಕೊರಗ ಸಮುದಾಯದ ಏಳಿಗೆಗಾಗಿ ಕೇಂದ್ರ ಸರಕಾರ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ತಲಾ 60 ಲಕ್ಷ ರೂ. ವೆಚ್ಚದಲ್ಲಿ ಮುಡಾರು, ಮುಂಡ್ಕೂರು, ಬೆಳ್ಮಣ್ ಮತ್ತು ಮರ್ಣೆ ಗ್ರಾಮಗಳಲ್ಲಿ ಸಮುದಾಯ ಭವನ ಮಂಜೂರಾಗಿದೆ. ಮುಂಡ್ಕೂರು, ಬೆಳ್ಮಣ್ ಮತ್ತು ಮುಡಾರು ಗ್ರಾಮಗಳಲ್ಲಿ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ಉಳಿದ ಒಂದು ಭವನ ಸ್ಥಳೀಯರ ಮನವಿಯಂತೆ ನಿಟ್ಟೆ ಗ್ರಾಮದಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಿ ಭವನ ನಿರ್ಮಾಣವಾಗಲಿದೆ. ಕಾರ್ಕಳದ 4 ಕಡೆಗಳಲ್ಲಿ ಕೊರಗರ ಭವನ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ತರುವಲ್ಲಿ ಶಾಸಕರ ಪ್ರಯತ್ನ ಅಭಿನಂದನೀಯ. ನಾವು ಕೆಲಸದ ಮೂಲಕ ಉತ್ತರ ನೀಡುವವರು. ಕೇವಲ ಸುಳ್ಳು ಹೇಳಿಕೆ ನೀಡಿ ದಾರಿ ತಪ್ಪಿಸುವುದು ನಮ್ಮ ಸಂಸ್ಕೃತಿಯಲ್ಲ. ಸಮಾಜದ ಏಳಿಗೆಗಾಗಿ ಶ್ರಮಿಸುವ ಬದ್ಧತೆ ನಮಗಿದೆ. ನಿಮ್ಮ ಹತ್ತಿರ ಅಧಿಕಾರವಿದೆ, ಅನುದಾನ ತನ್ನಿ, ಅಭಿವೃದ್ಧಿ ಮಾಡಿ ತೋರಿಸಿ. ಅಲ್ಲಿಯವರೆಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.













































































error: Content is protected !!
Scroll to Top