ಕಾರ್ಕಳ: ಮಹಿಳಾ ಮೀಸಲಾತಿ ಮಸೂದೆಯ ಹಿಂದೆ ಬಿಜೆಪಿ ನಿಗೂಢ ರಾಜಕೀಯ ಕಾರ್ಯಸೂಚಿಯನ್ನು ಹೊಂದಿದೆ. ಕ್ಷೇತ್ರ ಪುನರ್ ವಿಂಗಡಣೆಯ ನೆಪದಲ್ಲಿ ಅಧಿಕಾರ ಹಿಡಿಯಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಮಹಿಳೆಯರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2023 ರಲ್ಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡು, ರಾಷ್ಟ್ರಪತಿಗಳ ಅಂಕಿತ ಪಡೆದಿರುವ ಮಸೂದೆಯನ್ನು ಈವರೆಗೆ ಜಾರಿಗೊಳಿಸದೆ ಕಾಲಹರಣ ಮಾಡಲಾಗಿದೆ. ಈಗ ಪಂಚರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆ ತರಾತುರಿಯಲ್ಲಿ ಈ ವಿಷಯವನ್ನು ಮುನ್ನೆಲೆಗೆ ತಂದಿರುವುದು ಜನರ ಕಣ್ಣಿಗೆ ಮಣ್ಣೆರಚುವ “ತಂತ್ರ” ಎಂದು ಕಿಡಿಕಾರಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಎಂಬ ‘ವಿಷ’
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡು ಪ್ರಾದೇಶಿಕ ಪಕ್ಷಗಳ ಊರುಗೋಲಿನ ನೆರವಿನಿಂದ ಸರ್ಕಾರ ನಡೆಸುತ್ತಿರುವ ಬಿಜೆಪಿ, ದೇಶದಲ್ಲಿ ತನ್ನ ಜನಪ್ರಿಯತೆ ಕುಸಿಯುತ್ತಿರುವುದನ್ನು ಕಂಡು ಆತಂಕಗೊಂಡಿದೆ. ತಾನು ಪ್ರಬಲವಾಗಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಮೂಲಕ ಸ್ಥಾನಗಳನ್ನು ಹೆಚ್ಚಿಸಿಕೊಂಡು, ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಮಹಿಳಾ ಮೀಸಲಾತಿಯೆಂಬ ಅನ್ನದ ಬಟ್ಟಲಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆಯೆಂಬ ವಿಷ ಬೆರೆಸುವ ಕೆಲಸವನ್ನು ಕೇಂದ್ರ ಮಾಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
ಮಹಿಳಾ ಸಬಲೀಕರಣ ಕೇವಲ ಭಾಷಣಕ್ಕೆ ಸೀಮಿತ:
ಬಿಜೆಪಿಗೆ ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ 2023ರಲ್ಲೇ ಇದನ್ನು ಜಾರಿಗೊಳಿಸಬಹುದಿತ್ತು. ಮಹಿಳಾ ಸಬಲೀಕರಣ ಎಂಬ ಪವಿತ್ರ ಆಶಯವನ್ನು ಕೇವಲ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಇಂದಿನ ಮತದಾರರು ಜಾಗೃತರಾಗಿದ್ದು, ಬಣ್ಣದ ಭಾಷಣಗಳಿಗಿಂತ ಮಿಗಿಲಾಗಿ ಪ್ರಾಮಾಣಿಕ ಕಾರ್ಯರೂಪವನ್ನು ನಿರೀಕ್ಷಿಸುತ್ತಿದ್ದಾರೆ. ಅಧಿಕಾರದ ಹಪಾಹಪಿ ಬಿಟ್ಟು ಮಹಿಳೆಯರ ಹಕ್ಕುಗಳನ್ನು ಬಲಪಡಿಸುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಲಿ ಎಂದು ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಹೆಸರಲ್ಲಿ ಬಿಜೆಪಿ ರಾಜಕೀಯ ನಾಟಕ: ಶುಭದ ರಾವ್ ಆಕ್ರೋಶ

































































