ಕೊರಗರ ಸಮುದಾಯ ಭವನಕ್ಕೆ ಶಾಸಕರಿಂದ ಅಡ್ಡಿ

ಬಿಜೆಪಿಯ ದಲಿತ ಮುಖಂಡರ ಮೌನ ಅಣ್ಣಪ್ಪ ನಕ್ರೆ – ರಾಘವ ಕುಕ್ಕುಜೆ ಆರೋಪ


ಕಾರ್ಕಳ : ಮರ್ಣೆ ಗ್ರಾಮದ ಕಾಡುಹೊಳೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕೊರಗರ ಸಮುದಾಯ ಭವನ ಕಾಮಗಾರಿಗೆ ಶಾಸಕ ಸುನಿಲ್ ಕುಮಾರ್ ಅವರು ಪಿತೂರಿ ನಡೆಸಿ ಅಡ್ಡಿಪಡಿಸಿದ್ದಾರೆ ಎಂದು ದಲಿತ ಮುಖಂಡರಾದ ನ್ಯಾಯವಾದಿ ರಾಘವ ಕುಕ್ಕುಜೆ ಹಾಗೂ ಅಣ್ಣಪ್ಪ ನಕ್ರೆ ಆರೋಪಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾಗಿದ್ದ 60 ಲಕ್ಷ ರೂ. ಅನುದಾನದಲ್ಲಿ ಈಗಾಗಲೇ 20 ಲಕ್ಷ ರೂ. ವ್ಯಯಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಶಾಸಕರ ಹಸ್ತಕ್ಷೇಪದಿಂದಾಗಿ ಇಂದು ಕಟ್ಟಡವು ಪಾಳುಬಿದ್ದಿದ್ದು, ಸಮುದಾಯಕ್ಕೆ ದ್ರೋಹ ಬಗೆಯಲಾಗಿದೆ. ಇಷ್ಟು ದೊಡ್ಡ ಅನ್ಯಾಯ ನಡೆಯುತ್ತಿದ್ದರೂ ಬಿಜೆಪಿಯಲ್ಲಿರುವ ದಲಿತ ಮುಖಂಡರು ಮೌನಕ್ಕೆ ಶರಣಾಗಿರುವುದು ವಿಪರ್ಯಾಸ ಎಂದು ಅವರು ಜಂಟಿ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

ಶಾಸಕರ ಹಿತಕ್ಕೆ ಆದ್ಯತೆ
​ಬಿಜೆಪಿಯ ದಲಿತ ಮುಖಂಡರು ಸಮುದಾಯದ ಹಿತಕ್ಕಿಂತ ಶಾಸಕರ ಹಿತ ಕಾಯುವುದಕ್ಕೇ ಆದ್ಯತೆ ನೀಡುತ್ತಿದ್ದಾರೆ ಎಂದು ಟೀಕಿಸಿರುವ ರಾಘವ ಕುಕ್ಕುಜೆ, ಅಂಬೇಡ್ಕರ್ ಭವನಕ್ಕೆ ಶಾಸಕರು 6 ಕೋಟಿ ಅನುದಾನ ತಂದಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ಆಕ್ಷೇಪಿಸಿದರು. ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರಾಗಿದ್ದು ಕೇವಲ 75 ಲಕ್ಷ ರೂ. ಮಾತ್ರ. ಉಳಿದ ಮೊತ್ತವನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರವೇ ಬಿಡುಗಡೆ ಮಾಡಿದೆ. ಉದ್ಘಾಟನಾ ಸಮಾರಂಭದಲ್ಲಿ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಶಾಸಕರ ಸಮ್ಮುಖದಲ್ಲೇ ಈ ಸತ್ಯವನ್ನು ಘೋಷಿಸಿದಾಗ ಸುನಿಲ್ ಕುಮಾರ್ ಅವರು ಯಾಕೆ ಮೌನವಾಗಿದ್ದರು ? ಎಂದವರು ಪ್ರಶ್ನಿಸಿದ್ದಾರೆ.

ಬಹಿರಂಗಪಡಿಸಲಿ
​ವಾಟ್ಸ್ಯಾಪ್ ಯುನಿವರ್ಸಿಟಿಯ ಮಾಹಿತಿಯನ್ನು ನಂಬಿ ಹೇಳಿಕೆ ನೀಡುವ ಬಿಜೆಪಿ ಮುಖಂಡರು ಮೊದಲು ವಾಸ್ತವ ತಿಳಿಯಲಿ ಎಂದು ಲೇವಡಿ ಮಾಡಿರುವ ಅವರು, ಅಂಬೇಡ್ಕರ್ ಭವನಕ್ಕಾಗಿ ತಾವು ನಡೆಸಿದ ಸುದೀರ್ಘ ಹೋರಾಟದ ದಾಖಲೆಗಳನ್ನು ಬಹಿರಂಗಪಡಿಸಲು ಸಿದ್ಧರಿರುವುದಾಗಿ ಸವಾಲು ಹಾಕಿದ್ದಾರೆ. ಅಂಬೇಡ್ಕರ್ ಭವನಕ್ಕೆ ಜಾಗ ಮಂಜೂರಾತಿಗಾಗಿ ತಹಶೀಲ್ದಾರರಿಗೆ ಸಲ್ಲಿಸಿದ ಮನವಿಗಳು ಹಾಗೂ ಕುಂದುಕೊರತೆ ಸಭೆಗಳಲ್ಲಿ ನಡೆಸಿದ ಚರ್ಚೆಗಳ ದಾಖಲೆಗಳು ತಮ್ಮ ಬಳಿ ಇವೆ. ಹೇಳಿಕೆ ನೀಡುವ ಮುಖಂಡರು ಸಮುದಾಯದ ಪರವಾಗಿ ಮಾಡಿದ ಒಂದೇ ಒಂದು ಹೋರಾಟದ ದಾಖಲೆಯನ್ನು ಬಹಿರಂಗಪಡಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ವ್ಯಕ್ತಿಪೂಜೆಯೇ ಮುಖ್ಯವಾಯಿತೇ ?
ಅಂಬೇಡ್ಕರ್ ಜಯಂತಿಯಂದು ಕಚೇರಿಯಲ್ಲೇ ಇದ್ದರೂ ಶಾಸಕರು ಕಾರ್ಯಕ್ರಮಕ್ಕೆ ಬಾರದೆ ಅಸಡ್ಡೆ ತೋರಿರುವುದನ್ನು ಪ್ರಶ್ನಿಸಿದರೆ, ಬಿಜೆಪಿ ಮುಖಂಡರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅಣ್ಣಪ್ಪ ನಕ್ರೆ ಆಕ್ರೋಶ ವ್ಯಕ್ತಪಡಿಸಿದರು. ಊಟ ಆಯ್ತಾ ಎಂದರೆ ಮುಂಡಾಸು ಮೂವತ್ತು ಮೊಳ ಎನ್ನುವಂತೆ ಶಾಸಕರ ತಪ್ಪನ್ನು ಮುಚ್ಚಿ ಹಾಕಲು ದಲಿತ ಮುಖಂಡರು ಮುಂದಾಗಿದ್ದಾರೆ. ಇವರಿಗೆ ಸಮಾಜದ ಹಿತಕ್ಕಿಂತ ವ್ಯಕ್ತಿಪೂಜೆಯೇ ಮುಖ್ಯವಾಯಿತೇ ? ಎಂದು ಪ್ರಶ್ನಿಸಿರುವ ಅವರು, ಶಾಸಕರ ದಲಿತ ವಿರೋಧಿ ಧೋರಣೆಯನ್ನು ಸಮುದಾಯವು ಗಮನಿಸುತ್ತಿದೆ ಎಂದರು.











































































error: Content is protected !!
Scroll to Top