ಆರೋಗ್ಯ ಧಾರಾ –ಆಹಾರದಷ್ಟೇ ಮುಖ್ಯ ನಿದ್ರೆ

ಜೀವನದಲ್ಲಿ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಿದ್ರೆಯು ಕೂಡ. ಒಳ್ಳೆಯ ನಿದ್ದೆಯೂ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ  ಬೆಳವಣಿಗೆಯಲ್ಲಿ  ಪ್ರಮುಖ ಪಾತ್ರ ವಹಿಸುತ್ತದೆ .ಆಯುರ್ವೇದ ತ್ರಿದೋಷ ಸಿದ್ಧಾಂತದ ಮೇಲೆ ನಿಂತಿದೆ. ಋತುಗಳ ಅನುಸಾರ ದೋಷಗಳ ಪ್ರಧಾನತೆ ಇರುವ ಹಾಗೆ ದಿನದಲ್ಲಿ ಕೂಡ ದೋಷದ ಪ್ರಭಾವವೂ ಕಾಣಬಹುದು . ಸೂರ್ಯ ಹಾಗೂ ನಮ್ಮ ದೇಹಕ್ಕೆ ನೇರ ಸಂಬಂಧವಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಮ್ಮ ದೇಹದಲ್ಲಿರುವ  ದೋಷಗಳ ಪ್ರಧಾನತೆ  ಕಾಣಬಹುದು .

ಕಫ ದೋಷ –  ಬೆಳಗ್ಗೆ 6 – ಬೆಳಗ್ಗೆ 10

ಪಿತ್ತದೋಷ  – ಬೆಳಗ್ಗೆ 10 – ಮಧ್ಯಾಹ್ನ 2

ವಾತದೋಷ – ಮಧ್ಯಾಹ್ನ 2 –ಸಂಜೆ 6

ಕಫ ದೋಷ  ಸಂಜೆ 6 – ರಾತ್ರಿ 10

ಪಿತ್ತದೋಷ –ರಾತ್ರಿ 10 –ಮುಂಜಾನೆ 2

ವಾತದೋಷ –ಮುಂಜಾನೆ 2  – ಬೆಳಗ್ಗೆ  6

ಇದಕ್ಕೆ ಅನುಸಾರವಾಗಿ ನಮ್ಮ ಆಹಾರ ನಿದ್ರೆ ಇರಬೇಕು ಎಂದು ಆಯುರ್ವೇದ ಹೇಳುತ್ತದೆ . ಆಯುರ್ವೇದದ ಮೂರು ಉಪ ಸ್ತಂಭದಲ್ಲಿ ಒಂದಾದ ನಿದ್ರೆಯ ಬಗ್ಗೆ ತಿಳಿಯೋಣ.

ನಿದ್ರೆ ಸಹಜವಾದ ಕ್ರಿಯೆ .  ರಾತ್ರಿ ಊಟವಾದ ಎರಡು ಗಂಟೆಯ ತರುವಾಯ ನಿದ್ರೆ ಮಾಡಬೇಕು.

ನಿದ್ರೆಯ ಅವಧಿ ಮಕ್ಕಳಿಗೆ ಹೆಚ್ಚಾಗಿದ್ದು ವೃದ್ಧರಾದಂತೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ .

ವಯಸ್ಸು                                  ನಿದ್ರಾವಧಿ

ಜನ್ಮದಿಂದ 1 ತಿಂಗಳವರೆಗೆ            18-20 ಗಂಟೆಗಳು

1ತಿಂಗಳಿನಿಂದ 6ತಿಂಗಳುಗಳವರೆಗೆ     15-18 ಗಂಟೆಗಳು

6 ತಿಂಗಳಿನಿಂದ 12 ತಿಂಗಳುಗಳವರೆಗೆ   14 -16 ಗಂಟೆಗಳು

1ರಿಂದ 2 ವರ್ಷದವರೆಗೆ           12 -14 ಗಂಟೆಗಳು

2ರಿಂದ 5 ವರ್ಷದವರೆಗೆ            10-12 ಗಂಟೆಗಳು

5 ರಿಂದ 16 ವರ್ಷದವರೆಗೆ        8 – 10 ಗಂಟೆಗಳು

ಯೌವ್ವನದಲ್ಲಿ                          8  ಗಂಟೆಗಳು

ವೃದ್ಧಾಪ್ಯದಲ್ಲಿ                        4-6  ಗಂಟೆಗಳು

ಆರೋಗ್ಯವಂತರು ಹಗಲು ವೇಳೆ ನಿದ್ರೆ ಮಾಡಬಾರದು. ಹಗಲು ಸಮಯ ನಿದ್ರಿಸುವುದರಿಂದ ಕಫ ದೋಷ ವೃದ್ಧಿಯಾಗಿ  ಆಲಸ್ಯ ಬಂದು  ಲವಲವಿಕೆ ಕಡಿಮೆಯಾಗುತ್ತದೆ.ತಲೆನೋವು ,ಮೈಭಾರ, ಮೈಕೆ ನೋವು ಉಂಟಾಗುತ್ತದೆ.  ಕ್ರಮೇಣ ಕೊಬ್ಬು ಶೇಖರಣೆಯಾಗಿ ಬೊಜ್ಜು ಬೆಳೆಯುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಗ್ರೀಷ್ಮ ಋತು ಅಥವಾ ಬೇಸಿಗೆ ಕಾಲದಲ್ಲಿ ಮಾತ್ರ ದೇಹಬಲ  ಹಾಗೂ ರಾತ್ರಿಯ ಸಮಯ ಕಡಿಮೆ ಇರುವುದರಿಂದ ಹಗಲು ವೇಳೆ ನಿದ್ರಿಸಬಹುದು. ಮಧ್ಯಾಹ್ನ ಊಟ ಮಾಡುವ ಒಂದು ಗಂಟೆ ಮುಂಚಿತವಾಗಿ ನಿದ್ರೆ ಮಾಡಬಹುದು. ಊಟದ ನಂತರ ನಿದ್ರಿಸುವುದು ಒಳ್ಳೆಯದಲ್ಲ .

ಯಾರು ಹಗಲು ನಿದ್ದೆ ಮಾಡಬಹುದು?  

ವಿದ್ಯಾರ್ಥಿಗಳು, ಸಂಗೀತಗಾರರು, ವಿಪರೀತ ಕೆಲಸ ಮಾಡುವವರು ,ಮಕ್ಕಳು ,ವೃದ್ಧರು ,ಗಾಯಗೊಂಡವರು ,ಕಡಿಮೆ ತೂಕ – ಅಪೌಷ್ಟಿಕತೆ ಉಳ್ಳವರು,ಪಂಚಕರ್ಮ ಚಿಕಿತ್ಸೆ  ಮಾಡಿಸಿದವರು ,ಉದರಶೂಲ,ಅತಿಸಾರ ಇರುವವರು ಹಗಲು ನಿದ್ದೆ ಮಾಡಬಹುದು .

ಹಗಲು ನಿದ್ದೆ ಇವರಿಗೆ ನಿಷೇಧ

ಸ್ಥೂಲ ದೇಹ ಉಳ್ಳವರು ,ದಿನನಿತ್ಯ ಅಧಿಕ ಪ್ರಮಾಣ ತುಪ್ಪ ಅಥವಾ ಎಣ್ಣೆ  ಸೇವಿಸುವವರು, ಕಫ ಪ್ರಕೃತಿ ಯುಳ್ಳವರು,  ಕಫ ರೋಗ ಇರುವವರು ಹಗಲು ನಿದ್ರೆ ಮಾಡಬಾರದು .

ಹಗಲು ನಿದ್ರೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳು

ಊತ , ರುಚಿಯಿಲ್ಲದಿರುವುದು, ವಾಕರಿಕೆ, ಶೀತ, ಕೆಮ್ಮು, ತುರಿಕೆ, ಮೈಗ್ರೇನ್, ತ್ವಚೆಯ ರೋಗಗಳು ,ಗಂಟಲು ರೋಗ, ಜ್ಞಾನೇಂದ್ರಿಯ ದೌರ್ಬಲ್ಯ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು .

ಆರೋಗ್ಯದಿಂದಿರಲು ಸರಿಯಾದ ಸಮಯದಲ್ಲಿ ನಿದ್ರೆ ಮಾಡಿರಿ .

ಡಾ.ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು































































































error: Content is protected !!
Scroll to Top