ರಕ್ತದೊತ್ತಡ

ಆಯುರ್ವೇದದಲ್ಲಿ ಅಧಿಕ ರಕ್ತದೊತ್ತಡವನ್ನು ನೇರವಾಗಿ ಹೆಸರಿಸಿಲ್ಲ. ಆದರೆ, ಇದನ್ನು ರಕ್ತಗತ ವಾತ, ಶೋಣಿತ ದುಷ್ಟಿ ಅಥವಾ ವ್ಯಾನ ವಾತ ವೈಶಮ್ಯ ಎಂದು ಅರ್ಥೈಸಬಹುದು. ಹೃದಯದಿಂದ ರಕ್ತವನ್ನು ಪಂಪ್ ಮಾಡುವಾಗ ಧಮನಿಗಳ ಗೋಡೆಗಳ ಮೇಲೆ ಬೀಳುವ ಒತ್ತಡ ಹೆಚ್ಚಾದಾಗ ಇದನ್ನು ಅಧಿಕ ರಕ್ತದೊತ್ತಡ ಎನ್ನುತ್ತೇವೆ. ಆಧುನಿಕ ಮಾಪನದಲ್ಲಿ 140/90 mmHg ಗಿಂತ ಹೆಚ್ಚಿದ್ದರೆ ಅಧಿಕ BP ಎಂದು ಪರಿಗಣಿಸಲಾಗುತ್ತದೆ.

ಆಯುರ್ವೇದದ ಪ್ರಕಾರ ಕಾರಣಗಳು
*ರೋಗವು ದೋಷಗಳ ಅಸಮತೋಲನದಿಂದ ಬರುತ್ತದೆ. ಅಧಿಕ BP ಮುಖ್ಯವಾಗಿ ವಾತ ಮತ್ತು ಪಿತ್ತ ದೋಷಗಳ ಪ್ರಕೋಪದಿಂದ ಉಂಟಾಗುತ್ತದೆ.
*ಒತ್ತಡ, ಚಿಂತೆ, ನಿದ್ರಾಹೀನತೆ, ಅತಿಯಾದ ಪ್ರಯಾಣದಿಂದ ವಾತದೋಷವು ಹೆಚ್ಚಾಗಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ.
*ಕೋಪ, ಖಾರ-ಉಪ್ಪು, ಹುಳಿ ಆಹಾರ, ಮದ್ಯಪಾನಗಳಿಂದ ಪಿತ್ತ ದೋಷವು ಹೆಚ್ಚಾಗಿ ರಕ್ತದ ಒತ್ತಡ ಹೆಚ್ಚುತ್ತದೆ.
*ಜಡ ಜೀವನಶೈಲಿ, ಎಣ್ಣೆ-ಜಿಡ್ಡು ಆಹಾರ ರಕ್ತನಾಳಗಳಲ್ಲಿ ಅಡಚಣೆ, ಕೊಲೆಸ್ಟ್ರಾಲ್
ಇದಲ್ಲದೆ ಅಜೀರ್ಣ, ಮಲಬದ್ಧತೆ , ಮತ್ತು ಮೇಘಸ್ಸಿನಿಂದ ಕಫದೋಷವೂ ಹೆಚ್ಚಾಗಿ ರಕ್ತದೊತ್ತಡ ಹೆಚ್ಚಿಸುತ್ತದೆ.

ಲಕ್ಷಣಗಳು
ಆಯುರ್ವೇದ ಪ್ರಕಾರ ಈ ಲಕ್ಷಣಗಳು ಕಾಣಿಸಬಹುದು: ತಲೆನೋವು, ತಲೆಸುತ್ತು, ಕಣ್ಣು ಮಂಜಾಗುವುದು, ಕೋಪ-ಸಿಟ್ಟು, ನಿದ್ರಾಹೀನತೆ, ಹೃದಯ ಬಡಿತ ಹೆಚ್ಚಾಗುವುದು, ಆಯಾಸ.

ಆಯುರ್ವೇದದಲ್ಲಿ ಚಿಕಿತ್ಸಾ ಸೂತ್ರಗಳು
ಆಯುರ್ವೇದವು ರೋಗದ ಮೂಲ ಕಾರಣವನ್ನು ಸರಿಪಡಿಸಲು ಪ್ರಯತ್ನಿಸುತ್ತದೆ. ಮುಖ್ಯವಾಗಿ 3 ಮಾರ್ಗಗಳು:
ಆಹಾರ – ಪಥ್ಯ
-ಸೇವಿಸಬೇಕು: ಮಜ್ಜಿಗೆ, ಹಸಿ ತರಕಾರಿ, ದಾಳಿಂಬೆ, ಬೆಳ್ಳುಳ್ಳಿ, ನೆಲ್ಲಿಕಾಯಿ, ಮೂಡಿದ ಹೆಸರುಬೇಳೆ, ಬಾರ್ಲಿ ಗಂಜಿ.
-ತಪ್ಪಿಸಬೇಕು : ಅತಿಯಾದ ಉಪ್ಪು, ಉಪ್ಪಿನಕಾಯಿ, ಚಿಪ್ಸ್, ಕೆಂಪು ಮಾಂಸ, ಮದ್ಯ, ಕಾಫಿ, ಹೊರಗಿನ ಜಿಡ್ಡು ಆಹಾರ.
-ಊಟದಲ್ಲಿ ಷಡ್ರಸಯುಕ್ತ ಸಮತೋಲನ ಆಹಾರ ಇರಲಿ. ತಿಕ್ತ ಮತ್ತು ಕಷಾಯ ರಸಗಳು ಪಿತ್ತವನ್ನು ಕಡಿಮೆ ಮಾಡುತ್ತವೆ.

ವಿಹಾರ – ಜೀವನಶೈಲಿ ಹೀಗಿರಲಿ
1. ನಿದ್ರೆ – ರಾತ್ರಿ 10 ಗಂಟೆಯೊಳಗೆ ಮಲಗಿ, 7-8 ಗಂಟೆಗಳ ಕಾಲ ನಿದ್ರೆ ಮಾಡಿ.
2. ವ್ಯಾಯಾಮ – ದಿನಾಲು 30 ನಿಮಿಷ ನಿಧಾನ ನಡಿಗೆ, ಯೋಗ, ಪ್ರಾಣಾಯಾಮ. ಅನುವೋಮ ವಿಲೋಮ, ಭ್ರಾಮರಿ ಮತ್ತು ಶೀತಲಿ ಪ್ರಾಣಾಯಾಮ ರಕ್ತದೊತ್ತಡಕ್ಕೆ ಉತ್ತಮ.
3. ಒತ್ತಡ ನಿರ್ವಹಣೆ – ಧ್ಯಾನ, ಶವಾಸನ, ಮಂತ್ರ ಜಪ ಮಾಡಿ. ಮನಸ್ಸು ಶಾಂತವಿದ್ದರೆ ವಾತ ಕಡಿಮೆಯಾಗುತ್ತದೆ.

ಆಯುರ್ವೇದ ಗಿಡಮೂಲಿಕೆಗಳು
ಆಯುರ್ವೇದ ವೈದ್ಯರು ಸಾಮಾನ್ಯವಾಗಿ ಈ ಔಷಧಗಳನ್ನು ಬಳಸುತ್ತಾರೆ: ಸರ್ಪಗಂಧ, ಅರ್ಜುನ, ಜಟಾಮಾಂಸಿ, ಬ್ರಾಹ್ಮಿ, ಅಶ್ವಗಂಧ, ಪುನರ್ನವ, ಸರ್ಪಗಂಧ ಘನವಟಿ, ಅರ್ಜುನಾರಿಷ್ಟ, ಮುಕ್ತಾವಟಿ, ಬ್ರಾಹ್ಮಿ ವಟಿ, ಪುನರ್ನವಾಸವ.

ಪಂಚಕರ್ಮ ಚಿಕಿತ್ಸೆಗಳು-
ದೋಷ ಹೆಚ್ಚಾದಾಗ ಶೋಧನ ಚಿಕಿತ್ಸೆ ಬೇಕು. ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮಾಡಬೇಕು.
*ವಿರೇಚನ – ಪಿತ್ತ ಪ್ರಧಾನ ದೇಹದಲ್ಲಿನ ಹೆಚ್ಚಿನ ಪಿತ್ತ, ಉಷ್ಣತೆ ಕಡಿಮೆ ಮಾಡುತ್ತದೆ.
*ಬಸ್ತಿ – ವಾತ ಪ್ರಧಾನ ಕರುಳನ್ನು ಶುದ್ಧಿ ಮಾಡಿ ವಾತವನ್ನು ಸಮತೋಲನಗೊಳಿಸುತ್ತದೆ.
*ಶಿರೋಧಾರ – ಇದು ವಾತ-ಪಿತ್ತವನ್ನು ಸಮತೋಲನದಲ್ಲಿಡುತ್ತದೆ. ಶಿರೋಧಾರ ಎಂದರೆ ಹಣೆಯ ಮೇಲೆ ಔಷಧೀಯ ಎಣ್ಣೆಧಾರೆ. ಇದು ಒತ್ತಡ, ನಿದ್ರಾಹೀನತೆ ಕಡಿಮೆ ಮಾಡುತ್ತದೆ.
*ಅಭ್ಯಂಗ ಮಾಡುವುದು. ಇಡೀ ದೇಹಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸರಾಗ ವಾಗುತ್ತದೆ.

ಕಾಲಕ್ಕೆ ತಕ್ಕಂತೆ ಪಾಲನೆ.
1.ಬೇಸಿಗೆಯಲ್ಲಿ ಪಿತ್ತ ಹೆಚ್ಚುತ್ತದೆ. ಎಳನೀರು, ಕಲ್ಲಂಗಡಿ, ಸಬ್ಬಸಿಗೆ ನೀರು ಕುಡಿಯಿರಿ. ಬಿಸಿಲಿಗೆ ಹೋಗಬೇಡಿ.
2.ಮಳೆಗಾಲದಲ್ಲಿ ವಾತ ಹೆಚ್ಚುತ್ತದೆ. ಬಿಸಿ ಆಹಾರ, ಶುಂಠಿ ಕಷಾಯ ಸೇವಿಸಿ. ಹೊರಗೆ ಅಧಿಕ ತಿರುಗಬೇಡಿ.
3.ಚಳಿಗಾಲದಲ್ಲಿ ಕಫ ಹೆಚ್ಚುತ್ತದೆ. ವ್ಯಾಯಾಮ ತಪ್ಪಿಸಬೇಡಿ. ಜೇನುತುಪ್ಪ ಸೇರಿಸಿದ ಬೆಚ್ಚಗಿನ ನೀರು ಒಳ್ಳೆಯದು.

ಆಯುರ್ವೇದದ ಪ್ರಕಾರ “ವರ್ಜ್ಯ” – ಕಡ್ಡಾಯವಾಗಿ ತಪ್ಪಿಸಬೇಕಾದವುಗಳು.
*ವಿರುದ್ಧ ಆಹಾರ- ಹಾಲು + ಉಪ್ಪು, ಹಾಲು + ಮೀನು, ಮೊಸರು ರಾತ್ರಿ ಸೇವನೆ.
*ವೇಗಧಾರಣೆ – ಮಲ, ಮೂತ್ರ, ಅಶ್ರು ತಡೆಹಿಡಿಯುವುದು ವಾತ ಕೆರಳಿಸುತ್ತದೆ.
*ದಿವಾಸ್ವಪ್ನ – ಹಗಲು ನಿದ್ರೆ ಕಫ ಮತ್ತು ಮೇದಸ್ಸು ಹೆಚ್ಚಿಸುತ್ತದೆ.
*ಅತಿ ವ್ಯಾಯಾಮ- ಶಕ್ತಿ ಮೀರಿ ಜಿಮ್‌ ಮಾಡುವುದು ವಾತ ಪ್ರಕೋಪ ಮಾಡುತ್ತದೆ.
*ಮನಸ್ಸಿನ ವೇಗ – ಅತಿಯಾದ ಕಾಮ, ಕ್ರೋಧ, ಭಯ, ಚಿಂತೆ.

ಮನೆಯಲ್ಲಿ ಮಾಡಬಹುದಾದ ಸರಳ ಪರಿಹಾರಗಳು
1. ಬೆಳಗ್ಗೆ ಖಾಲಿ ಹೊಟ್ಟೆಗೆ 1 ಲೋಟ ಬೆಚ್ಚಗಿನ ನೀರಿಗೆ 1 ಚಮಚ ನೆಲ್ಲಿಕಾಯಿ ರಸ + ಜೇನುತುಪ್ಪ ಬೆರೆಸಿ ಕುಡಿಯಿರಿ.
2. 2-3 ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಗೆ ಜಗಿಯಿರಿ.
3. ಧನಿಯಾ ಕಾಳು ಕಷಾಯ: 1 ಚಮಚ ಧನಿಯಾವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಕುದಿಸಿ ಕುಡಿಯಿರಿ.

ಮುಖ್ಯ ಸೂಚನೆ – ಅಧಿಕ ರಕ್ತದೊತ್ತಡ ಗಂಭೀರ ಸ್ಥಿತಿ. ಹೃದಯಾಘಾತ, ಪಾರ್ಶ್ವವಾಯು ತರಬಹುದು. ಆದ್ದರಿಂದ ಮನೆಯ ಮದ್ದು ಪ್ರಾರಂಭಿಸುವ ಮೊದಲು ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ ನಿಮ್ಮ ಪ್ರಕೃತಿ ಮತ್ತು ದೋಷಸ್ಥಿತಿ ತಿಳಿದುಕೊಂಡು ಚಿಕಿತ್ಸೆ ತೆಗೆದುಕೊಳ್ಳಿ. ನೀವು ಈಗಾಗಲೇ ಇಂಗ್ಲಿಷ್ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ, ವೈದ್ಯರ ಸಲಹೆ ಇಲ್ಲದೆ ನಿಲ್ಲಿಸಬೇಡಿ. ಅಧಿಕ ರಕ್ತದೊತ್ತಡ “ಮೂಕ ಕೊಲೆಗಾರ”. ಲಕ್ಷಣ ಕಾಣಿಸದೇ ಇದ್ದರೂ ಅಂಗಾಂಗ ಹಾನಿ ಮಾಡುತ್ತದೆ. ಆದ್ದರಿಂದ BP ಪರೀಕ್ಷೆ ಮಾಡಿಸಿ.















































































































































error: Content is protected !!
Scroll to Top