ತಾಪಮಾನ ಹೆಚ್ಚಾದಂತೆ ವಿವಿಧ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಇದರಲ್ಲಿ ತ್ವಚೆಯ ಸಮಸ್ಯೆಯೂ ಕೂಡ ಒಂದು. ತ್ವಚೆಯ ಆರೈಕೆ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಚರ್ಮದ ಸಮಸ್ಯೆಯಲ್ಲಿ ತುರಿಕೆ, ಬೆವರು ಗುಳ್ಳೆಗಳು ತ್ವಚೆಯು ಸುಕ್ಕುಗಟ್ಟುವುದು, ಸನ್ ಟ್ಯಾನಿಂಗ್ ಪ್ರಮುಖವಾದವುಗಳು. ಇದನ್ನು ತಡೆಯುವುದು ಹೇಗೆ ನೋಡೋಣ.
•ದಿನಾಲು ಯಥೇಚ್ಛವಾಗಿ ನೀರು ಕುಡಿಯಿರಿ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಬಿಸಿ ಮಾಡಿ ಆರಿದ ನೀರನ್ನು ಕುಡಿಯಿರಿ. ನೀರಿಗೆ ಲಾವಂಚ ಬೇರು ಹಾಕಿ ಇಡಿರಿ. ಮಡಿಕೆಯ ನೀರನ್ನು ಕುಡಿಯುವುದು ಒಳ್ಳೆಯದು. ಕೊತ್ತಂಬರಿ ಬೀಜ ನೆನೆಸಿದ ನೀರು ಕೂಡ ದೇಹಕ್ಕೆ ತಂಪನ್ನು ನೀಡುತ್ತದೆ. ಎಳನೀರು, ಬಾರ್ಲಿ ನೀರು, ಕಿತ್ತಳೆ ಹಣ್ಣು, ದ್ರಾಕ್ಷಿ, ಮೋಸಂಬಿ ಹಣ್ಣುಗಳನ್ನು ಸವಿಯಿರಿ. ಮಜ್ಜಿಗೆ, ಸೌತೆಕಾಯಿ, ಕುಂಬಳಕಾಯಿಗಳನ್ನು ಸೇವಿಸಿರಿ. ನೀರಿನ ಅಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಸೇವಿಸಿ.
•ತ್ವಚೆಯನ್ನು ಮೃದುವಾಗಿ ಹಾಗೂ ಆರೋಗ್ಯವಂತವಾಗಿಡಲು ದಿನಾಲು ಅಭ್ಯಂಗ ಸ್ನಾನ ಮಾಡಿರಿ. ಯಾವುದೇ ಎಣ್ಣೆಯನ್ನು ಹಚ್ಚಿ 15 ನಿಮಿಷ ಬಿಟ್ಟು ಸ್ನಾನ ಮಾಡಿ. ಸ್ನಾನ ಮಾಡುವ ನೀರು ಹದ ಬಿಸಿ ಇರಲಿ. ಕೆಮಿಕಲ್ ಯುಕ್ತ ಸಾಬೂನಿನ ಬದಲು ಕಡ್ಲೆಹಿಟ್ಟು, ಹೆಸರು ಹಿಟ್ಟನ್ನು ಬಳಸಿ ಸ್ನಾನ ಮಾಡಿ. ಇದಕ್ಕೆ ಹಾಲು, ಅರಿಶಿನ, ನೀರನ್ನು ಬೆರೆಸಿ ಹಚ್ಚಿ ತೊಳೆದುಕೊಳ್ಳಬಹುದು. ಸಾಬೂನಿನ ಅವಶ್ಯಕತೆ ಇರುವುದಿಲ್ಲ.
•ಲೋಳೆ ರಸ ಕೂಡ ಹಚ್ಚಬಹುದು. ಚರ್ಮ ಒಣಗುವಿಕೆ ಕಡಿಮೆಯಾಗುವುದು.
•ಹಸಿ ಹಾಲಿಗೆ ಅರಿಶಿನ, ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ ಒಣ ಚರ್ಮ ಕಾಡುವುದಿಲ್ಲ.
•ವಿವಿಧ ಹಣ್ಣುಗಳನ್ನು ಬಳಸಿ ಫೇಸ್ ಪ್ಯಾಕ್ ಗಳನ್ನು ಮಾಡಬಹುದು. ಪಪ್ಪಾಯ ಬಾಳೆಹಣ್ಣು ಜಜ್ಜಿ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಬಹುದು.
•ಚಂದನ, ರಕ್ತ ಚಂದನ, ಮಂಜಿಷ್ಟ ಇವೆಲ್ಲವೂ ಚರ್ಮಕ್ಕೆ ಒಳ್ಳೆಯದು. ಯಾವುದಾದರು ಒಂದನ್ನು ನೀರಿನಲ್ಲಿ ಬೆರೆಸಿ ಹಚ್ಚಿ ತೊಳೆಯುವುದರಿಂದ ಚರ್ಮದ ಸಮಸ್ಯೆ ದೂರವಾಗುವುದು.
•ಬಟಾಟೆಯ ರಸವನ್ನು ಕೂಡ ಹಚ್ಚಬಹುದು.
•ಸೌತೆಕಾಯಿಯ ರಸವನ್ನು ಸ್ವಲ್ಪ ಹಾಲಿನಲ್ಲಿ ಬೆರೆಸಿ ಅರಿಶಿಣ ಹಾಕಿ ಹಚ್ಚಬಹುದು.
•ಟೊಮೆಟೊ ರಸವನ್ನು ಕೂಡ ಹಚ್ಚಿದರೆ ಒಳ್ಳೆಯದು.
•ಗುಲಾಬಿ ದಳವನ್ನು ಹಾಲಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಬಹುದು.
•ಅಕ್ಕಿ ಹಿಟ್ಟಿಗೆ ಸ್ವಲ್ಪ ಹಾಲನ್ನು ಬೆರೆಸಿ ಪೇಸ್ಟ್ ಮಾಡಿ ಹಚ್ಚಿ ಸ್ನಾನ ಮಾಡಿ.
•ಸ್ನಾನ ಮಾಡುವ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಅಥವಾ ಬೇವಿನ ಎಣ್ಣೆಯನ್ನು ಹಾಕಿ. ಇದು ತ್ವಚೆಯ ಇನ್ಫೆಕ್ಷನ್ ಆಗುವುದನ್ನು ತಡೆಯುತ್ತದೆ.
•ಮನೆಯಲ್ಲಿ ಬೇವಿನ ಸಾಬೂನು ತಯಾರಿಸಬಹುದು. ಯಾವುದೇ ಸೋಪ್ ಬೇಸನ್ನ ಅಥವಾ ಗ್ಲಿಸರಿನ್ ಸೋಪನ್ನ ಡಬಲ್ ಬಾಯ್ಲರ್ ಮೆಥಡ್ ಮೂಲಕ ಕರಗಿಸಿ ಅದಕ್ಕೆ ಒಂದು ಚಮಚ ಬೇವಿನ ಪುಡಿಯನ್ನು ಹಾಕಿ ಸರಿ ಮಿಕ್ಸ್ ಮಾಡಿದ ನಂತರ ಯಾವುದೇ ತಟ್ಟೆಯ ಮೇಲೆ ಹಾಕಿ ಇಡಿರಿ. ತಣಿದ ನಂತರ ಸಾಬುನನ್ನು ಬಳಸಿ. ಇದರಿಂದ ಚರ್ಮದ ಸಮಸ್ಯೆಗಳನ್ನು ತಡೆಯಬಹುದು.







