ಬಿರಿಯಾನಿ ಊಟ ಮಾಡಿಕೊಂಡು ಮೇಕೆದಾಟು ಪಾದಯಾತ್ರೆ ಎಂದು ವ್ಯಂಗ್ಯ
ಬೆಂಗಳೂರು: ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಡಿಸೆಂಬರ್ ಅಂತ್ಯದೊಳಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪತನಗೊಳ್ಳುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ, ಮಂಡ್ಯ ಜೆಡಿಎಸ್ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ– ಜೆಡಿಎಸ್ ಮುಖಂಡರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಪೈಪೋಟಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಬಿಜೆಪಿ–ಜೆಡಿಎಸ್ ನಡುವೆ ಸಹಜ ಮೈತ್ರಿಯಾಗಿದ್ದು 2004ರಲ್ಲಿ. ಆಗ ನಾವು ಒಂದಾಗಿ ನೀಡಿದ 20 ತಿಂಗಳ ಆಡಳಿತವನ್ನು ಜನ ಇಂದಿಗೂ ನೆನೆಯುತ್ತಾರೆ ಎಂದು ಹೇಳಿದರು.
ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲಿಲ್ಲವೆಂದು ಆರೋಪಿಸಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ನನ್ನದಲ್ಲದ ತಪ್ಪಿಗಾಗಿ ಬಲಿಪಶು ಮಾಡಲಾಯಿತು. ಅಂದಿನಿಂದ ಇಂದಿನವರೆಗೆ 17 ವರ್ಷ ವನವಾಸ ಮಾಡಿದ್ದೇನೆ. ಪಕ್ಷ ಕಟ್ಟಲು ಒಬ್ಬಂಟಿಯಾಗಿ ಹೋರಾಡಿದ್ದೇನೆ, ಆದರೆ ಯಶಸ್ವಿಯಾಗಲಿಲ್ಲ ಎಂದು ತಿಳಿಸಿದರು.
ಮೇಕೆದಾಟು ವಿಚಾರ ಹೇಳಿಕೊಂಡು ಮತ ಪಡೆಯುವ ದಾರಿದ್ರ್ಯ ಜೆಡಿಎಸ್ ಪಕ್ಷ ಹಾಗೂ ದೇವೇಗೌಡರಿಗೆ ಅಗತ್ಯವಿಲ್ಲ. ಬಿರಿಯಾನಿ ಊಟ ಮಾಡಿಕೊಂಡು ಪಾದಯಾತ್ರೆ ಮಾಡಿದ್ರೆ ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಲ್ಲ ಎಂದು ಛೇಡಿಸಿದರು.
ನಾವು ಅಧಿಕಾರದಲ್ಲಿದ್ದಾಗ ಮಂಡ್ಯ ಜಿಲ್ಲೆ ಹಸಿರಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ ಬಂದಿದೆ. ರೈತರ ಮನೆ ಹಾಳು ಮಾಡುತ್ತಿರೋರು ಕಾಂಗ್ರೆಸ್ ನವರು. ಜಿಲ್ಲೆಯಲ್ಲಿ ಬೆಳೆ ಬಿತ್ತನೆ ಮಾಡಬೇಡಿ ಎಂದ ಏಕೈಕ ನಾಯಕ ನನ್ನ ಹಳೇ ಸ್ನೇಹಿತ ಎಂದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಿರುದ್ದ ಕುಮಾರಸ್ವಾಮಿ ಹರಿಹಾಯ್ದರು.
ಪ್ರಸ್ತುತ ಎದುರಾಗಿರುವ ಲೋಕಸಭಾ ಚುನಾವಣೆ ಧರ್ಮಯುದ್ದವಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಯ ದುಡ್ಡಿಗೆ ಜಿಲ್ಲೆಯ ಮತದಾರರು ಬಲಿಯಾಗುವುದಿಲ್ಲ ಎಂಬ ನಂಬಿಕೆ ಇದ್ದು, ಮೈತ್ರಿ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಒಟ್ಟಾಗಿ ಚುನಾವಣಾ ಪ್ರಚಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು.





