ಮಳೆಗಾಲದಲ್ಲಿ ಅಡಿಕೆ, ತೆಂಗು, ಕಾಳುಮೆಣಸು ಬೆಳೆಗಳ ನಿರ್ವಹಣೆ – ತೋಟಗಾರಿಕೆ ಇಲಾಖೆ ಸಲಹೆ

ಉಡುಪಿ : ಜಿಲ್ಲೆಯಲ್ಲಿ ವಾರ್ಷಿಕ 4,500 ಮಿ.ಮೀ. ಗಿಂತಲೂ ಅಧಿಕ ಮಳೆಯಾಗುತ್ತಿದ್ದು, ಇಲ್ಲಿನ ಪ್ರಮುಖ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ಹಾಗೂ ಕಾಳುಮೆಣಸು ಬೆಳೆಗಳು ವಿಪರೀತ ಮಳೆಯಿಂದಾಗಿ ರೋಗ ಬಾಧೆಗೆ ತುತ್ತಾಗುವ ಸಾಧ್ಯತೆ ಇದೆ. ಅಸಮರ್ಪಕ ನಿರ್ವಹಣೆಯಿಂದಾಗಿ ಇಳುವರಿ ನಷ್ಟವಾಗುವುದಲ್ಲದೇ, ರೋಗಬಾಧೆ ಉಲ್ಬಣವಾಗಿ ಮರಗಳು ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆಯೂ ಇರುವುದರಿಂದ ತೋಟಗಾರಿಕೆ ಇಲಾಖೆ ಕೃಷಿಕರಿಗೆ ಸಲಹೆ ನೀಡಿದೆ.
ಮಳೆಗಾಲದಲ್ಲಿ ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಪೋಷಕಾಂಶಗಳ ಕೊರತೆ ಮತ್ತು ಸೂರ್ಯನ ಬೆಳಕಿನ ಕೊರತೆಯ ಕಾರಣಗಳಿಂದಾಗಿ ಅಡಿಕೆ ಕೊಳೆ ರೋಗ, ಕಾಳು ಮೆಣಸು ಸೊರಗು ರೋಗ ಹಾಗೂ ತೆಂಗಿನಲ್ಲಿ ಸುಳಿಕೊಳೆ ರೋಗ ಉಲ್ಬಣಿಸುವ ಸಾಧ್ಯತೆ ಇರುತ್ತದೆ.

ಅಡಿಕೆ ತೋಟದಲ್ಲಿ ಬಿದ್ದಿರುವ ರೋಗ ಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರುಗಳನ್ನು ಆರಿಸಿ ತೆಗೆದು ಸುಡಬೇಕು. ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು. ರೋಗವನ್ನು ಹತೋಟಿಯಲ್ಲಿಡಲು ಜೂನ್ ಮಾಹೆಯಿಂದ ಆಗಸ್ಟ್-ಸೆಪ್ಟೆಂಬರ್ ಮಾಹೆಯವರೆಗೆ 25 ರಿಂದ 30 ದಿನದ ಅಂತರದಲ್ಲಿ ಶೇ. 1 ರ ಬೋರ್ಡೋ ದ್ರಾವಣ ಅಥವಾ ಮ್ಯಾಂಡಿಪ್ರೋಪಾಮಿಡ್ (1 ಮಿ.ಲೀ. 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ) ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಸುಳಿ ಭಾಗಕ್ಕೆ ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಬೇಕು.
ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಸುಣ್ಣ, ಸಾವಯವ ಗೊಬ್ಬರ (ಪ್ರತಿ ಮರಕ್ಕೆ 10-12 ಕಿ.ಗ್ರಾಂ) ಮತ್ತು ರಾಸಾಯನಿಕ ಗೊಬ್ಬರಗಳನ್ನು (ಪ್ರತಿ ಮರಕ್ಕೆ) 100:40:140 ಗ್ರಾಂ ಸಾ.ರಂ.ಪೊ) ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಮಣ್ಣಿಗೆ ಸೇರಿಸಬೇಕು. ಈಗಾಗಲೇ ಶಿಫಾರಸ್ಸು ಮಾಡಿದ ಶೇ.50 ರಷ್ಟು ರಸಗೊಬ್ಬರಗಳನ್ನು ಮುಂಗಾರಿನ ಮೊದಲು ಕೊಟ್ಟಿದ್ದರೆ ಈಗ ಉಳಿದ ಅರ್ಧ ಭಾಗವನ್ನು ಕೊಟ್ಟರೆ ಸಾಕಾಗುತ್ತದೆ. ಇದೇ ಅವಧಿಯಲ್ಲಿ ಬೇರುಗಳ ವಲಯವನ್ನು ಶೇ. 10 ರ ಬೋರ್ಡೋ ದ್ರಾವಣ ಅಥವಾ ಶೇ. 0.3 ರ ಅಕೋಮಿನ್/ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ನೆನೆಸುವುದು. ಪ್ರತಿ ಮರಕ್ಕೆ ಸುಮಾರು 5 ಲೀ. ದ್ರಾವಣ ಬೇಕಾಗುವುದು.

ತುಂತುರು ಮಳೆ ಇರುವಾಗ ಬೋರ್ಡೋ ದ್ರಾವಣವನ್ನು ಹಾಗೂ ಶುಷ್ಕ ವಾತಾವರಣ ಇದ್ದಾಗ ಬೋರ್ಡೋ ದ್ರಾವಣಕ್ಕೆ ಬದಲಿ ಶಿಲೀಂದ್ರ ನಾಶಕಗಳಾದ ಮ್ಯಾಂಡಿಪ್ರೋಪಾಮಿಡ್ (1 ಮಿ.ಲೀ. 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ) ಅಥವಾ ಮೆಟಲಾಕ್ಸಿಲ್ ಎಂ.ಝಡ್ (2 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ) ಔಷಧಗಳನ್ನು ಸೂಕ್ತ ಅಂಟಿನೊಂದಿಗೆ ಸಿಂಪರಣೆಗೆ ಬಳಸಬಹುದು.

ಮಳೆಗಾಲದಲ್ಲಿ ಅಡಿಕೆ ಅಲ್ಲದೆ ತೆಂಗು ಬೆಳೆಗೂ ಕೊಳೆರೋಗ ಹಾಗೂ ಕಾಳುಮೆಣಸು ಬೆಳೆಗೆ ಶೀಘ್ರ ಸೊರಗು ರೋಗ ಬಾಧಿಸುವ ಸಾಧ್ಯತೆ ಇದ್ದು, ಅಡಿಕೆಗೆ ಶಿಫಾರಸ್ಸು ಮಾಡಿದ ಸಿಂಪರಣೆಯನ್ನು ರೋಗ ಬಾಧಿತ ತೆಂಗಿನ ಮರಗಳಿಗೆ ಹಾಗೂ ಮುಂಜಾಗೃತ ಕ್ರಮವಾಗಿ ಕಾಳುಮೆಣಸು ಬಳ್ಳಿಗಳಿಗೂ ಸಿಂಪರಣೆ ಮಾಡುವುದರಿಂದ ರೋಗ ಬಾಧೆಯನ್ನು ನಿಯಂತ್ರಿಸಬಹುದಾಗಿದೆ.

ಮುಂಜಾಗ್ರತೆ ವಹಿಸಿ
ಮಳೆಗಾಲದಲ್ಲಿ ಅಡಿಕೆ, ತೆಂಗು, ರಬ್ಬರ್ ಮತ್ತು ಇತರೆ ತೋಟಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗುವ ಸಾಧ್ಯತೆ ಇದ್ದು, ಇದರಿಂದ ಡೆಂಗ್ಯೂ ಮತ್ತು ಮಲೇರಿಯಾದಂತ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ರೈತರು ಈ ಬಗ್ಗೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು.

ತೋಟಗಳಲ್ಲಿ ನೀರು ನಿಲ್ಲದಂತೆ ಸೂಕ್ತ ಬಸಿಕಾಲುವೆಗಳನ್ನು ನಿರ್ಮಾಣ ಮಾಡುವುದು ಹಾಗೂ ಬಸಿಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಅಡಿಕೆ ತೋಟಗಳಲ್ಲಿ ಗರಿಗಳು ಬಿದ್ದು, ಗರಿಗಳಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆ ಇದ್ದು, ಗರಿಗಳನ್ನು ಕಾಲಕಾಲಕ್ಕೆ ಸಂಗ್ರಹಿಸಿ, ವಿಲೇವಾರಿ ಮಾಡಬೇಕು. ರಬ್ಬರ್ ತೋಟಗಳಲ್ಲಿ ರಬ್ಬರ್ ಹಾಲು ಸಂಗ್ರಹಣೆ ಮಾಡಲು ಉಪಯೋಗಿಸುವ ಪರಿಕರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು/ಬಟ್ಟಲುಗಳನ್ನು ನೀರು ನಿಲ್ಲದಂತೆ ಕೆಳಗೆ ತಿರುಗಿಸಬೇಕು. ರೈತರು/ಕೃಷಿ ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸೊಳ್ಳೆಗಳು ಕಚ್ಚದಂತೆ ಅಗತ್ಯ ಮನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಿಡಿಲು/ಗಾಳಿಯಿಂದ ಹಾನಿಯಾಗದಂತೆ ಈಗಾಗಲೇ ಜಿಲ್ಲಾಡಳಿತದಿಂದ ಹೊರಡಿಸಿದ ಮಾರ್ಗಸೂಚಿಯನುಸಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.















































\















error: Content is protected !!
Scroll to Top