ಕಣಜಾರು ಗ್ರಾಮಸ್ಥರಿಂದ ಆರ್ಟಿಓಗೆ ದೂರು
ಕಾರ್ಕಳ : ಉಡುಪಿ ಕುಕ್ಕಿಕಟ್ಟೆ- ಮೂಡುಬೆಳ್ಳೆ – ಪಳ್ಳಿ – ಬೈಲೂರು – ಜೋಡುರಸ್ತೆ – ಕಾರ್ಕಳ ಮಾರ್ಗವಾಗಿ ಚಲಿಸುವ ಖಾಸಗಿ ಬಸ್ಸಿನಲ್ಲಿ ಇಲಾಖೆಯ ದರಪಟ್ಟಿಗಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸಿರುವ ನೀರೆ ಕಣಜಾರು ಬೈಲೂರು ಗ್ರಾಮಸ್ಥರು ದರಪಟ್ಟಿಯನ್ನು ಪರಿಶೀಲಿಸುವಂತೆ ಆರ್‌ಟಿಓ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಕಣಜಾರಿನಿಂದ ಜೋಡುರಸ್ತೆಗೆ 12.4 ಕೀ. ಮೀ. ಇದ್ದು ಒಬ್ಬರಿಗೆ 31 ರೂ. ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನೀರೆ ಕಣಂಜಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಸಚ್ಚಿದಾನಂದ ಪ್ರಭು ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಯವರಲ್ಲಿ ವಿಚಾರಿಸಿದಾಗ ಕಣಜಾರಿನಿಂದ ಜೋಡುರಸ್ತೆವರೆಗೆ ಟಿಕೆಟ್ ದರ 19 ರಿಂದ 20 ರೂ. ಇದ್ದು ಡೀಸೆಲ್ ಹಾಗೂ ಬಸ್ಸಿನ ಬಿಡಿ ಭಾಗಗಳ ದರ ಹೆಚ್ಚಾಗಿರುವುರಿಂದ ಬಸ್ ಮಾಲಕರ ಸಂಘವು ಟಿಕೆಟ್ ದರವನ್ನು ಏರಿಸಿದೆ. ಅದರಂತೆ ಮೂರು ರೂಪಾಯಿಯಷ್ಟು ಹೆಚ್ಚಳವಾಗುತ್ತದೆ. ಆದರೆ, ದರಪಟ್ಟಿಗಿಂತಲೂ ಹೆಚ್ಚು ಹಣವನ್ನು ಖಾಸಗಿ ಬಸ್ಸಿನ ನಿರ್ವಾಹಕರು ವಸೂಲಿ ಮಾಡುತ್ತಿದ್ದು, ಶಾಲಾ ಮಕ್ಕಳಿಗೆ, ದಿನನಿತ್ಯ ಪ್ರಯಾಣಿಕರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ನಿರ್ವಾಹಕರು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಆರ್‌ಟಿಓ ಇಲಾಖೆ ಪರಿಶೀಲನೆ ನಡೆಸಿ ಹೆಚ್ಚುವರಿ ಟಿಕೆಟ್ ದರವನ್ನು ತಡೆಹಿಡಿಯುವಂತೆ ಗ್ರಾಮಸ್ಥರು ವಿನಂತಿಸಿದ್ದಾರೆ.
























