ಸಂಸ್ಥೆಗಳ ಮೂಲ ಹುಡುಕಲು ತೋರುವ ಆಸಕ್ತಿಯನ್ನು ಬುರುಡೆ ಗ್ಯಾಂಗ್ ನ ಆರ್ಥಿಕ ಷಡ್ಯಂತ್ರದ ಪತ್ತೆಗೆ ಬಳಸಲಿ – ಪ್ರಿಯಾಂಕ್ ಖರ್ಗೆಗೆ ಸವಾಲು
ಬೆಂಗಳೂರು : ಧರ್ಮಸ್ಥಳದ ಪಾವಿತ್ರ್ಯ ಕೆಡಿಸಲು ನಡೆದ ಷಡ್ಯಂತ್ರಕ್ಕಾಗಿ 200 ಕೋಟಿ ರೂ. ಬಳಕೆಯಾಗಿದೆ ಎಂದು ಈ ಸಂಚಿನಲ್ಲಿ ಭಾಗಿಯಾಗಿದ್ದ ಚಿನ್ನಯ್ಯ ಹೈ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಧರ್ಮಸ್ಥಳದ ಘನತೆಗೆ ಕುಂದುಂಟು ಮಾಡಲು ಈ ಹಣ ಕೇರಳದಿಂದ ಬಂದಿದೆ ಎಂದು ಹೇಳಿಕೆ ನೀಡಿದ್ದಾನೆ. ನಮ್ಮ ರಾಜ್ಯದ ಧಾರ್ಮಿಕ ಕೇಂದ್ರವೊಂದರ ಮೇಲೆ ಅನ್ಯರಾಜ್ಯದಲ್ಲಿ ಸಂಚು ಹೆಣೆಯಲಾಗಿದೆ ಎಂದರೆ ಈ ಬುರುಡೆ ಗ್ಯಾಂಗ್‌ನ ಆಳ-ಅಗಲ ಸಣ್ಣದಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬಯಲಾಗಲೇ ಬೇಕು
ಧರ್ಮಸ್ಥಳವನ್ನು ಗುರಿಯಾಗಿಸಿ ನಡೆದ ದಾಳಿ ಭವಿಷ್ಯದಲ್ಲಿ ಇನ್ನಿತರ ಧಾರ್ಮಿಕ ಕ್ಷೇತ್ರಗಳ ಮೇಲೆ ಆಗುವುದಿಲ್ಲ ಎಂಬುದಕ್ಕೆ ಸಾಧ್ಯವೇ ? ಹೀಗಾಗಿ ಈ ಪಿತೂರಿಯ ಹಿಂದೆ ಇರುವ ವ್ಯಕ್ತಿಗಳು ಹಾಗೂ ಧರ್ಮದ್ರೋಹಿಗಳು ಯಾರು ? ಇದರ ಉದ್ದೇಶ ಏನು ? ಯಾರ ಯಾರಿಂದ ಹಣ ಸಂಗ್ರಹಿಸಲಾಗಿತ್ತು ಎಂಬ ವಿಚಾರ ಬಯಲಾಗಲೇಬೇಕು. ವಿಧಾನಸಭೆಯಲ್ಲಿ ನಿಂತು ಧರ್ಮಸ್ಥಳದ ಜತೆ ನಾವಿದ್ದೇವೆ. ನಾನು ಧರ್ಮಸ್ಥಳದ ಭಕ್ತ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹಿಂದೆ ಹೇಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಈಗ ಈ ಕೇರಳ ಲಿಂಕ್ ನ್ನು ಹೇಗೆ ಭೇದಿಸುತ್ತೀರಿ ? ಇದೊಂದು ಅಂತಾರಾಜ್ಯ ಸಂಚಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುತ್ತೀರೋ ? ಅಥವಾ ಹಿಂದು ವಿರೋಧಿ ಶಕ್ತಿಗಳ ಒತ್ತಡಕ್ಕೆ ಮಣಿದು ಜಾಣ ಮೌನಕ್ಕೆ ಶರಣಾಗುತ್ತೀರೋ ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ಇನ್ನು ಧರ್ಮಸ್ಥಳದ ವಿರುದ್ಧ ಯಾವ ಪಿತೂರಿಯೂ ನಡೆದೇ ಇಲ್ಲ ಎಂಬಂತೆ ಮಾತನಾಡಿದ “ದಕ್ಷ ಗೃಹ” ಸಚಿವ ಪ್ರಿಯಾಂಕ ಖರ್ಗೆ ಅವರು ಈಗ ಎಲ್ಲಿದ್ದಾರೆ ? ಎಂದು ಲೇವಡಿ ಮಾಡಿದ ಸುನಿಲ್ ಕುಮಾರ್ ಬೇರೆ ಬೇರೆ ಸಂಸ್ಥೆಗಳ ಮೂಲ ಹುಡುಕಲು ತೋರುವ ಆಸಕ್ತಿಯನ್ನು ಬುರುಡೆ ಗ್ಯಾಂಗ್ ನ ಆರ್ಥಿಕ ಷಡ್ಯಂತ್ರದ ಕೇಂದ್ರ ಪತ್ತೆ ಮಾಡುವುದಕ್ಕೂ ತೋರಿಸಬಹುದಲ್ಲ ಎಂದು ಸುನಿಲ್ ಕುಮಾರ್ ಫೇಸ್‌ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.


































