ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜಾತಿ ನಿಂದನೆ ಆರೋಪ – ಬಂಧನಕ್ಕೊಳಗಾಗಿದ್ದ ಸುಧೀರ್‌ ಬಂಗೇರ ಬಿಡುಗಡೆ

ಕಾರ್ಕಳ : ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜಾತಿ ನಿಂದನೆ, ಅವಹೇಳನ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಕಾರ್ಕಳ ಕೆರ್ವಾಶೆ ನಲ್ಕೆದಬೆಟ್ಟು ನಿವಾಸಿ ಸುಧೀರ್‌ ಬಂಗೇರ ಒಂದೇ ವಾರದಲ್ಲಿ ಬಿಡುಗಡೆಯಾಗಿದ್ದಾರೆ.

ಪ್ರಕರಣ
ಕಾರ್ಕಳದ ಸುದ್ದಿವಾಹಿನಿಯ ಫೇಸ್‌ಬುಕ್‌ ಖಾತೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪೋಟೊ ಹಾಕಿ ಅದರಲ್ಲಿ ‘ಆರೆಸ್ಸೆಸ್‌ ಇನ್ನು ಎರಡು ವರ್ಷಗಳ ಅವಧಿ ಕೋಮುವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ’ ಎಂಬ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಯನ್ನು ಫೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ಸುಧೀರ್ ಬಂಗೇರ ಜೂ. 6ರಂದು ಕಮೆಂಟ್ ಹಾಕಿದ್ದರು. ಈ ಬಗ್ಗೆ ನಿಟ್ಟೆ ಅತ್ತೂರಿನ ಸುರೇಶ ಚೇತನಹಳ್ಳಿ ಎಂಬವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬೇರೆ ಬೇರೆ ಗುಂಪುಗಳ ನಡುವೆ ವೈರತ್ವ, ದ್ವೇಷ ಹಾಗೂ ಅವಮಾನ ಮೂಡಿಸುವ ಕಮೆಂಟ್ ಬರೆದು ಸಾಮಾಜಿಕ ಶಾಂತಿಯನ್ನು ಕದಡುವ ಉದ್ದೇಶದಿಂದ ರಾಜ್ಯದ ಗೃಹ ಮಂತ್ರಿಯವರು ದಲಿತ ಜಾತಿಗೆ ಸೇರಿದವರೆಂದು ತಿಳಿದರೂ ಅವರ ಜಾತಿಗೆ ಅವಹೇಳನ ಮಾಡುವ ರೀತಿಯಲ್ಲಿ ಸುಧೀರ ಬಂಗೇರ ಕಮೆಂಟ್ ಹಾಕಿರುತ್ತಾರೆ. ದಲಿತ ಮಂತ್ರಿಯವರಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಲಾಗಿದೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದರು. ಸುಧೀರ್‌ ವಿರುದ್ಧ ಅಪರಾಧ ಕ್ರಮಾಂಕ 82/2026 ಕಲಂ. 351(3), 196, 353(2)BNS ಹಾಗೂ 3(1) (r) (u) SC/ST Act ರಂತೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಕರಣದ ಆರೋಪಿ ಸುಧೀರ ಬಂಗೇರನನ್ನು ಆತನ ಮಿಯ್ಯಾರಿನ ಮನೆಯಿಂದ ಜೂ. 7ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.

ಬಿಡುಗಡೆ
ಸುಧೀರ್ ಬಂಗೇರ ಜೂ. 15ರಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ್ ಹೆಗ್ಡೆ ವಕಾಲತ್ತು ಮಂಡಿಸಿದ್ದರು. ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ನಿಟ್ಟೆ, ಕೆರ್ವಾಶೆಯ ಪ್ರಮುಖರಾದ ಸುನಿಲ್ ಶೆಟ್ಟಿ, ಸದಾನಂದ ಸಾಲ್ಯಾನ್, ಅಕ್ಷಯ್ ಜೈನ್ ಹಾಗೂ ಕುಲಾಲ ಸಮಾಜದ ಸುರೇಂದ್ರ ಕುಲಾಲ್, ದಿವಾಕರ್ ಬಂಗೇರ, ಕಿರಣ್ ಮತ್ತಿತರರು ಬಿಡುಗಡೆಗಾಗಿ ಸಹಕರಿಸಿದ್ದರು.

ಕೇಕ್‌ ಕತ್ತರಿಸಿ ಸಂಭ್ರಮ
ಸುಧೀರ್‌ ಬಂಗೇರ ಬಂಧನ ದಿನ ಅವರ ಮಗನ ಹುಟ್ಟುಹಬ್ಬವಿದ್ದು, ಸಂಭ್ರಮಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಘಟನೆಯಿಂದಾಗಿ ಅಂದು ಮಗನ ಹುಟ್ಟುಹಬ್ಬ ಆಚರಣೆ ನಿಂತು ಹೋಗಿತ್ತು. ನಿನ್ನೆ ಬಿಡುಗಡೆಯಾಗಿ ಮನೆಗೆ ಬಂದ ತಕ್ಷಣ ಕೇಕ್‌ ಕತ್ತರಿಸಿ ಮಗನ ಹುಟ್ಟುಹಬ್ಬ ಆಚರಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಕುಲಾಲ ಸಮುದಾಯದ ಪ್ರಮುಖರಿದ್ದರು.

















































error: Content is protected !!
Scroll to Top