ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಗುರು ನಮನ – ಪ್ರತಿಭಾ ಪುರಸ್ಕಾರ

ಹೆಬ್ರಿ : ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ನಿರಂತರವಾಗಿ ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ಈ ಮೂಲಕ ರಾಜ್ಯದಲ್ಲೇ ಉಡುಪಿ ಅದ್ವಿತೀಯ ಸಾಧನೆ ತೋರುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಹರ್ಷ ವ್ಯಕ್ತಪಡಿಸಿದರು.
ಅವರು ಜೂ. 15ರಂದು ಮುನಿಯಾಲು ಶ್ರೀ ಪದ್ಮಾವತಿ ಕಲ್ಯಾಣ ಮಂದಿರದಲ್ಲಿ ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 2025-26ನೇ ಶೈಕ್ಷಣಿಕ ಸಾಲಿನ ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ, ಗುರುನಮನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಶೈಕ್ಷಣಿಕ ವಾತಾವರಣ ಉತ್ಕೃಷ್ಟವಾಗಿದೆ. ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಉಪನ್ಯಾಸಕರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದರು.

ಶೃಂಗೇರಿ ಶಾರದಾ ದೇವಸ್ಥಾನದ ಹಣಕಾಸು ವಿಭಾಗದ ಅಧಿಕಾರಿ ಸತೀಶ್ ಭಟ್ ಮಾತನಾಡಿ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಆಯ್ದ ಶಾಲೆಗಳಿಗೆ ಶೃಂಗೇರಿ ದೇವಸ್ಥಾನದಿಂದ ಅನ್ನದಾಸೋಹ ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಪ್ರತಿದಿನ 20 ಸಾವಿರ ವಿದ್ಯಾರ್ಥಿಗಳು ಅನ್ನಪ್ರಸಾದ ಸ್ವೀಕರಿಸುವಂತಾಗಿದೆ ಎಂದರು.

ಮುನಿಯಾಲಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಕಳೆದ ಬಾರಿ ಎಂಸಿಎಫ್‌ನ ಸಿಎಸ್‌ಆರ್‌ ನಿಧಿಯಡಿ ಮುನಿಯಾಲು ಕಾಲೇಜಿಗೆ 8 ಕಂಪ್ಯೂಟರ್‌ ಒದಗಿಸಲಾಗಿದ್ದು, ಅವುಗಳು ಸಮರ್ಪಕವಾಗಿ ಬಳಕೆಯಾಗುತ್ತಿದೆ. ಹೀಗಾಗಿ ನಮ್ಮ ಸಂಸ್ಥೆಯ ಪರಿಕಲ್ಪನೆ ಈಡೇರಿದಂತಾಗಿದ್ದು, ಮುಂದಿನ ದಿನಗಳಲ್ಲೂ ಮುನಿಯಾಲು ಕಾಲೇಜಿಗೆ ಹೆಚ್ಚಿನ ನೆರವು ದೊರೆಯುವಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆಯಿತ್ತರು.
ಕೀರ್ತನ್‌ ಕುಮಾರ್‌
ಪಿಪಿಎಲ್‌ (ಎಂಸಿಎಫ್‌) ಜಂಟಿ ಪ್ರಧಾನ ಪ್ರಬಂಧಕ

ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಮುನಿಯಾಲು ಕಾಲೇಜಿನೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದಾರೆ. ಪ್ರಸ್ತುತ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೂ ಉನ್ನತ ಸ್ಥಾನಕ್ಕೇರಿ ಮುಂದಿನ ದಿನಗಳಲ್ಲಿ ಕಾಲೇಜಿನ ಅಭಿವೃದ್ಧಿಗಾಗಿ ಕೈಜೋಡಿಸಬೇಕೆಂದರು.
ಉದಯ ಶೆಟ್ಟಿ ಮುನಿಯಾಲು
ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ

ನಮ್ಮ ಬ್ಯಾಚ್‌ನಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಮುನಿಯಾಲು ಕಾಲೇಜು ಕುರಿತು ವಿಶೇಷ ಕಾಳಜಿ ಹೊಂದಿ ಕಾಲೇಜಿನ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ, ಕ್ರೀಡೆ ಮತ್ತು ಕಲೆಯಲ್ಲೂ ತೊಡಗಿಸಿಕೊಂಡು ಸಾಧನೆ ತೋರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗಿರೀಶ್ ಶೆಟ್ಟಿ ತೆಳ್ಳಾರು
ಹಿರಿಯ ವಿದ್ಯಾರ್ಥಿ, ಮುಂಬೈ ಉದ್ಯಮಿ

ಡಿಡಿಪಿಯು ಮಾರುತಿ, ಗರಿಷ್ಠ ಅಂಕ ಗಳಿಸಿದ ಕಾಲೇಜಿನ 60 ವಿದ್ಯಾರ್ಥಿಗಳಿಗೆ, ‌ಎನ್ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ 8 ವಿದ್ಯಾರ್ಥಿಗಳಗೆ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ವಿಷಯಗಳಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಂಸ್ಥೆಯಿಂದ ವರ್ಗಾವಣೆ ಹೊಂದಿರುವ ಪ್ರೌಢಶಾಲಾ ಶಿಕ್ಷಕ ಮಂಜುನಾಥ್ ಹಾಗೂ ಸುಧೀಂದ್ರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಿವೃತ್ತ ಯೋಧ ಆನಂದ ಕಬ್ಬಿನಾಲೆ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಸುಧಾಕರ್, ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಶೆಟ್ಟಿ, ಪದವಿ ಪೂರ್ವ ವಿಭಾಗದ ವಿದ್ಯಾರ್ಥಿ ನಾಯಕ ಪ್ರಣೀತ್ ಶೆಟ್ಟಿಗಾರ್, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಸಾಗರ್ ಶೆಟ್ಟಿ, ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ನಾಯಕಿ ಸ್ತುತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷ ಹರೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಬೇಬಿ ಶೆಟ್ಟಿ ಕೆ. ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕ ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಉಪ ಪ್ರಾಂಶುಪಾಲ ರವೀಂದ್ರ ರಾವ್‌ ವಂದಿಸಿದರು.





































error: Content is protected !!
Scroll to Top